“ಬೇಡ ಕಣೋ, ಗಿಲೀಟಿನ ಮಾತಿಗೆ, ಮೈಬಣ್ಣಕ್ಕೆ ಮರುಳಾಗಬೇಡ. ಬೆಂಗಳೂರು ಹುಡುಗೀರಿಗೆ ಶಿಸ್ತಿಲ್ಲ. ನಯ ನಾಜೂಕು ಮೊದಲೇ ಇಲ್ಲ. ಆ ಹುಡುಗಿಗೆ ನೆಟ್ಟಗೆ ಕಸ ಗುಡಿಸಲು ಬರುವುದಿಲ್ಲ. ಊರಿಗೆ ಬಂದಿದ್ದಾಗ ನಾನೇ ನೋಡಿದೆನಲ್ಲ; ದಿನಕ್ಕೆ ಮೂರು ಸರ್ತಿ ಮೇಕ್ ಅಪ್ ಮಾಡಿಕೊಳ್ಳುವುದಷ್ಟೇ ಗೊತ್ತು ಅವಳಿಗೆ. ಅಂಥವಳನ್ನು ಕಟ್ಟಿಕೊಂಡು ಜೀವನಪೂರ್ತಿ ಹೆಣಗುವುದು ಕಷ್ಟ ಕಣೋ. ಅವಳು ಕೆಲಸಕ್ಕೆ ಹೋಗ್ತಾಳೆ ಸರಿ. ನಿನ್ನಷ್ಟೇ ದುಡೀತಾಳೆ ಸರಿ. ಅದರಲ್ಲೇನು ದೊಡ್ಡಸ್ತಿಕೆ? ನನ್ನ ಸಂಬಳ ನನ್ನದು, ನಿಮ್ಮ ಸಂಬಳ ನಿಮ್ಮದು ಅನ್ನುವುದಾದರೆ, ನಿನಗೇನು ಬೆಲೆ ಸಿಕು¤ ಹೇಳು? ಅವಳೇನು ಸೀಮೆಗಿಲ್ಲದ ಸುಂದ್ರಿನ? ಅವಳಲ್ಲ ಅಂದ್ರೆ ಇನ್ನೊಬ್ಬಳು ಸಿಕ್ತಾಳೆ. ಹಿಂದೆ ಮುಂದೆ ನೋಡಬೇಡ. ಸೋಡಾಚೀಟಿ ಕೊಟ್ಟು ಕಳಿಸ್ತಾ ಇರು…’ ಫೋನ್‌ನಲ್ಲಿ ರೆಕಾರ್ಡ್ ಆಗಿದ್ದ ಅಮ್ಮನ ಮಾತುಗಳು ಹೀಗೇ ಸಾಗುತ್ತಿದ್ದವು. ಮುಂದಿನ ಮಾತುಗಳನ್ನು ಕೇಳಲಾರೆ ಅನ್ನುವಂತೆ, ಪ್ರಕಾಶ ಫೋನ್ ಆಫ್ ಮಾಡಿಬಿಟ್ಟ.
