Advertisement

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

07:37 PM Oct 05, 2024 | Team Udayavani |

ಹೊಸದಿಲ್ಲಿ: ಹರಿಯಾಣದಲ್ಲಿ ಶನಿವಾರ 90 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್(Congress) ಬಿಜೆಪಿಯ(BJP) ಕೈಯಿಂದ ಅಧಿಕಾರ ಕಸಿದು ಮುಂದಿನ ಸರಕಾರವನ್ನು ರಚಿಸುವ ಸಾಧ್ಯತೆಯಿದೆ ಎಂದು ಹಲವು ಸಮೀಕ್ಷೆಗಳಲ್ಲಿ ಹೇಳಲಾಗಿದೆ. ನಾಲ್ಕು ಎಕ್ಸಿಟ್ ಪೋಲ್‌ಗಳು ಹರಿಯಾಣದ 90 ಸ್ಥಾನಗಳ ಪೈಕಿ 55 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಹೇಳಿವೆ.

Advertisement

ನ್ಯಾಷನಲ್ ಕಾನ್ಫರೆನ್ಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಲುಗೈ ಸಾಧಿಸುತ್ತದೆ ಎಂದು ಸಮೀಕ್ಷೆಗಳು ಹೇಳಿವೆ. ಒಟ್ಟು 90 ಸ್ಥಾನಗಳನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ, ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟವು 43 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ. ಬಹುಮತ 46 ಅಗತ್ಯವಾಗಿದ್ದು ಅದಕ್ಕಿಂತ ಮೂರು ಸ್ಥಾನ ಕಡಿಮೆ ಮೈತ್ರಿಕೂಟ ಗೆಲ್ಲುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ.

2019 ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳನ್ನು, ಕಾಂಗ್ರೆಸ್ 31 ಮತ್ತು ಜನನಾಯಕ್ ಜನತಾ ಪಕ್ಷ (ಜೆಜೆಪಿ) 10 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿಯು ಜೆಜೆಪಿ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತ್ತು. ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿಯಾಗಿದ್ದರು.

ಇಂಡಿಯಾ ಟುಡೇ-ಸಿವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆಯು ಕಾಶ್ಮೀರ ಪ್ರಾಂತ್ಯದ 46 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಪಡೆಯುವ ಮೂಲಕ ಇಂಡಿಯಾ ಬ್ಲಾಕ್ (ನ್ಯಾಶನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಇತರ ಪಕ್ಷ) ಸ್ವೀಪ್ ಮಾಡುವ ಸಾಧ್ಯತೆಯಿದೆ ಎಂದಿದೆ,ಇಲ್ಲಿ ಬಿಜೆಪಿ ಖಾತೆಯೇ ತೆರೆಯುವ ಸಾಧ್ಯತೆ ಕಡಿಮೆ ಎಂದು ಸಮೀಕ್ಷೆ ಹೇಳಿದೆ.

ಮ್ಯಾಟ್ರಿಜ್ ಸಮೀಕ್ಷೆ ಹರಿಯಾಣದಲ್ಲಿ ಕಾಂಗ್ರೆಸ್‌ಗೆ 55-62 ಮತ್ತು ಬಿಜೆಪಿಗೆ 18-24 ಸ್ಥಾನಗಳ ಭವಿಷ್ಯ ನುಡಿದಿದೆ. JJP+ ಗೆ 0-3 ಸ್ಥಾನಗಳು, INLD+ ಗೆ 3-6 ಸ್ಥಾನಗಳು ಮತ್ತು ಇತರರಿಗೆ 2-5 ಸ್ಥಾನಗಳು ಎಂದಿದೆ ಎಎಪಿಗೆ ಶೂನ್ಯ ಎಂದಿದೆ.

Advertisement

ಕಾಂಗ್ರೆಸ್ 57 ಸ್ಥಾನಗಳನ್ನು ಗೆಲ್ಲಬಹುದು ಎಂದು ಧ್ರುವಿ ಭವಿಷ್ಯ ನುಡಿದಿದ್ದು, ಆಡಳಿತಾರೂಢ ಬಿಜೆಪಿ 27 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. JJP+, INLD+, ಮತ್ತು AAP ಗೆ ಶೂನ್ಯ ಸ್ಥಾನಗಳ ಭವಿಷ್ಯ ನುಡಿದಿದೆ. ಇತರರು ಆರು ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ರಿಪಬ್ಲಿಕ್-ಗುಲಿಸ್ಥಾನ್ ಎಕ್ಸಿಟ್ ಪೋಲ್‌ಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಎರಡೂ 90 ಸದಸ್ಯರ ವಿಧಾನಸಭೆಯಲ್ಲಿ ತಲಾ 28 ರಿಂದ 30 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ. ಇದು ಈ ಎರಡು ಪ್ರಮುಖ ಪಕ್ಷಗಳ ನಡುವಿನ ಪೈಪೋಟಿಯನ್ನು ಸೂಚಿಸುತ್ತದೆ.

ಎಕ್ಸಿಟ್ ಪೋಲ್‌ ಕೇವಲ ಟೈಮ್ ಪಾಸ್
ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸಮೀಕ್ಷೆಗಳ ಕುರಿತು ಪ್ರತಿಕ್ರಿಯಿಸಿದ್ದು ”ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್‌ಗಳ ವಿಶ್ವಾಸಾರ್ಹತೆ ತಿಳಿದಿಲ್ಲವೇ? ನಾನು ಎಕ್ಸಿಟ್ ಪೋಲ್‌ಗಳ ವೈಫಲ್ಯದ ನಂತರವೂ ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ಬಗ್ಗೆ ವಿಸ್ಮಯಗೊಂಡಿದ್ದೇನೆ. ಚಾನೆಲ್‌ಗಳು, ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್‌ಗಳಲ್ಲಿ ಹರಟೆ ಮಾಡಲಾಗುತ್ತಿದೆ. ಅಕ್ಟೋಬರ್ 8 ರಂದು ಹೊರ ಬೀಳುವ ಸಂಖ್ಯೆಗಳು ಸಂಖ್ಯೆಗಳು ಮಾತ್ರ ನಿಜವಾದದ್ದು. ಉಳಿದವು ಕೇವಲ ಟೈಮ್ ಪಾಸ್” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next