Advertisement
ತ್ಯಾಗ, ಬಲಿದಾನ, ಅಹಿಂಸೆಗೆ ನಿಜವಾದ ಅರ್ಥ ಸಿಕ್ಕ ದಿನ.
Related Articles
Advertisement
ಶುಭ್ರ ಸಮವಸ್ತ್ರ ಧರಿಸಿದ ಸ್ಕೌಟ್ಸ್-ಗೈಡ್ಸ್, ಸೇವಾದಳ ಮುಂತಾದ ತಂಡಗಳು ಕ್ರೀಡಾಂಗಣದಲ್ಲಿ ಪರೇಡ್ ಮಾಡುವ ಸೊಬಗು ಅವರ್ಣನೀಯ. ಮೈಕ್ ಎದುರು ನಿಂತು, ಪೂಜ್ಯ ಗುರುಗಳೆ ಹಾಗೂ ನನ್ನ ಸಹಪಾಠಿಗಳೆ ಎಂದು ಭಾಷಣ ಪ್ರಾರಂಭಿಸಿ “ಭಾರತ್ ಮಾತಾಕೀ ಜೈ’ ಎಂದು ನಿಲ್ಲಿಸಿದಾಗ ನೆರೆದವರ ಚಪ್ಪಾಳೆಯ ಸ್ವರ ಕಿವಿ ತುಂಬಿ ಖುಷಿ ಇಮ್ಮಡಿಯಾಗುತ್ತಿತ್ತು.
ಎಳೆ ವಯಸ್ಸಿನಲ್ಲೇ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಭಗತ್ ಸಿಂಗ್, ಗಾಂಧೀಜಿಯವರ ಅಹಿಂಸಾ ನೀತಿಯ ಸತ್ಯಾಗ್ರಹಗಳು, ಸುಭಾಷ್‌ಚಂದ್ರ ಬೋಸ್ ಅವರ ಕ್ರಾಂತಿಯ ಕಥೆಗಳನ್ನು ಕೇಳುತ್ತಿದ್ದರೆ ಮೈನವಿರೇಳುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರ ನೆನಪಿಸುವ ಪ್ರಹಸನಗಳಿಂದ ದೇಶದ ಕುರಿತಾದ ಒಂದಷ್ಟು ಹೊಸ ಸಂಗತಿಗಳ ಕಲಿಕೆಯಾಗುತ್ತಿತ್ತು. ನಮ್ಮ ಹಿರಿಯರ ತ್ಯಾಗದ ಫಲವಾಗಿ ಇಂದು ನಾವು ನೆಮ್ಮದಿಯ ಜೀವನ ಸಾಗಿಸುವಂತಾಗಿದೆ ಎನ್ನುವುದು ಮನದಟ್ಟಾಗುವಂತೆ ಮಾಡುತ್ತಿತ್ತು.
ದೇಶಭಕ್ತಿ, ರಾಷ್ಟ್ರಗೀತೆಗಳಂತಹ ಹಾಡುಗಳು ಕೇಳುಗರ ಕಿವಿಯನ್ನು ಇಂಪಾಗಿಸಿದರೆ, ನೃತ್ಯ, ಛದ್ಮವೇಷಗಳಂತಹ ಮನೊರಂಜನ ಕಾರ್ಯಕ್ರಮ ಇಡೀ ದಿನ ಸಂಭ್ರಮಿಸುವಂತೆ ಮಾಡುತ್ತಿತ್ತು. “ಝಂಡಾ ಊಂಚಾ ರಹೇ ಹಮಾರಾ’ ಎಂದು ಹಾಡುತ್ತಿದ್ದರೆ ದೇಹದ ಕಣ ಕಣದಲ್ಲೂ ದೇಶಭಕ್ತಿ ದ್ವಿಗುಣಗೊಳ್ಳುತ್ತದೆ. ದೇಶದ ಸಂಕೇತವಾಗಿ ಬಾವುಟ ಆಕಾಶದೆತ್ತರಕ್ಕೆ ಏರಿ ಗಾಳಿಯಲ್ಲಿ ನರ್ತಿಸುವುದನ್ನು ನೋಡುವುದೇ ಒಂದು ಖುಷಿ.
ದಿನವಿಡೀ ಇಷ್ಟೆಲ್ಲ ಸಂಭ್ರಮಿಸಿ, ಕುಣಿದಾಡಿದರೂ ಕೊನೆಯದಾಗಿ ವಂದೇ ಮಾತರಂ, ಭಾರತ್‌ಮಾತಾಕೀ ಜೈ, ಜೈ ಜವಾನ್ ಜೈಕಿಸಾನ್ ಘೋಷಣೆಗಳೊಂದಿಗೆ ಸಿಹಿ ತಿನಿಸನ್ನು ಚಪ್ಪರಿಸಿದ ಕ್ಷಣ ಮರೆಯುವಂತಿಲ್ಲ. ಒಟ್ಟಿನಲ್ಲಿ ಜಾತಿ, ಧರ್ಮ ಭೇದಗಳನ್ನು ಮರೆತು ನಾವೆಲ್ಲ ಭಾರತೀಯರು, ನಾವೆಲ್ಲರೂ ಒಂದೇ ಎಂದು ಒಗ್ಗಟ್ಟನ್ನು ಸಾರಿದ ಗರಿಮೆ ನಮ್ಮದು. ನಾವೆಲ್ಲ ಭಾರತ ಮಾತೆಯ ಹೆಮ್ಮೆಯ ಮಕ್ಕಳು ಎನ್ನುವ ಮನೋಭಾವ ಇಂದಿಗೂ ನಮ್ಮಲ್ಲಿ ಜೀವಂತವಿದೆ.