***
ಸೋಫಾದ ಮೇಲೆ ಮಾನಸಿ ಮಂಕಾಗಿ ಕೂತಿದ್ದಳು. ಆಗಲೇ ಮೊಬೈಲ್ ಸದ್ದು ಮಾಡಿತು. ವಾಟ್ಸಾಪ್‌ಗೆ ಬಂದಿದ್ದ ಹಳೆಯ ಮೆಸೇಜನ್ನೇ ಹೊಸದೆಂಬಂತೆ ಓದತೊಡಗಿದ್ದಳು. ಅವಳ ತಂದೆ ಬರೆದಿದ್ದರು- ‘ಡೈವೋರ್ಸ್ ಕೊಡ್ತಾನಂತ? ಕೊಡಲಿ. ಅವನನ್ನು ಸುಮ್ಮನೆ ಬಿಡಬಾರದು. ಅವನಿಗೆ ಸರಿಯಾದ ಪಾಠ ಕಲಿಸಬೇಕು. ಡೌರಿ ಕೇಸ್, ಫಿಸಿಕಲ್ ಹೆರಾಸ್ಮೆಂಟ್ ಎಮೋಷನಲ್ ಹರಾಸ್ಮೆಂಟ್ ಹೀಗೆ ಹತ್ತು ಥರದ ಕೇಸ್ ಹಾಕಿಸ್ತೀನಿ ಅವನ ಮೇಲೆ. ಜಾಮೀನೇ ಸಿಗಬಾರದು, ಹಾಗೆ ಮಾಡೋಣ. ಮನಸ್ಸು ಒಡೆದು ಹೋದಮೇಲೆ ಒಟ್ಟಿಗೆ ಬಾಳುವುದು ಕಷ್ಟ. ಮೊದಲು ಅವನ ನೆರಳಿನಿಂದ ಎದ್ದು ಬಾ. ಸ್ವಲ್ಪ ದಿನ ಕಷ್ಟ ಆಗಬಹುದು. ಆಮೇಲೆ ಬೇರೊಂದು ಸಂಬಂಧದ ಬಗ್ಗೆ ಯೋಚಿಸಬಹುದು. ಎರಡನೇ ಮದುವೆಯಾಗಿ ಎಷ್ಟೋ ಜನ ನೆಮ್ಮದಿಯಾಗಿ ಬದುಕ್ತಾ ಇಲ್ವಾ? ಹೊಸ ಬದುಕು ಕಟ್ಕೊಬೇಕು. ಪ್ರಕಾಶನಿಗೆ ಮರೆಯಲಾಗದಂಥ ಪಾಠ ಕಲಿಸಬೇಕು… ಇಷ್ಟೇ ನಿನ್ನ ಗುರಿಯಾಗಲಿ…’ ಅಡ್ಡಡ್ಡ ತಲೆಯಾಡಿಸುತ್ತಾ ಮಾನಸಿ ತನಗಷ್ಟೇ ಎಂಬಂತೆ ಹೇಳಿಕೊಂಡಳು- ‘ ಪ್ರಕಾಶನ ಜೊತೆ ಬದುಕಲು ಕಷ್ಟ ಆಗ್ತಿದೆ ನಿಜ. ಡಿವೋರ್ಸ್‌ಗೆ ಅಪ್ಲೆç ಮಾಡಿರುವುದೂ ನಿಜ. ಆದರೆ, ಅವನ ಮೇಲೆ ಕೇಸ್ ಹಾಕುವಂಥ ಯೋಚನೆ ನನಗಂತೂ ಯಾವತ್ತೂ ಬರಲ್ಲ ಅಪ್ಪ… ಸಾರಿ’
***
ಪ್ರಕಾಶ ದಾವಣಗೆರೆ ಕಡೆಯ ಹುಡುಗ. ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದವ, ಎಂಎನ್‌ಸಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ಹುಡುಗಿ ಮಾನಸಿ ಒಂದು ಸೆಮಿನಾರ್‌ನಲ್ಲಿ ಪರಿಚಯ ವಾಗಿದ್ದಳು. ಆ ಪರಿಚಯವೇ ಮುಂದೆ ಗೆಳೆತನವಾಗಿ, ಅನಂತರ ಪ್ರೇಮವಾಗಿ, “ಮದುವೆಯಾಗೋಣ’ ಎಂಬ ಹಂತಕ್ಕೆ ತಲುಪಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಎರಡೂ ಕುಟುಂಬದ ವರು ವಿರೋಧಿ ಸಿದ್ದರು. ಪೋಷಕರ ವಿರೋಧ ಹೆಚ್ಚಿದಷ್ಟೂ ಪ್ರೇಮಿಗಳ ನಿರ್ಧಾರ ಗಟ್ಟಿ ಯಾಗುವುದು ಲೋಕದ ನಿಯಮ ತಾನೇ? ಪ್ರಕಾಶ- ಮಾನಸಿಯ ವಿಷಯದಲ್ಲಿ ಹೀಗೆ ಆಗಿತ್ತು. ಹಿರಿಯರ ವಿರೋಧವನ್ನು ಲೆಕ್ಕಿಸದೆ, ಇವರು ಮದುವೆಯಾಗಿದ್ದರು. ಇನ್ನೇನು ಮಾಡೋಕಾ ಗುತ್ತೆ? ಅವರವರ ಹಣೇಲಿ ಬರೆದಂತೆ ಆಗುತ್ತದೆ ಎಂದುಕೊಂಡು, ಎರಡೂ ಕುಟುಂಬದವರು ಸುಮ್ಮನಾಗಿದ್ದರು. ಹುಡುಗ ಹುಡು ಗಿಯ ಮನಸ್ಸು ಬೆರೆತಿದ್ದವಷ್ಟೇ; ಪೋಷಕರು ಅಪರಿಚಿತರ ಥರವೇ ಉಳಿದುಬಿಟ್ಟರು. ಹಾಂ ಅಂದರೆ ಹಾಂ, ಹೂಂ ಅಂದರೆ ಹೂಂ ಅಷ್ಟೇ ಮಾತು!
