ನವದೆಹಲಿ: ದಶಕಗಳಿಂದ ವಿವಿಧ ಸ್ವರೂಪಗಳ ಭಯೋತ್ಪಾದನೆ ಮೂಲಕ ಭಾರತವನ್ನು ವಿಚಲಿತಗೊಳಿಸಲು ಯತ್ನಿಸಲಾಗಿದೆ. ಆದರೆ ಭಾರತ ಅವೆಲ್ಲವನ್ನೂ ಧೈರ್ಯದಿಂದ ಎದುರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನವೆಂಬರ್ 18) ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತ ಮೂರನೇ “ನೋ ಮನಿ ಫಾರ್ ಟೆರರ್” ಎಂಬ ಸಚಿವರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ:ಬಂಟ್ವಾಳ: ಅಪ್ರಾಪ್ತ ಮಗಳ ಮೇಲೆ ತಂದೆಯಿಂದ ಅತ್ಯಾಚಾರ; ಆರೋಪಿ ಬಂಧನ
ರಾಷ್ಟ್ರರಾಜಧಾನಿಯಲ್ಲಿ ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತ ಸಮಾವೇಶ ನಡೆಯುತ್ತಿದ್ದು, ಭಯೋತ್ಪಾದನೆಯನ್ನು ಜಾಗತಿಕವಾಗಿ ಗಂಭೀರವಾಗಿ ಪರಿಗಣಿಸುವ ಮೊದಲು ನಮ್ಮ ದೇಶ ಹಲವಾರು ಭೀಕರ ಉಗ್ರ ಕೃತ್ಯಗಳನ್ನು ಎದುರಿಸಿತ್ತು. ಆದರೆ ಇವೆಲ್ಲವನ್ನೂ ಭಾರತ ಸಮರ್ಥವಾಗಿ ಎದುರಿಸಿರುವುದಾಗಿ ಹೇಳಿದರು.
ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯುವಂತೆ ಕರೆ ನೀಡಿರುವ ಪ್ರಧಾನಿ ಮೋದಿ, ಇದಕ್ಕೆ ದೊಡ್ಡ, ಪೂರ್ವಭಾವಿ ಹಾಗೂ ವ್ಯವಸ್ಥಿತ ಪ್ರತಿಕ್ರಿಯೆಯ ಅಗತ್ಯವಿದೆ. ಒಂದು ವೇಳೆ ನಮಗೆ ನಮ್ಮ ನಾಗರಿಕರ ಸುರಕ್ಷಿತವಾಗಿರಬೇಕೆಂದು ಬಯಸುವುದಾದರೆ, ನಮ್ಮ ಮನೆಬಾಗಿಲವರೆಗೂ ಭಯೋತ್ಪಾದನೆ ಬರುವವರೆಗೂ ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಾವು ಭಯೋತ್ಪಾದನೆಯನ್ನು ಮಟ್ಟಹಾಕಬೇಕು, ಜೊತೆಗೆ ಭಯೋತ್ಪಾದನಾ ಜಾಲವನ್ನು ಬೇರುಸಹಿತ ಕಿತ್ತೊಗೆಯುವ ಮೂಲಕ ಅವರ ಆರ್ಥಿಕತೆಯ ಮೇಲೆ ಹೊಡೆತ ನೀಡಬೇಕು ಎಂದು ಪ್ರಧಾನಿ ಹೇಳಿದರು.