Advertisement

Davanagere: ಹಳೇ ಜಾತಿಗಣತಿ ಒಪ್ಪಲ್ಲ… ಬೇಕಾದರೆ ಹೊಸದಾಗಿ ಮಾಡಲಿ… :ಶಾಸಕ ಶಾಮನೂರು

10:35 PM Oct 04, 2024 | Team Udayavani |

ದಾವಣಗೆರೆ: ನಾವು ಹಳೇ ಜಾತಿಗಣತಿ ಒಪ್ಪುವುದಿಲ್ಲ. ಬೇಕಾದರೆ ಸರ್ಕಾರ ಹೊಸದಾಗಿ ಜಾತಿಗಣತಿ ಮಾಡಲಿ ಎಂದು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.

Advertisement

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಹೊಸದಾಗಿ ಜಾತಿಗಣತಿ ಮಾಡಲಿ ಎಂದು ನಾವು ಮೊದಲಿನಿಂದಲೂ ಹೇಳುತ್ತ ಬಂದಿದ್ದೇವೆ. ವೀರಶೈವ ಲಿಂಗಾತರ ಒಳ ಪಂಗಡಗಳನ್ನು ಅದರಲ್ಲಿ ಬೇರೆ ಬೇರೆಯಾಗಿ ಗಣತಿ ಮಾಡಿ ವೀರಶೈವ ಲಿಂಗಾಯತರ ಒಟ್ಟು ಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂದರು.

ಸಿಎಂ ಖುರ್ಚಿ ಖಾಲಿ ಇಲ್ಲ:
ಸಿಎಂ ದಲಿತರಾಗಲಿ ಯಾರೇ ಆಗಲಿ ಒಳ್ಳೆಯವರಾಗಲಿ ಆದರೆ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಸಿದರು.

ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನನಗೂ ಏನೂ ವಯಸ್ಸಾಗಿಲ್ಲ. ಕುರ್ಚಿ ಖಾಲಿ ಆದ ಮೇಲೆ ನೋಡೋಣ ಎನ್ನುವ ಮೂಲಕ ತಾವೂ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು.

ಮುಡಾ ಕೇಸ್ ನಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿಲ್ಲ. ಬಿಜೆಪಿಯವರು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದಕ್ಕೆ ಅವರಿಗೆ ಸೈಟ್ ಕೊಟ್ಟಿದ್ದಾರೆ. ಬಿಜೆಪಿಯವರ ಆರೋಪ ಮಾಡುತ್ತಿರುವುದಕ್ಕೆ ಪಾಪ ಅವರ ಪತ್ನಿ ಸೈಟ್ ಮರಳಿಸಿದ್ದಾರೆ ಎಂದರು.

Advertisement

ಪರ, ವಿರೋಧ ಎರಡೂ ಇದೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ: ಜಾತಿ ಜನಗಣತಿ ವರದಿ ಬಿಡುಗಡೆಗೆ ಪರ, ವಿರೋಧ ಎರಡೂ ಇದೆ. ಆದ್ದರಿಂದ ಎಲ್ಲ ಸಮುದಾಯದ ನಾಯಕರೊಂದಿಗೆ ಚರ್ಚೆ ಮಾಡಲಿ. ಕೊನೆಗೆ ಏನಾಗುತ್ತೋ ನೊಡೋಣ ಎಂದು ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಶುಕ್ರವಾರ ಸಂಜೆ ಮಾತನಾಡಿದ ಅವರು, ಮೊದಲು ಜಾತಿ ಜನಗಣತಿ ಬಗ್ಗೆ ಚರ್ಚೆಯಾಗಲಿ ಎಂದು ಅಭಿಪ್ರಾಯಿಸಿದರು. ಜಿಟಿ ದೇವೆಗೌಡರು ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿ ಟಿ ದೇವೆಗೌಡರು ಮಾತನಾಡಿರುವುದು ಸರಿಯಾಗಿದೆ. ಎಫ್ ಐಆರ್ ದಾಖಲಾದವರನ್ನೆಲ್ಲ ಬಂಧಿಸಲು ಆಗುತ್ತಾ..? ಎಲ್ಲರೂ ರಾಜೀನಾಮೆ‌ ಕೊಡಬೇಕಾ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಯಾವುದೇ ರೀತಿ ತಪ್ಪು ಮಾಡಿಲ್ಲ. ಸೈಟ್ ವಾಪಸ್ ಮಾಡಿದ್ರೆ ಅದು ಹೇಗೆ ತಪ್ಪು ಆಗುತ್ತೆ? ಎಂದರು.

Advertisement

Udayavani is now on Telegram. Click here to join our channel and stay updated with the latest news.

Next