ಮಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿ ಖಲಂದರ್ ಮನೆ ಶೋಧ ಸಂದರ್ಭದಲ್ಲಿ ಪೊಲೀಸರು ಪವಿತ್ರ ಕುರ್‌ಆನ್ ಎಸೆದದ್ದಲ್ಲದೆ, ಮದರಸದ ಪುಸ್ತಕಗಳನ್ನು ಹರಿದಿದ್ದಾರೆ ಎಂದು ಮನೆಯವರು ಆರೋಪಿಸಿದ ಹಿನ್ನೆಲೆಯಲ್ಲಿ ಮನೆ ಶೋಧದ ಸಂಪೂರ್ಣ ವಿಡಿಯೊ ತುಣುಕುಗಳನ್ನು ರವಿವಾರ ದ.ಕ. ಜಿಲ್ಲಾ ಎಸ್ಪಿ ಸುಧೀರ್ ರೆಡ್ಡಿ ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಎದುರು ಬಹಿರಂಗಗೊಳಿಸಿದ್ದಾರೆ.
“ಮನೆ ಶೋಧ ಕಾರ್ಯ ಸಂದರ್ಭದಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಗೆ ಚ್ಯುತಿಯಾಗದಂತೆ ಪೊಲೀಸರು ಕಾರ್ಯ ನಿರ್ವಹಿಸಿದ್ದಾರೆ. ಕುರಾನ್‌ನನ್ನು ಪೊಲೀಸರು ಮುಟ್ಟಿಲ್ಲ. ಸಂಪೂರ್ಣ ಶೋಧ ಕಾರ್ಯದ ಚಿತ್ರೀಕರಣ ಮಾಡಲಾಗಿದ್ದು, ಅತ್ಯಂತ ಪಾರದರ್ಶಕವಾಗಿದೆ. ಶೋಧ ಕಾರ್ಯದ ಬಳಿಕ ಯಾರಾದರೂ ಪುಸ್ತಕಗಳನ್ನು ಹರಿದಿದ್ದರೆ ಅದು ತಪ್ಪಾಗುತ್ತದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಪಿ ತಿಳಿಸಿದರು.
ತನಿಖೆಯ ದಿಕ್ಕು ತಪ್ಪಿಸಿ, ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ. ಖಲಂದರ್ ಮನೆಯವರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಎಲ್ಲೂ ಪೊಲೀಸರಿಲ್ಲ. ಕುರಾನ್‌ಗೆ ಪೊಲೀಸರು ಅವಮಾನ ಮಾಡಿಲ್ಲ. ತಪಾಸಣೆ ವೇಳೆ ಆರೋಪಿಯ ಕೆಲವೊಂದು ಸುಳಿವುಗಳು ಲಭ್ಯವಾಗಿವೆ. ಶೀಘ್ರದಲ್ಲೇ ಆತನನ್ನು ಬಂಧಿಸುವ ವಿಶ್ವಾಸವಿದೆ. ಯಾವುದೇ ರೀತಿಯಲ್ಲೂ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದವರು ವಿವರಿಸಿದರು.
ವಿಡಿಯೊದಲ್ಲೇನಿದೆ?: ಶೋಧ ಕಾರ್ಯ ಆರಂಭದಿಂದ ಅಂತ್ಯದ ತನಕ ಸಂಪೂರ್ಣ ವಿಡಿಯೊವನ್ನು ಪೊಲೀಸರು ಚಿತ್ರೀಕರಿಸಿದ್ದರು. ಪಂಚರ ಸಮ್ಮುಖದಲ್ಲಿ ಮನೆ ಶೋಧಕ್ಕೆ ಮುಂದಾದ ಪೊಲೀಸರು ಚಪ್ಪಲಿಗಳನ್ನು ಕಳಚಿಟ್ಟು ಮನೆ ಪ್ರವೇಶಿಸಿದ್ದರು. ಮನೆಯವರಿಗೆ ಸರ್ಚ್ ವಾರಂಟ್ ತೋರಿಸಿದ ಬಳಿಕ ಶೋಧ ಕಾರ್ಯ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ಮಧ್ಯೆ ಬ್ಯಾಗ್ ಕಂಡು ಬಂದಿದ್ದು, ಅದರಲ್ಲಿ ಏನಿದೆ ಎಂದು ತನಿಖಾಧಿಕಾರಿ ಮನೆಯವರನ್ನು ಕೇಳಿದಾಗ “ಅದನ್ನು ಮುಟ್ಟುವಂತಿಲ್ಲ’ ಎಂಬ ಉತ್ತರ ಸಿಗುತ್ತದೆ. ಬಳಿಕ ಮನೆಯವರು ಆ ಬ್ಯಾಗ್ ತೆರೆದು ಪೊಲೀಸರಿಗೆ ತೋರಿಸಿದ್ದು, ಪೊಲೀಸರು ಅದನ್ನು ಮನೆಯವರಿಗೆ ಹಸ್ತಾಂತರ ಮಾಡಿದ್ದಾರೆ. ಅಲ್ಲದೆ, ಚೆಕ್ ಪುಸ್ತಕ ಮತ್ತಿತರ ದಾಖಲೆಗಳನ್ನು ಕೂಡ ಮನೆಯವರಿಗೆ ಹಸ್ತಾಂತರಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ವಿಡಿಯೊ ತೋರಿಸಿದ ಬಳಿಕ ಮಾತನಾಡಿದ ಎಸ್‌ಪಿ ಸುಧೀರ್ ರೆಡ್ಡಿ , ತಲೆಮರೆಸಿಕೊಂಡ ಆರೋಪಿಯ ಪತ್ತೆಯಾಗಿ ಸರ್ಚ್ ವಾರಂಟ್ ಪಡೆದುಕೊಂಡೇ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ ಪೊಲೀಸ್ ಸಿಬಂದಿ ಯಾವುದೇ ರೀತಿಯ ಧಾರ್ಮಿಕ ಅಪಚಾರ ಎಸಗಿಲ್ಲ ಎಂದು ಸ್ಪಷ್ಟಪಡಿಸಿದರು.