ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳ ಪೈಕಿ ಯಾವುದೇ ಜಾತಿ ಅಥವಾ ಪಂಗಡವನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ವೇಳೆ, ಸಭಿಕರಲ್ಲಿ ಕೆಲವರು ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸಬಾರದು ಎಂದು ಕೂಗು ಹಾಕಿದರು. ಇದಕ್ಕೆ ಪ್ರತಿಕ್ರಯಿಸಿದ ಮುಖ್ಯಮಂತ್ರಿ, ಜಾತಿಗಳನ್ನು ಪಟ್ಟಿಯಿಂದ ತೆಗೆಯುವ ಅಧಿಕಾರ ಪಾರ್ಲಿಮೆಂಟ್‌ಗೆ ಬಿಟ್ಟರೆ ಬೇರೆ ಯಾರಿಗೂ ಇಲ್ಲ ಎಂದರು.
ಪರಿಶಿಷ್ಟ ಜಾತಿ ಪಟ್ಟಿಯಿಂದ ಯಾವುದೇ ಒಂದು ಜಾತಿಯನ್ನು ತೆಗೆದು ಹಾಕಲು ಅಥವಾ ಸೇರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಈ ಬಗ್ಗೆ ನಿಮ್ಮಲ್ಲಿ ತಪ್ಪು ಗ್ರಹಿಕೆ ಇದೆ. ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಒಬ್ಬ ವಕೀಲನಾಗಿ ಹೇಳುತ್ತಿದ್ದೇನೆ ಸಂವಿಧಾನದ ಪರಿಚ್ಛೇದ 341(2) ಪ್ರಕಾರ ಜಾತಿ ಪಟ್ಟಿಯಿಂದ ಯಾವುದೇ ಜಾತಿಯನ್ನು ತೆಗೆದು ಹಾಕಲು ಅಥವಾ ಸೇರಿಸಲು ಪರಮಾಧಿಕಾರ ಇರುವುದು ಪಾರ್ಲಿಮೆಂಟ್‌ಗೆ ಮಾತ್ರ. ಆದ್ದರಿಂದ ಈ ವಿಚಾರದಲ್ಲಿ ಯಾರೂ ಅನುಮಾನ ಇಟ್ಟುಕೊಳ್ಳುವುದು ಅಥವಾ ತಪ್ಪು ಕಲ್ಪನೆಗೆ ಒಳಗಾಗುವುದು ಬೇಡ ಎಂದು ಮುಖ್ಯಮಂತ್ರಿ ಹೇಳಿದರು.
ಸಮುದಾಯ ನಮ್ಮನ್ನು ಬೆಳೆಸಿದೆ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಬಂಜಾರ ಸಮಾಜ ನನ್ನನ್ನು ಬೆಳೆಸಿದೆ. ಈ ಸಮಾಜ ನಂಬಿಕೆ ಅರ್ಹವಾದ ಸಮಾಜ. ಹಾಗಾಗಿ ಸರ್ಕಾರ ನಿಮ್ಮ ಮೇಲೆ ನಂಬಿಕೆ ಇಟ್ಟಿದೆ. ನೀವು ನಮ್ಮನ್ನು ನಂಬಿ. ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯ ಆಗಲು ಬಿಡುವುದಿಲ್ಲ, ನೀವು ನಮ್ಮ ಜೊತೆಗೆ ಇದ್ದರೆ, ನಾವು ನಿಮ್ಮ ಸದಾ ನಿಮ್ಮ ಜೊತೆಗೆ ಇರುತ್ತೇವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಲಂಬಾಣಿ ಜನಾಂಗದ ಸಾಂಪ್ರದಾಯಿಕ ವೇಷಧರಿಸಿ ವೇದಿಕೆಯಲ್ಲಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಸಚಿವರಾದ ಎಚ್. ಆಂಜನೇಯ, ಎಂ.ಬಿ. ಪಾಟೀಲ್, ವಿನಯ್ ಕುಲಕರ್ಣಿ, ರುದ್ರಪ್ಪ ಲಮಾಣಿ, ಪ್ರಿಯಾಂಕ್ ಖರ್ಗೆ, ಶಾಸಕರಾದ ಪಿ.ಟಿ. ಪರಮೇಶ್ವರ್ ನಾಯಕ್, ಶಿವಮೂರ್ತಿ ನಾಯಕ್, ಪಿ. ರಾಜೀವ, ಉಮೇಶ್ ಜಾಧವ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಮತ್ತಿತರರು ಇದ್ದರು.
ಶಿಶುನಾಳರ ಷರೀಪರ ಗೀತೆಗೆ ಅಡ್ಡಿ: ವೇದಿಕೆ ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಗೀತ ಗಾಯನ, ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಕುಣಿತ, ಹಾಡು ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಎಲ್ಲ ಹಾಡುಗಳು ಲಂಬಾಣಿ ಭಾಷೆಯಲ್ಲೇ ಇದ್ದವು. ಈ ಮಧ್ಯೆ ಸಂತ ಶಿಶುನಾಳ ಶರೀಫರ “ತರವಲ್ಲ ತಗಿ ನಿನ್ನ ತಂಬೂರಿ’ ಗೀತೆ ಹಾಡಲಾಯಿತು. ಈ ವೇಳೆ ಕೇಲವರು ಆಕ್ಷೇಪ ವ್ಯಕ್ತಪಡಿಸಿ, ನಮ್ಮ ಜನಾಂಗದ ಭಾಷೆಯ ಹಾಡುಗಳಿರುವಾಗ ಇದ್ಯಾಕೆ ಎಂದು ಪ್ರಶ್ನಿಸಿದರು. ಬೇರೆ ಹಾಡು ಹಾಡಿಸುವ ಮೂಲಕ ಸಂಘಟಕರು ಪರಿಸ್ಥಿತಿ ತಿಳಿ ಗೊಳಿಸಿದರು.