ವರ್ಷ ಕಳೆದು, ಆಕರ್ಷಣೆಯ ದಿನಗಳು ಮುಗಿಯುತ್ತಿದ್ದಂತೆ, ಪ್ರಕಾಶ-ಮಾನಸಿಯ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಶಾಪಿಂಗ್ ಕಡಿಮೆ ಮಾಡಬೇಕು, ಜಾಸ್ತಿ ಹಣ ಉಳಿಸಬೇಕು, ಖರ್ಚು ಮಾಡುವ ಮುನ್ನ ತನ್ನನ್ನು ಕೇಳಬೇಕು ಎಂದು ಪ್ರಕಾಶ ಆರ್ಡರ್ ಮಾಡಿದ್ದ. ನನ್ನ ದುಡಿಮೆ, ನನ್ನ ಹಣ, ಅದನ್ನು ಪ್ರಶ್ನಿಸಲು ನಿನಗೆ ಹಕ್ಕಿಲ್ಲ. ನಾನು ಹಿಂದಿನ ಮಹಿಳೆಯಲ್ಲ, ಇಂದಿನ ಮಹಿಳೆ ಎಂದು ಮಾನಸಿ ವಾದಿಸಿದ್ದಳು. ಹೀಗೆ ಶುರುವಾದ ಕಲಹ, ದಿನದಿನವೂ ಹೆಚ್ಚುತ್ತಾ ಹೋಗಿ, ಕಡೆಗೆ ಡೈವೋರ್ಸ್‌ಗೆ ಅರ್ಜಿ ಹಾಕುವವರೆಗೂ ಹೋಯಿತು. ಅವನಿಲ್ಲದಿದ್ದರೆ ಇನ್ನೊಬ್ಬ, ಅವಳಲ್ಲದಿದ್ದರೆ ಅಂಥ ವರು ಹತ್ತು ಜನ … ಎಂಬಂಥ ಪೋಷಕರ ಮಾತು, ಪ್ರಕಾಶ-ಮಾನಸಿಯ ಅಂತರವನ್ನು ಮತ್ತಷ್ಟು ಹೆಚ್ಚಿಸಿತು. ಕೇಸ್‌ನ ಹಿಯರಿಂಗ್‌ಗೆ ವಾರವಷ್ಟೇ ಬಾಕಿಯಿದೆ ಅನ್ನುವಾಗಲೇ, ಲಾಕ್‌ಡೌನ್ ಆರಂಭವಾದ್ದರಿಂದ, ಪ್ರಕಾಶನೂ, ಮಾನಸಿಯೂ, ಅಪಾರ್ಟ್‌ಮೆಂಟ್‌ನ ಆ ಮನೆಯಲ್ಲಿ ಒಟ್ಟಿಗೇ ಇರಬೇಕಾಗಿ ಬಂದಿತ್ತು.
