ದಾವಣಗೆರೆ: ಸಂವಿಧಾನ, ಕಾನೂನುಬದ್ಧವಾಗಿಯೇ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ ಎಂದು ಅಖಿಲ ಕರ್ನಾಟಕ ಡಾ| ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ| ಎಂ.ಪಿ. ದಾರಕೇಶ್ವರಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಟ್ಟಿಗಳ ಕಲಂ 9ರಲ್ಲಿ ಬೇಡ ಜಂಗಮ ಇರುವ ಪ್ರಕಾರವೇ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ. ನಾವು ಯಾರ ಮೀಸಲಾತಿ, ಸೌಲಭ್ಯವನ್ನೂ ಕಿತ್ತುಕೊಳ್ಳುತ್ತಿಲ್ಲ. ಜಂಗಮ ಸಮುದಾಯ 1921ನೇ ಸಾಲಿನಲ್ಲಿ ಖನ್ನತೆಗೆ ಒಳಗಾದ ವರ್ಗದ ಪಟ್ಟಿಯಲ್ಲಿದೆ.
1936ನೇ ಸಾಲಿನಲ್ಲಿ ಜಂಗಮ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಭಿಕ್ಷಾಟನೆ, ಮತ್ತಿತರ ಕುಲಕಸುಬು ಆಧಾರದಲ್ಲಿ ಬೇಡ (ಬುಡ್ಗ) ಜಂಗಮ ಸಮುದಾಯವನ್ನು ಸೇರ್ಪಡೆ ಮಾಡಲಾಗಿತ್ತು. 1953, ಅ.8ರಂದು ಅಂದಿನ ಬಳ್ಳಾರಿ ಜಿಲ್ಲಾಧಿಕಾರಿ, ಚಿಗಟೇರಿ ಗ್ರಾಮದ ಗುರುಮೂರ್ತಿ ಶಿವಾಚಾರ್ಯ ಎಂಬುವರಿಗೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂದರು.
ಕುಲಕಸುಬು ಅರಿವೆ ಬೇಡುವುದು, ಕಣಿ ಹೇಳುವುದು. ಇವರನ್ನು ಗಂಧಂ, ಭೂತಂ, ತೂರಪತಿ ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಹಾಗಾಗಿ ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡಬಾರದು ಎಂಬುದಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಮೂರು ಸುತ್ತೋಲೆಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ಎಸ್‌ಡಬ್ಲ್ಯೂಡಿ 328 ಎಸ್‌ಎಡಿ 95 ಸುತ್ತೋಲೆ ಹಿಂಪಡೆದು ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಾಗ ಯಾವುದೇ ಕಾರಣಕ್ಕೂ ಎಸ್‌ಡಬ್ಲ್ಯೂಡಿ 328 ಎಸ್‌ಎಡಿ 95 ಸುತ್ತೋಲೆ ಅನುಸರಿಸಕೂಡದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.
ಅದರಂತೆ ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆಯಲಾಗಿದೆ. ಉತ್ಛ ನ್ಯಾಯಾಲಯವೇ ಆದೇಶದಲ್ಲಿ ಜಾತಿ ಪ್ರಮಾಣಪತ್ರಗಳಿಗೆ ಮಾನ್ಯತೆ ನೀಡುವ ಜತೆಗೆ ಕುಂದು ಕೊರತೆಗಳಿಗೆ ಸಂಪೂರ್ಣ ಪರಿಹಾರ ನೀಡಿದೆ. ಹಾಗಾಗಿ ನನ್ನ ತಮ್ಮ ರೇಣುಕಾಚಾರ್ಯ ಪುತ್ರಿ ಚೇತನಾ ಪಡೆದಿರುವ ಜಾತಿ ಪ್ರಮಾಣಪತ್ರ ರದ್ದುಪಡಿಸಲು ಬರುವುದಿಲ್ಲ ಎಂದರು. ಡಾ|ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಿದ್ದಲಿಂಗಸ್ವಾಮಿ ಇತರರಿದ್ದರು.
ಸಹೋದರನ ಮಗಳಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಅವರು ಎಂ.ಪಿ.ಚೇತನಾಗೆ 45 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಅವರು ನನ್ನ ತಮ್ಮ ಎಂ.ಪಿ. ರೇಣುಕಾಚಾರ್ಯ ಪುತ್ರಿ ಎಂ.ಪಿ. ಚೇತನಾ ಅಲ್ಲ, ಧಾರವಾಡದ ಎಂ.ಪಿ. ಚೇತನ್ ಹಿರೇಮಠ್ ಆದರೂ ಸುಳ್ಳು ಹೇಳುತ್ತಿದ್ದಾರೆ. ಎಂ.ಪಿ.ರೇಣುಕಾಚಾರ್ಯಗೆ ಬೇಡಜಂಗಮ ಜಾತಿ ಪ್ರಮಾಣಪತ್ರದ ಬಗ್ಗೆ ಗೊತ್ತಿರಲಿಲ್ಲ. ಆ ಬಗ್ಗೆ ಅರಿವೂ ಇರಲಿಲ್ಲ. ನಾವು ಜಾತಿ ಪ್ರಮಾಣಪತ್ರ ಪಡೆದಿದ್ದೇವೆ. ಆದರೆ ಯಾವುದೇ ಸೌಲಭ್ಯ ಪಡೆದಿಲ್ಲ. ಇನ್ನೊಬ್ಬರ ಸೌಲಭ್ಯ ಕಿತ್ತುಕೊಳ್ಳುವುದೂ ಇಲ್ಲ ಎಂದು ದಾರಕೇಶ್ವರಯ್ಯ ಹೇಳಿದರು.