Advertisement

ಎಳನೀರು: ಮೊದಲ ಬಾರಿ ರೈತರಿಗೆ ಬಂಪರ್‌ ದರ-36ರೂ.ಗೆ ಬೆಳೆಗಾರರಿಂದ ಖರೀದಿ

05:07 PM Oct 16, 2024 | Team Udayavani |

ಉದಯವಾಣಿ ಸಮಾಚಾರ
ಮಂಡ್ಯ: ತೆಂಗು ಬೆಳೆಯಲ್ಲಿ ಏರಿಳಿತವಾದ ಹಿನ್ನೆಲೆಯಲ್ಲಿ ಎಳನೀರು ಪೂರೈಕೆ ಕುಸಿತವಾಗಿದ್ದು ಇದರ ಪರಿಣಾಮ ಎಳನೀರಿನ ಬೆಲೆ ಗಗನಕ್ಕೇರಿದೆ. ಜತೆಗೆ ಮೊದಲ ಬಾರಿಗೆ ರೈತರಿಗೆ ಬಂಪರ್‌ ದರ ದೊರೆಯುತ್ತಿದೆ. ಕಳೆದ ಸಾಲಿನ ಭೀಕರ ಬರ ಹಾಗೂ ಹೆಚ್ಚು
ಬಿಸಿಲಿನಿಂದ ಕೂಡಿದ ವಾತಾವರಣದ ಹಿನ್ನೆಲೆಯಲ್ಲಿ ತೆಂಗಿನ ಬೆಳೆ ಮೇಲೆ ಸಾಕಷ್ಟು ಹಾನಿಯಾಗಿತ್ತು.

Advertisement

ಇದರಿಂದ ನೀರಿನ ಕೊರತೆ ಉಂಟಾಗಿ ಎಳನೀರು ಬೆಳೆ ಸಿಗದಂತಾಗಿದೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರವೂ ಹೆಚ್ಚಾಗಿದೆ. ಮಂಡ್ಯದಲ್ಲಿ ದಲ್ಲಾಳಿಗಳು ರೈತರಿಂದ 36 ರೂ.ಗೆ ಎಳನೀರು ಖರೀದಿಸುತ್ತಿದ್ದಾರೆ. ಈ ಹಿಂದೆ ಬೆಳೆಗಾರರಿಂದ
ದಲ್ಲಾಳಿಗಳು ಖರೀದಿಸುತ್ತಿರುವ ದರ 20 ರೂ. ಆಜುಬಾಜಿನಲ್ಲೇ ಇತ್ತು. ಇದೇ ಮೊದಲ ಬಾರಿ 33, 35 ಮತ್ತು 36 ರೂ. ಕೊಟ್ಟು ರೈತರಿಂದ ಎಳೆನೀರು ಖರೀದಿಸಲಾಗುತ್ತಿದೆ. ಇದು ಸದ್ಯದ ಮಟ್ಟಿಗೆ ದಾಖಲೆಯಾಗಿದೆ.

ಮಂಡ್ಯದಲ್ಲಿ ಸೋಮವಾರ ಒಂದು ಎಳನೀರಿಗೆ 43 ರೂ. ಇತ್ತು. ಉತ್ತಮ ಗುಣಮಟ್ಟದ ಎಳನೀರು 50 ರೂ. ಇದ್ದರೆ, ಸ್ವಲ್ಪ ಸಣ್ಣ ಗಾತ್ರವಿರುವ ಎಳನೀರಿಗೆ 35 ರೂ. ಇದೆ. ಅದರಂತೆ ಚುಕ್ಕೆ ಇರುವ ಎಳನೀರು 15ರಿಂದ 20 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಒಂದು ಎಳನೀರಿಗೆ 70 ರೂ. ಇದ್ದರೆ, ಹೊರ ರಾಜ್ಯಗಳಿಗೆ ಸರಬರಾಜಾಗುವ ಎಳನೀರು 100 ರೂ. ಗಡಿ ದಾಟಿದೆ.

ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಮದ್ದೂರು ಎಳನೀರು ಮಾರುಕಟ್ಟೆಯಲ್ಲೂ ಎಳನೀರು ಪೂರೈಕೆ ಇಳಿಕೆಯಾಗಿದೆ. ಎಳನೀರಿಗೆ ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಇರುವ ಎಳನೀರು ಕೊಯ್ಲು ಮಾಡಿ ಪೂರೈಸಲಾಗಿದೆ. ಆದರೂ ಬೇಡಿಕೆ ಮಾತ್ರ ನಿಂತಿಲ್ಲ.