ಆಫೀಸ್‌ಗೆ ಹೋಗುತ್ತಿದ್ದಾಗ, ಬೆಳಗ್ಗೆಯಿಂದ ಸಂಜೆಯವರೆಗಷ್ಟೇ ಕೆಲಸ ಮಾಡುತ್ತಿದ್ದರು. ಆದರೆ, ಮನೆಯಿಂದ ಕೆಲಸ ಮಾಡುವಾಗ, ಸಮಯದ ಮಿತಿಯೇ ಇರುತ್ತಿರಲಿಲ್ಲ. ಹೀಗೆ ಇಡೀ ದಿನ ಬ್ಯುಸಿ ಇದ್ದು ದರಿಂದ, ಆಕರ್ಷಣೆಗೆ ಒಳಗಾಗದಿರಲು, ಆಯಾಸದ ಕಾರಣಕ್ಕೆ ಬೇಗ ನಿದ್ರೆಗೆ ಜಾರಲು ಸಹಾಯವಾಯಿತು. ಆಗುವುದೆಲ್ಲಾ ಒಳ್ಳೆಯದಕ್ಕೇ ಎಂಬ ಭಾವದಲ್ಲಿ ಇಬ್ಬರೂ ಇದ್ದಾ ಗಲೇ,ಅದೊಂದು ಸಂಜೆ ಮಾನಸಿಗೆ ಕೆಮ್ಮು ಶುರುವಾಯಿತು. ಹಿಂದಿನ ಸಂಜೆ ಮಳೆಯಲ್ಲಿ ನೆನೆದಿದ್ದಕ್ಕೆ, ಕೆಟ್ಟ ಗಾಳಿ ಸೇವಿಸಿದ್ದಕ್ಕೆ ಹೀಗಾಗಿದೆ ಅಂದುಕೊಂಡಳು. ಮೆಣಸಿನ ಕಷಾಯ, ಶುಂಠಿ ಕಾಫಿ, ಯಾವುದೋ ಚೂರ್ಣ, ಕಾಫ್ ಸಿರಪ್ ಕುಡಿದು ನೋಡಿದಳು. ಕೆಮ್ಮು ನಿಲ್ಲಲಿಲ್ಲ. ಬದಲಾಗಿ, ತಲೆಸುತ್ತು, ಗಂಟಲು ನೋವು, ಸಣ್ಣಗೆ ಜ್ವರ ಜೊತೆಯಾಯಿತು. ನಡೆದಾಡಲು ಹೆಂಡತಿ ತಡವರಿಸುತ್ತಿದ್ದಾ ಳೆ ಎಂದು ಗೊತ್ತಾದಾಗ ಪ್ರಕಾಶ, ಕುಳಿತಲ್ಲೇ ಚಡಪಡಿಸಿದ. ಮರು ದಿನವೂ ಜ್ವರ ಬಿಡದಿದ್ದಾಗ ಆಸ್ಪತ್ರೆಗೆ ಕರೆದೊಯ್ದ. “”ಜ್ವರ ಬಂದು ಆಗಲೇ ಮೂರು ದಿನ ಆಗಿದೆ, ಈಗ ಬಂದಿದ್ದೀರಲ್ಲ? ಇದು ಕಷ್ಟದ ಕಾಲ. ಇರಲಿ, ಗಾಬರಿ ಆಗಬೇಡಿ. ಇಂಜೆಕ್ಷನ್ ಕೊಡ್ತೇನೆ, ಮೂರು ದಿನಕ್ಕೆ ಮಾತ್ರೆ ಬರೆದುಕೊಡ್ತೇನೆ. ಆಗಲೂ ಕಡಿಮೆ ಆಗದಿದ್ರೆ ಕೋವಿಡ್-19 ಟೆಸ್ಟ್ ಮಾಡಿಸಿಬಿಡಿ”- ಎಂದರು ಡಾಕ್ಟರ್.
