ಪ್ರಕೃತಿ ಇದ್ದ ಹಾಗೆ ಒಗ್ಗೂಡಿಕೊಳ್ಳುವುದು ನಮ್ಮ ಧರ್ಮ. ಆದರೆ ಇಂದು ಬುದ್ಧಿಜೀವಿಗಳು ಎನಿಸಿಕೊಂಡ ನಾವು ಪ್ರಕೃತಿಯನ್ನೇ ನಮ್ಮ ದಾರಿಗೆ ತಿರುಗಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದೇವೆ. ಹೊತ್ತ ಭೂಮಿಗೆ ರಾಸಾಯನಿಕ ರುಚಿಯನ್ನು ಉಣಿಸಿದೆವು; ಪ್ರಕೃತಿಯ ಚೊಚ್ಚಲ ಮಕ್ಕಳಾದ ರೈತರಿಗೂ ಆಧುನಿಕತೆಯ ಹಣೆಪಟ್ಟಿ ಕಟ್ಟಿಬಿಟ್ಟೆವು. ಅತಿ ಲಾಭದ ಮೋಹದ ಮಾಯಾಲೋಕಕ್ಕೆ ದೂಡಿಬಿಟ್ಟೆವು.
ಅಷ್ಟು ಸಾಲದೆಂದು ಕಂಡರೂ ಕರಳು ಕರಗುವ ತಾಯಿರೂಪಿ ಕಾಮಧೇನುವಿನ ಎದೆಹಾಲಿಗೂ ಯಂತ್ರಗಳ ಜೋಡಿಸಿಬಿಟ್ಟೆವು. ಮನು ಷ್ಯರೂಪಿ ರಾಕ್ಷಸರಲ್ಲವೆ ನಾವು? ತಿಳಿದು ತಿಳಿದೆಯೋ ನಾವೇ ತೋಡಿದ ಬಾವಿಗೆ ಬಿಳುವ ಮೂರ್ಖ ಪ್ರಾಣಿಗಳು ನಾವು. ನೇಗಿಲ ಕಿತ್ತು ಟ್ರಾಕ್ಟರ್ ತಂದೆವು. ಫಲದ ಫಲವತತ್ತೆಯ ಎರೆಹುಳಗಳ ಹುಟ್ಟು ಅಡಗಿಸಿದೆವು.
ದೇಹದ ತೂಕಕ್ಕಿಂತ ಹತ್ತುಪಟ್ಟು ಹೆಚ್ಚು ತೂಕ ಹೊರುವ ಪುಟಾಣಿ ಇರುವೆಗಳ ಗೂಡಿಗೆ ನಾವೆ ಮಣ್ಣು ಎರಚುತ್ತೇವೆ. ಅಪ್ಪಿ ತಪ್ಪಿ ನಾಲ್ಕು ಕಚ್ಚಿದರು , ಬೈಗುಳದ ಸರಮಾಲೆ ಇಳಿಸುತ್ತೇವೆ. ಸಾಲದೆಂದು ವಿಷದ ಮಡಿಕೆ ತುರುಕುತ್ತೇವೆ. ತಿಂದು, ಕೊಂದು ಹಲವಾರು ಜೀವಿಗಳ ಇನ್ನು ಕಣ್ಣಬಿಡದ ಸಂತಾನವನ್ನೇ ಸಾವಿನ ಮನೆಗೆ ದೂಡಿದ್ದೇವೆ. ಅವನತಿಯ ಹಣೆಬರಹ ನಾವೇ ಗೀಚಿದ್ದೇವೆ. ಇಷ್ಟು ಸಾಲವೆಂದು ದೇಶವನ್ನೇ ಕ್ಷಣಮಾತ್ರದಲ್ಲಿ ಇಲ್ಲವಾಗಿಸುವ ಬಾಂಬ್‌ಗಳನ್ನೇ ತಯಾರಿಸಿದೆವು, ರಕ್ತದೋಕುಳಿ ಹರಿಸಿದೆವು.