ಹೊರ ರಾಜ್ಯಗಳಿಗೆ ಸರಬರಾಜು: ಜಿಲ್ಲೆಯ ಮದ್ದೂರು ಹಾಗೂ ಕೆ.ಆರ್‌.ಪೇಟೆ ಎಳನೀರು ಮಾರುಕಟ್ಟೆಯಿಂದ ದೇಶದ ದೆಹಲಿ, ಪಂಜಾಬ್‌, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ಬೇಡಿಕೆಗೆ ತಕ್ಕಂತೆ ಎಳನೀರು ಸಿಗುತ್ತಿಲ್ಲ. ಮಳೆಗಾಲವಿದ್ದರೂ ಎಳನೀರಿಗೆ ಬೇಡಿಕೆ ಕಡಿಮೆಯಾಗಿಲ್ಲ. ಮದ್ದೂರು ಹಾಗೂ ಕೆ.ಆರ್‌.ಪೇಟೆ ಎಳನೀರು ಮಾರುಕಟ್ಟೆಗಳಿಗೆ ಹೊರ ಜಿಲ್ಲೆಗಳಿಂದಲೂ ಎಳನೀರು ಬರುತ್ತಿದೆ. ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು ದಲ್ಲಾಳಿಗಳು ಪ್ರತಿದಿನ ರೈತರ ತೆಂಗಿನ ತೋಟಗಳಿಗೆ ಲಗ್ಗೆ ಇಡುತ್ತಿದ್ದಾರೆ. ಆದರೂ ಬೇಡಿಕೆ ತಕ್ಕಂತೆ ಪೂರೈಸಲಾಗುತ್ತಿಲ್ಲ.

Advertisement

ಇದರಿಂದ ದಲ್ಲಾಳಿಗಳು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮ ಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಎಳನೀರು ತಂದು ಹೊರ ರಾಜ್ಯಗಳಿಗೆ ಪೂರೈಸಲಾಗುತ್ತಿದೆ ಎಂದು ವರ್ತಕರೊಬ್ಬರು ತಿಳಿಸಿದರು.

ಡಿಸೆಂಬರ್‌ಗೆ ದರ ಇಳಿಕೆ?
ಕಳೆದ ಸಾಲಿನಲ್ಲಿ ಮಳೆ ಬಾರದೆ ಜಿಲ್ಲೆಯು ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಇದರಿಂದ ನೀರಿನ ಕೊರತೆ ಉಂಟಾಗಿ ಸಾಕಷ್ಟು ಬೆಳೆ ಒಣಗಿ ನಷ್ಟ ಎದುರಾಗಿತ್ತು.ಆಗ ಮಳೆ ಬಿದ್ದಿದ್ದರೆ ಉತ್ತಮ ಫಲ ಸಿಗುತ್ತಿತ್ತು. ಆದರೆ ಈಗ ಮಳೆ ಬೀಳುತ್ತಿದ್ದರೂ ತೆಂಗಿನ ಫಸಲು ಉತ್ತಮವಾಗಿಲ್ಲ. ಮುಂದಿನ ಡಿಸೆಂಬರ್‌ ವೇಳೆಗೆ ಹೆಚ್ಚು ಎಳನೀರು ಸಿಗಲಿದೆ ಎಂದು ರೈತರೊಬ್ಬರು ತಿಳಿಸಿದರು.

ಬೇಸಿಗೆ ಪರಿಣಾಮ ರೈತರ ತೆಂಗಿನ ತೋಟಗಳಲ್ಲಿ ಎಳನೀರು ಸಿಗುತ್ತಿಲ್ಲ. ಎಳನೀರಿಗೆ ಹೊರರಾಜ್ಯಗಳಲ್ಲೂ ಬೇಡಿಕೆ ಹೆಚ್ಚಿದ್ದರೂ ಅಪೇಕ್ಷೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಡಿಸೆಂಬರ್‌ ವೇಳೆಗೆ ಎಳನೀರು ಯಥೇಚ್ಛವಾಗಿ ಮಾರುಕಟ್ಟೆಗೆ ಬರಲಿದೆ. ಆಗ ದರ ಕಡಿಮೆಯಾಗಲಿದೆ.
●ರವಿ, ಚೌಡೇನಹಳ್ಳಿ, ಎಳನೀರು ವರ್ತಕ

*ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next