”ಕೋವಿಡ್-19”ಎಂಬ ಮಾತು ಕೇಳಿದ್ದೆ, ಮಾನಸಿ ಬೆಚ್ಚಿ ಬಿದ್ದಳು. ಮೂರು ದಿನಗಳ ನಂತರವೂ ಜ್ವರ ಬಿಡದಿದ್ದರೆ, ಕೋವಿಡ್-19ಪಾಸಿಟಿವ್ ಎಂದು ರಿಪೋರ್ಟ್ ಬಂದುಬಿಟ್ಟರೆ, ಅಪ್ಪ-ಅಮ್ಮನನ್ನು ನೋಡುವ ಮೊದಲೇ ಸತ್ತುಹೋಗಿಬಿಟ್ಟರೆ… ಇಂಥವೇ ಯೋಚನೆ ಗಳು ಅವಳನ್ನು ಹಣ್ಣು ಮಾಡಿದವು. ಮೊದಲಾಗಿದ್ದರೆ- “ಅಮ್ಮಾ, ಗಂಟಲು ನೋವು… ಜ್ವರ ಬಿಡ್ತಾ ಇಲ್ಲ ಕಣಪ್ಪಾ’ ಎಂದು ಫೋನ್ ಮಾಡಿ ಹೇಳಿಬಿಡುತ್ತಿದ್ದಳು. ಆದರೆ ಈಗ, ಅಂಥ ಎಲ್ಲಾ ಸೆಂಟಿ ಮೆಂಟ್‌ಗಳನ್ನೂ ಕೋವಿಡ್-19 ನಿರ್ದಯವಾಗಿ ಹೊಸಕಿ ಹಾಕಿತ್ತು. ಒಂದೇ ಮನೆಯಲ್ಲಿ ಇದ್ದೇವೆ, ಅದೇ ಕಾರಣಕ್ಕೆ ಪ್ರಕಾಶನಿಗೂ ಸೋಂಕು ತಗುಲಿದರೆ ಅನ್ನಿಸಿದಾಗಂತೂ ತತ್ತರಿಸಿಹೋದಳು. ಮುಂದೊಂದು ದಿನ ಜನರು- ಹೋಗೋಳು ಸುಮ್ಮನೆ ಹೋಗಲಿಲ್ಲ. ಗಂಡನಿಗೂ ಕೋವಿಡ್-19 ಅಂಟಿಸಿಯೇ ಹೋದಳು. ಡೈವೋರ್ಸ್ ನಿಂದ ತಪ್ಪಿಸಿಕೊಂಡರೂ ಕೋವಿಡ್-19ದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ” ಎಂದೆಲ್ಲಾ ದೂರಬಹುದು ಅನ್ನಿಸಿದಾಗ- ” ದಯವಿಟ್ಟು ದೂರ ಇದ್ದು ಬಿಡು. ಏನಾದ್ರೂ ತೊಂದರೆ ಆದರೆ ಕಷ್ಟ” ಅಂದಳು.’ ಇಷ್ಟು ದಿನ ಜೊತೆಗೇ ಇದ್ದೆವಲ್ಲ; ತೊಂದರೆ ಆಗೋದಾದ್ರೆ ಇಬ್ಬರಿಗೂ ಆಗಲಿ ಬಿಡು. ಕೆಟ್ಟದ್ದನ್ನೇ ಯಾಕೆ ಯೋಚಿಸ್ತೀಯ?ಅಂಥದೇನೂ ಆಗಲ್ಲ. ಇಲ್ಲ ದ್ದನ್ನು ಯೋಚಿಸಿ ಮನಸ್ಸು ಕೆಡಿಸ್ಕೊಬೇಡ. ರೆಸ್ಟ್ ಮಾಡು…’ ಅಂದಿದ್ದ ಪ್ರಕಾಶ. ಆನಂತರದ ಮೂರು ದಿನವೂ ಮನೆಯ ಜವಾಬ್ದಾರಿ ಪ್ರಕಾಶನದ್ದಾಯಿತು. ಹೋಟೆಲ್‌ನಲ್ಲಿ ಪಾರ್ಸೆಲ್ ತಂದು, ಅದರಿಂದ ಇನ್ನೇನಾದ್ರೂ ಹೆಚ್ಚು ಕಮ್ಮಿ ಆಗಿಬಿಟ್ಟರೆ ಅನಿಸಿದ್ದರಿಂದ ಅವನೇ ಅಡುಗೆ ಮಾಡಿದ. ಮನೆ ಕ್ಲೀನ್ ಮಾಡುವುದರೊಳಗೆ, ಸೊಂಟ ಬಿದ್ದು