Advertisement
ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಈ ಎರಡೂ ಚಿತ್ರಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ, ಎದುರಾಗಿರುವ ಸಮಸ್ಯೆ, ಮುಂದಿನ ಆಲೋಚನೆ ಸೇರಿದಂತೆ ಅನೇಕ ವಿಷಯಗಳ ಕುರಿತು “ಗುಳ್ಟು’ ಚಿತ್ರದ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಹಾಗೂ “ಇದೀಗ ಬಂದ ಸುದ್ದಿ’ ನಿರ್ದೇಶಕ ಎಸ್.ಆರ್.ಪಾಟೀಲ್ ಮಾತನಾಡಿದ್ದಾರೆ. ಅದು ಅವರ ಮಾತುಗಳಲ್ಲೇ …
Related Articles
Advertisement
ಚಿತ್ರರಂಗದ ಬೆಂಬಲ: ನಿಜ ಹೇಳಬೇಕೆಂದರೆ ನಮಗೆ ಇಲ್ಲಿವರೆಗೆ ಚಿತ್ರರಂಗದಿಂದ ಯಾರ ಬೆಂಬಲವೂ ಸಿಕ್ಕಿಲ್ಲ. ಎಲ್ಲರೂ ಗೆದ್ದಿರೋರ ಕಡೆಗೇ ಇದ್ದಾರೆ. ನಿಜ ಹೇಳಬೇಕೆಂದರೆ ನಮ್ಮ ಪರಿಸ್ಥಿತಿ ಜಾತ್ರೆಯಲ್ಲಿ ಕಳೆದು ಹೋದವರು ತರಹ ಆಗಿದೆ. ಆದರೆ, ಒಂದಂತೂ ಖುಷಿ ಇದೆ. ನಾವು ಕೆಟ್ಟ ಸಿನಿಮಾ ಮಾಡಿಲ್ಲ. ನೋಡಿದವರು ಚೆನ್ನಾಗಿದೆ ಅನ್ನುವ ಜೊತೆಗೆ ಸಿಂಗಲ್ ಸ್ಕ್ರೀನ್ ಥಿಯೇಟರ್‌ನಲ್ಲಿರಬೇಕಿತ್ತು ಎನ್ನುತ್ತಾರೆ. ಅದೇ ಕಾರಣದಿಂದ ಮುಂದಿನ ವಾರ (ಏ.13)ಕ್ಕೆ ಬೀದರ್ ಎರಡು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.
ಪ್ರಚಾರದ ಕೊರತೆ: ಸಿನಿಮಾ ಬಿಡುಗಡೆಗೆ ಮುನ್ನ ಹಾಗೂ ನಂತರ ನಮ್ಮ ಸಿನಿಮಾಕ್ಕೆ ಪ್ರಚಾರದ ಕೊರತೆ ಇತ್ತು ಎಂಬ ಮಾತು ಅನೇಕರಿಂದ ಬರುತ್ತಿದೆ. ಅದು ನಿಜ ಕೂಡಾ. ಅದಕ್ಕೆ ಕಾರಣ ಆರ್ಥಿಕ ಸಮಸ್ಯೆ. ನಮಗೆ ಯಾರೂ ನಿರ್ಮಾಪಕರೆಂದು ಇರಲಿಲ್ಲ. ನಾವೇ ಹುಡುಗರು ಸೇರಿಕೊಂಡು ಈ ಸಿನಿಮಾ ಮಾಡಿದ್ದು. ಪತ್ರಿಕೆ, ಟಿವಿ ಹಾಗೂ ಇತರ ಮಾಧ್ಯಮಗಳಿಗೆ ಜಾಹೀರಾತು ಕೊಡುವಷ್ಟು ಕಾಸು ನಮ್ಮಲ್ಲಿರಲಿಲ್ಲ. ಸಿನಿಮಾವನ್ನೇ ನಾವು ತುಂಬಾ ಕಷ್ಟಪಟ್ಟು ಮುಗಿಸಿದ್ದು. ಹಾಗಾಗಿ, ಸಿನಿಮಾಕ್ಕೆ ಪ್ರಚಾರದ ಕೊರತೆ ಕಾಡಿತು. ಈಗಲೂ ಅಷ್ಟೇ ನಾವು ಸಿನಿಮಾವನ್ನು ಪ್ರಚಾರ ಮಾಡಿ, ಜನರಿಗೆ ತಲುಪಿಸುವಷ್ಟು ಸಾಮರ್ಥ್ಯ ಹೊಂದಿಲ್ಲ.
ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ: ಎಲ್ಲಾ ಮಾಧ್ಯಮಗಳಿಂದಲೂ ನಮ್ಮ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳೇ ಕೇಳಿಬರುತ್ತಿದೆ. ನನಗೆ ಒಂದು ನಂಬಿಕೆ ಇತ್ತು, ಅದೇನೆಂದರೆ ಚಿತ್ರದಲ್ಲಿ ಯಾವುದೇ ಕೆಟ್ಟ ಅಂಶಗಳಿಲ್ಲ, ಹೇಳುವುದನ್ನು ಸ್ಪಷ್ಟವಾಗಿ ಹೇಳಿದ್ದೇವೆ. ಹಾಗಾಗಿ, ಇದು ಕೆಟ್ಟ ಸಿನಿಮಾ ಎಂಬ ಹಣೆಪಟ್ಟಿಯಿಂದ ಮುಕ್ತವಾಗಿರುತ್ತದೆ ಎಂದು. ಜೊತೆಗೆ ಕಥೆ, ಚಿತ್ರಕಥೆಯ ಮೇಲೆ ನಿರೀಕ್ಷೆ ಇತ್ತು. ಈಗ ಅದಕ್ಕೆ ಪೂರಕವಾಗಿ ಮಾಧ್ಯಮಗಳು ಕೂಡಾ ನಮ್ಮ ಬೆನ್ನುತಟ್ಟಿವೆ.
ಸಿನಿಮಾದ ಹಿಂದಿನ ಶ್ರಮ: ಈ ಸಿನಿಮಾದ ಹಿಂದೆ ನನ್ನ ಹಾಗೂ ತಂಡದ ಒಂದೂವರೆ ವರ್ಷದ ಶ್ರಮವಿದೆ. 10 ರಿಂದ 12 ಜನರ ತಂಡ ಈ ಸಿನಿಮಾಕ್ಕಾಗಿ ಒಂದೂವರೆ ವರ್ಷದಿಂದ ಶ್ರಮಿಸಿದೆ.
ಬಜೆಟ್: ಇದು ತುಂಬಾ ಕಡಿಮೆ ಬಜೆಟ್‌ನಲ್ಲಿ ಮಾಡಿದ ಸಿನಿಮಾ. ಮೊದಲೇ ಹೇಳಿದಂತೆ ನಮಗೆ ಯಾರೂ ನಿರ್ಮಾಪಕರಿರಲಿಲ್ಲ. ಹಾಗಾಗಿ, ನಾವೇ ಸೇರಿಕೊಂಡು ಮಾಡಿದ್ದು, 32 ಲಕ್ಷ ರೂಪಾಯಿ ಖರ್ಚಾಗಿದೆ.
ಕಮರ್ಷಿಯಲ್ ಸಿನಿಮಾ ಮಾಡಬೇಕು: ಕೆಲವರು ಫೋನ್ ಮಾಡಿ, ಮುಂದೆ ಸಿನಿಮಾ ಮಾಡುವ ಎಂದಿದ್ದಾರೆ. ಜೊತೆಗೆ ಈ ತರಹದ ಸಂದೇಶವಿರುವ ಸಿನಿಮಾಬಿಟ್ಟು, ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುವಂತೆ ಹೇಳಿದ್ದಾರೆ. ಬರೀ ಸಂದೇಶದ ಸಿನಿಮಾ ಮಾಡಿಕೊಂಡು ಇದ್ದರೆ ನೀನು ಕೂಡಾ ಚಿತ್ರರಂಗದಲ್ಲಿ ಒಂದು ಸಂದೇಶವಾಗಿದ್ದು ಬಿಡುತ್ತೀಯಾ ಎಂದಿದ್ದಾರೆ.