ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮನುಷ್ಯ ಪರಿಸರದ ನಾಶಕ್ಕೆ ನೇರ ಕಾರಣವಾಗುತ್ತಿದ್ದಾನೆ. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ ಎಂಬ ಪೂರ್ಣಚಂದ್ರ ತೇಜಸ್ವಿ ಅವರ ಮಾತಿನಂತೆ, ಮಾನವ ಪ್ರಕೃತಿ ಮತ್ತು ಪರಿಸರದ ಅವಿಭಾಜ್ಯ ಅಂಗವಾಗಿದ್ದಾನೆ. ಇವುಗಳ ನಾಶದಿಂದ ಮಾತ್ರವೇ ಮಾನವ ಅಭಿವೃದ್ಧಿ ಸಾಧ್ಯ ಎಂದು ಭ್ರಮಿಸಿ ಕಳೆದ ಒಂದು ಶತಮಾನದಿಂದಲೂ ಮಾನವನ ಪರಿಸರದ ಮೇಲಿನ ಆಕ್ರಮಣದಿಂದ ಸಂಪತ½ರಿತವಾಗಿದ್ದ ನಾಡು ಕ್ರಮೇಣ ಮರುಭೂಮಿಯಾಗುವ ಹಂತಕ್ಕೆ ತಲುಪಿದೆ.
ಮಾನವ ಅರಣ್ಯವನ್ನು ಕೈಗಾರೀಕರಣ, ರಸ್ತೆ, ಅಣೆಕಟ್ಟು ನಿರ್ಮಾಣ, ರೆಸಾರ್ಟ್ ಸೇರಿದಂತೆ ಇನ್ನಿತರ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿಕೊಂಡ ಪರಿಣಾಮ ಮಾನವ-ವನ್ಯಜೀವಿ ಸಂಘರ್ಷ, ಗುಡ್ಡ ಕುಸಿತ, ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳಿಗೆ ತುತ್ತಾಗುತ್ತಿದ್ದಾನೆ. ಪರಿಸರವನ್ನು ನಾಶ ಮಾಡದೆ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿ ಅಗತ್ಯವಿದೆ. ಸರಕಾರಗಳು ಜಾರಿಗೆ ತಂದ ಪ್ರಕೃತಿಗೆ ಪೂರಕವಾದ ಯೋಜನೆಗಳ ಸದ್ಭಳಕೆ ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿವೆ.
ಪರಿಸರ ಮತ್ತು ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮತೋಲನ ನಿರ್ವಹಣೆಯೆಡೆಗೆ ಗಮನವಹಿಸಿ ಅಭಿವೃದ್ಧಿ ಚಟುವಟಿಕೆಗಳನ್ನು ಆರಂಭಿಸಿದಾಗ ಮಾತ್ರ ಮುಂದಿನ ಪೀಳಿಗೆಯ ಅಳಿವು ಉಳಿವು ಸಾಧ್ಯ. ಮುಂದಿನ ಪೀಳಿಗೆಗಳಿಗೆ ಸಂಪನ್ಮೂಲಗಳ ಕೊರತೆಯಾಗದ ರೀತಿಯಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು ಮುಂದಾಗುವುದನ್ನೆ ಸುಸ್ಥಿರ ಅಭಿವೃದ್ಧಿ ಎನ್ನಲಾಗುತ್ತದೆ. ಇದರಲ್ಲಿ ಪರಿಸರ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಸಮಾನ ಪ್ರಮಾಣದಲ್ಲಿ ಒತ್ತು ನೀಡಲಾಗುತ್ತದೆ.
ಪ್ರಕೃತಿಯ ಸಂಪತ್ತನ್ನು ಬಳಸುವಾಗ, ಅಗತ್ಯವಿರುವಷ್ಟೇ ಬಳಸಬೇಕು. ಸಂರಕ್ಷಣೆಯ ಕಡೆಗೆ ಗಮನ ನೀಡಬೇಕು. ನವೀಕರಿಸಬಹುದಾದ ಶಕ್ತಿಗಳ ಬಳಕೆ, ಜೀವವೈವಿಧ್ಯತೆಯ ಸಂರಕ್ಷಣ ಮತ್ತು ನೀರಿನ ಸಂರಕ್ಷಣೆ ವಿಧಾನಗಳು ಸುಸ್ಥಿರ ಅಭಿವೃದ್ಧಿಯ ಪ್ರಮುಖ ಭಾಗವಾಗಿವೆ. ಈ ಎಲ್ಲ ಅಂಶಗಳು ಸರಕಾರ ಭಾಗವಾದರೆ ಪ್ರಕೃತಿ ಕಾಪಾಡುವ ನಿಟ್ಟಿನಲ್ಲಿ ಮಾನವನ ಪಾತ್ರವೇನು ಎಂಬುದು ಸಹಜ ಪ್ರಶ್ನೆ.