ಹೋಯಿತು. ಮೂರೇ ದಿನಕ್ಕೆ ನಮಗೆ ಇಷ್ಟೊಂದು ಸುಸ್ತಾದರೆ, ವರ್ಷವಿಡೀ ದುಡಿಯುವ ಹೆಂಗಸರಿಗೆ ಅದೆಷ್ಟು ಕಷ್ಟವಾಗಬೇಡ ಎಂದು ಯೋಚಿಸಿ ಪೆಚ್ಚಾದ. ಆ ಮೂರು ದಿನಗಳ ಅವಧಿಯಲ್ಲಿ ಪ್ರಕಾಶನಿಗೆ-‘ ನಂಬಲಾಗದಂಥ ಹಲವು ಸಂಗತಿಗಳು’ ಗೋಚರಿಸಿದವು. 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ, ಆದರ್ಶ ದಂಪತಿಗಳು ಎಂದು ಘೋಷಿಸಿಕೊಂಡಿದ್ದ ಎದುರು ಮನೆಯ ದಂಪತಿ, ಅದೊಂದು ಬೆಳಗ್ಗೆ ಜಗಳವಾಡಿಕೊಂಡು ದಾಂಧಲೆ ಎಬ್ಬಿಸಿದ್ದರು. ಅರೇಂಜ್ ಮ್ಯಾರೇಜ್ ಆಗಿದ್ದ ಜೋಡಿಯೊಂದರಲ್ಲಿ ಹೊಂದಾಣಿಕೆಯಾಗದೆ, ತಿಂಗಳು ಕಳೆವ ಮೊದಲೇ ಹುಡುಗಿ ತವರಿಗೆ ಹೋಗಿಬಿಟ್ಟದ್ದಳು. ಸಣ್ಣ ಸಂಬಳದ ನೌಕರಿ ಹೊಂದಿದ್ದ ಹಿಂದೂ – ಮುಸ್ಲಿಂ ಜೋಡಿಯೊಂದು, ಹತ್ತು ಜನ ಕರುಬುವಂತೆ ಬದುಕುತ್ತಿತ್ತು. ಕೋಟ್ಯಂತರ ಆಸ್ತಿ ಹೊಂದಿದ್ದ ಇನ್ನೊಂದು ಮನೆಯವರು, ಪರಸ್ಪರ ಅನುಮಾನ- ಅಪನಂಬಿಕೆಯ ಜೊತೆಗೇ ಬದುಕು ನಡೆಸುತ್ತಿದ್ದರು. ಮರುದಿನ ಸಂಜೆ, ಇನ್ನೊಂದು’ ವಿಸ್ಮಯವನ್ನೂ’ ಪ್ರಕಾಶ ನೋಡಿದ. ಹಿಂದಿನ ದಿನವಷ್ಟೇ ಹೊಡೆದಾಡಿಕೊಂಡಿದ್ದ ದಂಪತಿ, ಅಂಥದೇನೂ ಆಗಿಯೇ ಇಲ್ಲವೆಂಬಂತೆ ಕೈ ಕೈ ಹಿಡಿದು ವಾಕ್ ಮಾಡುತ್ತಿದ್ದರು. ಮರುದಿನ ಬೆಳಗ್ಗೆ ಹಾಲು ತರಲು ಹೋದಾಗ ಸಿಕ್ಕಿದ ಆ ಅಂಕಲ್ ಹೇಳಿದರು; ನನಗೆ ಫೇಸ್ ರೀಡಿಂಗ್ ಗೊತ್ತಿದೆ. ಮೊನ್ನೆಯಷ್ಟೇ ಜಗಳ ಆಡಿದವರು, ಇಷ್ಟು ಬೇಗ ಅದನ್ನು ಮರೆತಿ¨ªಾರಾ? ಎಂಬುದೇ ನಿಮ್ಮ ಮನಸ್ಸಲ್ಲಿದೆ. ಕೇಳಿ: ಗಂಡ-ಹೆಂಡ್ತಿ ಜಗಳ ಆಡೋದು, ಹಗಲು- ರಾತ್ರಿಯಷ್ಟೇ ಸಹಜ.
