ನವದೆಹಲಿ: ಅಕ್ಟೋಬರ್ ಮಧ್ಯದಲ್ಲಿ ಶಾಂಘೈ ಸಹಕಾರ ಸಂಘಟನೆಯ (SCO) ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ. ಪ್ರವಾಸದ ಕುರಿತು ಘೋಷಿಸಿದ ಒಂದು ದಿನದ “ಬಹುಪಕ್ಷೀಯ ಕಾರ್ಯಕ್ರಮಕ್ಕಾಗಿ ಪಾಕಿಸ್ಥಾನಕ್ಕೆ ಹೋಗುತ್ತಿದ್ದೇನೆ ಹೊರತು ಭಾರತ-ಪಾಕ್ ಸಂಬಂಧಗಳ ಕುರಿತು ಚರ್ಚಿಸಲು ಅಲ್ಲ” ಎಂದು ವಿದೇಶಾಂಗ ಸಚಿವರು ಶನಿವಾರ(ಅ5)ಹೇಳಿದ್ದಾರೆ.
ಐಸಿ ಸೆಂಟರ್ ಫಾರ್ ಗವರ್ನೆನ್ಸ್ ಆಯೋಜಿಸಿದ್ದ ಸರ್ದಾರ್ ಪಟೇಲ್ ಆಡಳಿತದ ಕುರಿತು ಉಪನ್ಯಾಸ ನೀಡಿದ ನಂತರ ಸಂವಾದದ ಸಂದರ್ಭದಲ್ಲಿ ಜೈಶಂಕರ್ ಅವರು ಪ್ರಶ್ನೆಗೆ ಉತ್ತರಿಸಿದರು.
“ಹೌದು, ನಾನು ಈ ತಿಂಗಳ ಮಧ್ಯದಲ್ಲಿ ಪಾಕಿಸ್ಥಾನಕ್ಕೆ ಹೋಗಲಿದ್ದೇನೆ ಮತ್ತು ಅದು SCO ಸಂಘಟನೆಯ ಮುಖ್ಯಸ್ಥರ ಸಭೆಗಾಗಿ. ಸಾಮಾನ್ಯವಾಗಿ, ಪ್ರಧಾನ ಮಂತ್ರಿಗಳು ರಾಷ್ಟ್ರಗಳ ಮುಖ್ಯಸ್ಥರ ಉನ್ನತ ಮಟ್ಟದ ಸಭೆಗಳಿಗೆ ಹೋಗುತ್ತಾರೆ. ಒಬ್ಬ ಮಂತ್ರಿ ಸರಕಾರದ ಮುಖ್ಯಸ್ಥರ ಸಭೆಗೆ ಹೋಗುತ್ತಾರೆ, ಆದ್ದರಿಂದ ಇದು ಸಂಪ್ರದಾಯಕ್ಕೆ ಅನುಗುಣವಾಗಿದೆ, ”ಎಂದರು.
“ಈ ಸಭೆಯು ಪಾಕಿಸ್ಥಾನದಲ್ಲಿ ನಡೆಯುತ್ತಿದೆ, ಏಕೆಂದರೆ ತುಲನಾತ್ಮಕವಾಗಿ ಅವರು ಇತ್ತೀಚಿನ ಸದಸ್ಯರಾಗಿದ್ದಾರೆ” ಎಂದು ಜೈಶಂಕರ್ ಹೇಳಿದರು.
ಪಾಕಿಸ್ಥಾನವು ಅಕ್ಟೋಬರ್ 15 ಮತ್ತು 16 ರಂದು SCO ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ (CHG) ಸಭೆಯನ್ನು ಆಯೋಜಿಸುತ್ತಿದೆ.