ಕೋಲ್ಕತ್ತಾ: ಹೊಸ ಕೋಚ್- ಹೊಸ ನಾಯಕನ ಸಾರಥ್ಯದಲ್ಲಿ ನಡೆದ ಮೊದಲ ಸರಣಿಯನ್ನು ಭಾರತ ತಂಡ ಗೆದ್ದುಕೊಂಡಿದೆ. ಪೂರ್ಣಪ್ರಮಾಣದ ನಾಯಕನಾಗಿ ರೋಹಿತ್ ಶರ್ಮಾ ಮೊದಲ ಸರಣಿ ಗೆಲುವು ಕಂಡಿದ್ದಾರೆ. ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 3-0 ಅಂತರದಲ್ಲಿ ಸರಣಿ ಗೆಲುವು ದಾಖಲಿಸಿದೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕೋಚ್ ರಾಹುಲ್ ದ್ರಾವಿಡ್, ಟಿ20 ವಿಶ್ವಕಪ್ ಬಳಿಕ ನೇರವಾಗಿ ಭಾರತಕ್ಕೆ ಆಗಮಿಸಿದ ನ್ಯೂಜಿಲ್ಯಾಂಡ್ ತಂಡದ ಬಗ್ಗೆಯೂ ಮಾತನಾಡಿದರು.
“ಸರಣಿ ಗೆಲುವು ಸಾಧಿಸಿದ್ದು ಒಳ್ಳೆಯ ಸಂಗತಿ. ಪ್ರತಿಯೊಬ್ಬ ಆಟಗಾರ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಉತ್ತಮ ಆರಂಭ ಪಡೆದುಕೊಂಡಿದ್ದೇವೆ. ನಾವು ವಾಸ್ತವದ ಬಗ್ಗೆಯೂ ಅರಿತುಕೊಳ್ಳಬೇಕು. ನಮ್ಮ ಕಾಲು ನೆಲದ ಮೇಲೇ ಇರಲಿ. ಯಾಕಂದರೆ ಟಿ20 ವಿಶ್ವಕಪ್ ಮುಗಿದು ಮೂರೇ ದಿನಗಳಲ್ಲಿ ಇಲ್ಲಿಗೆ ಬಂದು ಮತ್ತೊಂದು ಸರಣಿ ಆಡುವುದು ಸುಲಭವಲ್ಲ. ನ್ಯೂಜಿಲೆಂಡ್ ಆಟಗಾರರ ಶ್ರಮ ನಿಜಕ್ಕೂ ಪ್ರಶಂಶಿಸಬೇಕು. ಈ ಸರಣಿಯಿಂದ ನಾವು ಕೆಲವು ವಿಚಾರಗಳನ್ನು ಕಲಿತಿದ್ದೇವೆ. ಮುಂದೆ ಸಾಗಬೇಕಷ್ಟೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸರಣಿ ಭಾರತ ಕೈವಶ: ಹೊಸ ದಾಖಲೆ ಬರೆದ ರೋಹಿತ್ ಶರ್ಮಾ
“ಮುಂದಿನ 10 ತಿಂಗಳಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಲಿದ್ದೇವೆ. ಯುವ ಆಟಗಾರರ ಪ್ರದರ್ಶನ ನೋಡಲು ಖುಷಿಯಾಗುತ್ತದೆ. ಕಳೆದ ಕೆಲವು ತಿಂಗಳುಗಳಿಂದ ಕ್ರಿಕೆಟ್ ಆಡದ ಆಟಗಾರರಿಗೆ ನಾವು ಅವಕಾಶ ನೀಡುವತ್ತ ಗಮನ ಹರಿಸುತ್ತಿದ್ದೇವೆ. ಅವರನ್ನು ಮುಂದಿನ ದಿನಕ್ಕೆ ಸಜ್ಜು ಮಾಡುವ ಕೆಲಸ ಪ್ರಗತಿಯಲ್ಲಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ ವರೆಗೂ ನಮಗೆ ಸಮಯವಿದೆ. ಈಗಿರುವ ತಂಡದಲ್ಲಿರುವ ಕೇವಲ 3-4 ಆಟಗಾರರು ಮಾತ್ರ ಮುಂದಿನ ಟೆಸ್ಟ್ ಸರಣಿಗೆ ತೆರಳುತ್ತಾರೆ” ಎಂದು ದ್ರಾವಿಡ್ ಹೇಳಿದರು.