ಶಾಶ್ವತವಲ್ಲ ಎಂದು ತಿಳಿದರೂ ಆಸ್ತಿ ಮಾಡಿಟ್ಟು ಹೋಗುತ್ತೇವೆ. ಇರುವುದರಲ್ಲಿ ಖುಷಿ ಕಾಣದೆ, ಮನುಜನ ಅಸ್ತಿತ್ವ ಎಲ್ಲೆಡೆಯೂ ಮೂಡಿಸಲೆಂದು ಗ್ರಹಗಳಿಗೂ ರಾಕೆಟ್ ಉಡಾಯಿಸಿದೆವು. ಸಕಲ ಜೀವ ಸಂಕುಲ ಹಾತೊರೆದು ಕಾಯುತ್ತಿದೆ, ಇಂದಲ್ಲ ನಾಳೆಯಾದರೂ ನಾವು ಬದಲಾಗಬಹುದೆಂದು. ಇಂದು ಕೋವಿಡ್ ಮಹಾಮಾರಿ ಇಡೀ ಮನುಜ ಕುಲವನ್ನೇ ತತ್ತರಿಸುವಂತೆ ಮಾಡಿದೆ. ಆಡಂಬರದ ಜೀವನ, ಹಣ, ಆಸ್ತಿ ಯಾವುದು ಪ್ರಾಣಕ್ಕಿಂತ ದೊಡ್ಡದಲ್ಲ ಎಂದು ಸಾರಿ ಸಾರಿ ಹೇಳಿದೆ. ದಿನ ಬೆಳಗಾದರೆ ವಾಹನಗಳ ಹೊಗೆ ಬಿಟ್ಟೆವು, ಕಂಡ ಕಂಡಲ್ಲಿ ಕಸ ಎಸೆದೆವು. ಆದರೆ ಇಂದು ಪ್ರಕೃತಿ ಮತ್ತೆ ಮೊದಲ ಮಳೆಗೆ ಮೈತೊಳೆದು ನಿಂತಿದೆ. ಇದೇ ಪ್ರಕೃತಿಯ ನಿಜವಾದ ಶಕ್ತಿ. ನಾವು ಪ್ರಕೃತಿಯ ಒಂದು ಭಾಗವೇ ವಿನಾ ಪ್ರಕೃತಿ ನಮ್ಮ ಭಾಗವಲ್ಲ.
ಮೋಡದ ಮೇಲೆ ಹಾರುವ ವಿಮಾನ ಹುಡುಕಿದೆವು. ಪಾದಕ್ಕೆ ನೀರು ಸೋಕದೆ ನೀರ ಆಳ ತಿಳಿದೆವು, ಹೊರಗೆ ಕಾಣುವ ಕಾಯಿಲೆ ಬಿಡಿ, ಮನಸಿನ ಕಾಯಿಲೆಗೂ ಮದ್ದು ಹುಡುಕಿದೆವು. ಇಡೀ ದೇಶ ದೇಶವನ್ನೇ ಕ್ಷಣಮಾತ್ರದಲ್ಲಿ ದಹಿಸುವ ಬಾಂಬ್ ಹುಡುಕಿದೆವು. ಈಗ ಹೇಳಿ ಒಂದು ಗರಿಕೆ ಹುಲ್ಲನ್ನಾದರೂ ನಾವು ಸೃಷ್ಟಿಸಲು ಸಾಧ್ಯವಿದೆಯೆ? ಖಂಡಿತ ಇಲ್ಲ. ಸೃಷ್ಟಿಸುವ ಶಕ್ತಿ ಇಲ್ಲದ ಮೇಲೆ ನಮಗೆ ಸಾಯಿಸುವ ಹಕ್ಕು ಕೂಡ ಇಲ್ಲ. ಒಮ್ಮೆ ಮಾಡಿದ ತಪ್ಪುಗಳನ್ನು ಹಿಂದಿರುಗಿ ನೋಡಿ; ಕೊರಗಬೇಡಿ. ಕ್ಷಮೆ ಗುಣ ಪ್ರಕೃತಿಮಾತೆಗಿದೆ. ನಾವು ಬದಲಾಗಬೇಕಿದೆ.
ಶಿಲ್ಪಾ ಹೇರಂಜಾಲ್
ಭಂಡಾರ್ಕಾರ್ಸ್ ಪದವಿ ಕಾಲೇಜು, ಕುಂದಾಪುರ