ಬೆಂಗಳೂರು: ನಮಗೆ ದಿಲ್ಲಿಗೆ ಹೋಗುವ ಚಟ ಇದೆ ಹಳೆಯ ಸ್ನೇಹಿತರಿದ್ದಾರೆ ಅವರೊಂದಿಗೆ ಭೇಟಿ ಮಾಡಿ ಬರುತ್ತೇನೆ ಎಂದು ಶುಕ್ರವಾರ ಬಿಜೆಪಿ ಹಿರಿಯ ನಾಯಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟ ಪುನಾರಚನೆ ಯಾವಾಗಾದರೂ ಮಾಡಲಿ, ಒಳ್ಳೆಯ ಆಡಳಿತ ನೀಡಲಿ. ಯುಗಾದಿ ಹೊತ್ತಿಗೆ ಬದಲಾವಣೆ ಆಗುತ್ತದೆ. ಬದಲಾವಣೆ ಜಗದ ನಿಯಮ. ಬದಲಾವಣೆ ಆಗದಿದ್ದರೆ ಅದನ್ನು ಯುಗಾದಿ ಸಂಕ್ರಮಣ ಅಂತ ಯಾಕೆ ಕರೆಯಬೇಕು ಎಂದರು.
ವಿಜಯೇಂದ್ರ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿಜಯೇಂದ್ರ ಅಂತ ದೊಡ್ಡ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿಯಲ್ಲ ಎಂದರು.
ವೀಕೆಂಡ್ ಕರ್ಪ್ಯೂ ತೆರವು ಮಾಡಿದ್ದಕ್ಕೆ ಸಿಎಂ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಯತ್ನಾಳ್, ಕೊರೊನಾ ವಾರಾಂತ್ಯದಲ್ಲಿ ಮಾತ್ರ ಬರುವುದಿಲ್ಲ. ಇದನ್ನು ಕೆಲವರು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರು. ಸರ್ಕಾರದ ಕಾನೂನು ಪ್ರಕಾರ ಕೊರೊನಾ ರಾತ್ರಿ ಅಡ್ಡಾಡಬಾರದು. ಕಾಂಗ್ರೆಸ್ ಪಾದಯಾತ್ರೆಗೆ ಮೊದಲೆ ಅವಕಾಶ ಕೊಡಬಾರದಿತ್ತು. ಒಂದು ವೇಳೆ ಕಾಂಗ್ರೆಸ್ ನವರು ಪಾದಯಾತ್ರೆ ಇನ್ನೂ ಮುಂದುವರೆಸಿದ್ದರೆ ಯಾರೂ ಇರುತ್ತಿರಲಿಲ್ಲ. ದೇವರ ಹತ್ತಿರ ಹೋಗುತ್ತಿದ್ದರು ಎಂದರು.
ಹರಿಹರ ಹಾಗೂ 3 ನೇ ಪೀಠ ನಿರಾಣಿ ಪೀಠಗಳು
ಕೂಡಲ ಸಂಗಮ ಸ್ವಾಮೀಜಿ ನಮ್ಮ ಪಂಚಮಸಾಲಿ ಸಮುದಾಯದ ಪರವಾಗಿ ಹೋರಾಟ ಮಾಡಿದ್ದಾರೆ ಸಮುದಾಯದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅವರ ಮಟ್ಟಕ್ಕೆ ಯಾವ ಪೀಠ ಬರುವುದಿಲ್ಲ. ಹರಿಹರ ಹಾಗೂ 3 ನೇ ಪೀಠ ನಿರಾಣಿ ಪೀಠಗಳು. ಕೂಡಲ ಸಂಗಮ ಪೀಠ ಮಾತ್ರ ಪಂಚಮಸಾಲಿ ಸಮುದಾಯದ ಪೀಠ, ಬ್ಲೇಜರ್ ಗಳು, ಎಂಜಿ ರೋಡಿನಲ್ಲಿ ಮಾರಾಟಕ್ಕಿವೆ. ಸೂರ್ಯ ಚಂದ್ರ ಇರುವವರೆಗೂ ನಿರಾಣಿ ಸಿಎಂ ಆಗುವುದಿಲ್ಲ ಎಂದರು.