ಬದಲಾವಣೆಯ ನನ್ನಿಂದಲೇ ಪ್ರಾರಂಭವಾಗಲಿ ಎಂಬ ಆಲೋಚನೆಯಿಂದ ಪರಿಸರ ಸಂರಕ್ಷಣ ಕಾರ್ಯದಲ್ಲಿ ತೊಡಗಿದಾಗಲೇ ಇನ್ನೊಬ್ಬರು ಅದರಿಂದ ಸ್ಫೂರ್ತಿ ಪಡೆದು ತಾವು ತೊಡಗಿಸಿಕೊಳ್ಳಲು ಸಾಧ್ಯ. ಪರಿಶುದ್ಧ ಗಾಳಿ, ನೀರು, ಬೆಳಕು, ಆಹಾರ, ಗೊಬ್ಬರ, ಪೀಠೊಪಕರಣ ನೀಡುವ ಹಾಗೂ ಭೂ, ಜಲ ಸಂರಕ್ಷಣೆ ಮಾಡುವ ಮತ್ತು ದಿನೇದಿನೇ ಹೆಚ್ಚುತ್ತಿರುವ ತಾಪಮಾನದ ಪ್ರಮಾಣ ತಗ್ಗಿಸಲು ಸಹಾಯಕಾರಿಯಾಗಿರುವ ಗಿಡಮರಗಳು ಮಾನವನಗಿಂತ ಹೆಚ್ಚು ಉಪಯುಕ್ತವಾಗಿವೆ. ನಮ್ಮ ತಪ್ಪನ್ನು ನಾವೇ ಸರಿಪಡಿಸಿಕೊಳ್ಳಬೇಕಾಗಿದೆ. ನಾಶಪಡಿಸಿರುವ ಅರಣ್ಯವನ್ನು ಮತ್ತದೆ ಸ್ಥಿತಿಗೆ ತರುವಲ್ಲಿ ಸಮಾಜದ ಪ್ರತಿಯೊಬ್ಬರೂ ಮನೆಗೊಂದು ಮರ ಎಂಬಂತೆ ಸಸಿ ನೆಡಬೇಕು.
ಅಭಿವೃದ್ಧಿ ಚಟುವಟಿಕೆಗಳಿಂದ ಕಾಡು ನಾಶವಾಗಿ ಅಗತ್ಯ ಸೌಕರ್ಯವಿಲ್ಲದೆ ಅಳಿವಿನಂಚಿಗೆ ಸರಿಯುತ್ತಿರುವ ಪ್ರಾಣಿ ಪಕ್ಷಿಗಳ ಪ್ರಭೇದಗಳ ಉಳಿವು ಅಗತ್ಯವಾಗಿದೆ. ಆಹಾರ ಸರಪಳಿಯ ಕೊಂಡಿ ಕಳಚುವ ಸ್ಥಿತಿ ನಿರ್ಮಾಣವಾಗಿದೆ. ಅವುಗಳಿದ್ದರೆ ನಾವು ಎಂಬ ಪರಿಜ್ಞಾನ ಪ್ರತಿಯೊಬ್ಬರಲ್ಲೂ ಮೂಡಬೇಕು. ಇಂಥ ಕ್ರಮಗಳನ್ನು ಅನುಸರಿಸುವ ಮೂಲಕ, ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಶುದ್ಧ ಪರಿಸರದ ವ್ಯವಸ್ಥೆಯನ್ನು ಒದಗಿಸಲು ಸಾಧ್ಯ.
*ವಿಜಯಕುಮಾರ ಹಿರೇಮಠ, ಗದಗ