ಜಗಳ ಇದ್ದಾಗಲೇ “ಜುಗಲ್ ಬಂದಿ’ ಸಾಧ್ಯ. ಆದ್ರೆ, ಒಂದು ವಿಷಯ ನೆನಪಿಡಬೇಕು. ಗಂಡ-ಹೆಂಡತಿ ಮಧ್ಯೆ ತಂದು ಹಾಕೋಕೆ ಜನ ಕಾಯ್ತಾ ಇರ್ತಾರೆ. ಅವರು ಹಾಲಿಗೆ ಹುಳಿ ಹಿಂಡುವ ಮೊದಲೇ, ನಾವು ಹೆಪ್ಪು ಹಾಕಿಬಿಡಬೇಕು. ನಾಲ್ಕು ಮಂದಿ ಮೆಚ್ಚುವ ಹಾಗೆ ಬಾಳಬೇಕೇ ಹೊರತು, ಹತ್ತು ಜನ ಆಡಿಕೊಂಡು ನಗುವಂತೆ ಬಾಳಬಾರದು… ಪ್ರಕಾಶನ ಮನದಲ್ಲಿ ಈ ಮಾತುಗಳು ಅಚ್ಚಳಿ ಯದೆ ಉಳಿದುಬಿಟ್ಟವು. ಅವನು ಯೋಚಿಸಿದ: ಹೌದಲ್ಲವಾ? ಮಾನಸಿ ಯಿಂದ ದೂರವಾದ ಮೇಲೆ ಏನಾಗಬಹುದು? ಇನ್ನೊಂದು ಮದುವೆಯಾಗಬಹುದು. ಹೊಸ ಹೆಂಡತಿ ಇನ್ನಷ್ಟು ಸುಂದರಿಯೋ, ಶ್ರೀಮಂತೆಯೋ ಆಗಿರಬಹುದು. ಆದರೆ,ಅವಳು ಜಗಳ ಆಡುವು ದಿಲ್ಲ ಎಂಬ ಗ್ಯಾರಂಟಿ ಎಲ್ಲಿದೆ? ಎದುರು ಮನೆಯವರು “ಜಗಳ್ ಬಂದಿ’ಯಾಗಿಯೇ 25 ವರ್ಷಗಳಿಂದ ನೆಮ್ಮದಿಯಾಗಿ ಇರುವಾಗ, ಒಂದೇ ವರ್ಷಕ್ಕೆ ನಾನೇಕೆ ದುಡುಕಿದೆ? ಅದ್ಯಾಕೆ ತಾಳ್ಮೆ ಕಳೆದುಕೊಂಡೆ? ಡೈವೋರ್ಸಿ ಎಂಬ ಒಂದೇ ಕಾರಣಕ್ಕೆ ಮಾನಸಿಗೆ ಮುಂದೆ ವಿಪರೀತ ಕಷ್ಟಗಳು ಜೊತೆಯಾಗಿಬಿಟ್ಟರೆ, ಅವಳು ಡಿಪ್ರಶನ್‌ಗೆ ತುತ್ತಾಗಿಬಿಟ್ಟರೆ…
ಮುಂದೇನನ್ನೂ ಯೋಚಿಸಲು ಅವನಿಗೆ ಮನಸ್ಸಾಗಲಿಲ್ಲ. ದಡಬಡಿಸಿ ಮನೆಗೆ ಬಂದು ನೋಡಿದ. ಮಾನಸಿ, ಮುದುರಿಕೊಂಡು ಮಲಗಿದ್ದಳು. ಅವತ್ತು ಇಡೀ ದಿನ ಅವಳ ಪಕ್ಕದಲ್ಲೇ ಕೂತವನಿಗೆ, ಅವಳೊಂದಿಗೆ ಕಳೆದ ಮಧುರ ಕ್ಷಣಗಳೆಲ್ಲ ನೆನಪಾದವು. ಅದೇ ಸಮಯಕ್ಕೆ ಅವಳು ನಿದ್ರೆಯಲ್ಲಿ ಕನವರಿಸುತ್ತಾ- ಪ್ರಕಾಶೂ, ಸಾರಿ ಕಣೋ ಅಂದಾಗ, ಇವನಿಗೆ ಕೂತಲ್ಲಿಯೇ ಗಂಟಲು ಕಟ್ಟಿತು.
***
ಅಬ್ಟಾ, ಕಡೆಗೂ ಜ್ವರ ಬಿಟ್ಟಿದೆ. ಕೊರೊನಾ ಇಲ್ಲ ಅಂತ ಗ್ಯಾರಂಟಿ ಆಯ್ತು, ಅಷ್ಟು ಸಾಕು ಅಂದುಕೊಳ್ಳುತ್ತಾ ರೂಮ್‌ನಿಂದ ಆಚೆ ಬಂದಳು ಮಾನಸಿ. ಆಗಲೇ, ಇನ್ನೊಂದು ರೂಮಿನಿಂದ ಪ್ರಕಾಶನ ಮಾತು ಕೇಳಿಸಿತು: ಅಮ್ಮಾ, ನಾನಂತೂ ಡೈವೋರ್ಸ್ ಕೊಡಲ್ಲ, ಅರ್ಜಿ ವಾಪಸ್ ತಗೋತೇನೆ. ಕಷ್ಟವೋ ಸುಖವೊ… ಅವಳ ಜೊತೆನೇ ಬದುಕ್ತೇನೆ…
-ಎ.ಆರ್.ಮಣಿಕಾಂತ್