Advertisement

ಜನರಿಗೆ ಸೇವೆ ಸಲ್ಲಿಸುವ ಬದ್ಧತೆ ನಮಗೂ ಇದೆ

11:29 AM Nov 17, 2017 | |

ಬೆಂಗಳೂರು: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ (ಕೆಪಿಎಂಇ) ತಿದ್ದುಪಡಿ ವಿರುದ್ಧ ಒಪಿಡಿ ಸೇವೆ ಸ್ತಗಿತಗೊಳಿಸಿ ಭಾರತೀಯ ವೈದ್ಯ ಸಂಘದ ಬೆಂಗಳೂರು ಘಟಕದ ಸದಸ್ಯರು ಚಾಮರಾಜಪೇಟೆ ಐಎಂಎ ಭವನದ ಎದುರು ಗುರುವಾರ ಮುಷ್ಕರ ನಡೆಸಿದರು.

Advertisement

ಐಎಂಎ, ಫ‌ನಾ, ಎಫ್ಎಚ್‌ಎಕೆ, ಎಎಚ್‌ಪಿಐ ಸೇರಿ 30ಕ್ಕೂ ಅಧಿಕ ವೈದ್ಯಕೀಯ ಸಂಘಟನೆಗಳು ಹಮ್ಮಿಕೊಂಡಿದ್ದ ಮುಷ್ಕರದಲ್ಲಿ ಖಾಸಗಿ ಆಸ್ಪತ್ರೆಯ ಸಾವಿರಾರೂ ವೈದ್ಯರು, ತಿದ್ದುಪಡಿ ವಿಧೇಯಕ ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಮಣಿಪಾಲ್‌ ಹೆಲ್ತ್‌ ಎಂಟರ್‌ಪ್ರೈಸಸ್‌ ಮುಖ್ಯಸ್ಥ ಡಾ. ಸುದರ್ಶನ ಬಲ್ಲಾಳ್‌, ಕೆಪಿಎಂಇ ಸಂಘದ ನಿಯೋಜಿತ ಅಧ್ಯಕ್ಷ ಡಾ.ಜಯಣ್ಣ, ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ದೇವಿಪ್ರಸಾದ್‌ ಶೆಟ್ಟಿ,  ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ, ಕೌಡ್‌ ನೈನ್‌ ಆಸ್ಪತ್ರೆಯ ಡಾ. ಕಿಶೋರ್‌  ಕುಮಾರ್‌, ಡಾ. ರಮಣ ರಾವ್‌, ಎಚ್‌ಸಿಜಿ ಆಸ್ಪತ್ರೆ ನಿರ್ದೇಶಕ ಡಾ.ಅಜಯ್‌ ಕುಮಾರ್‌, ಡಾ. ಮದನ್‌ ಸೇರಿ 10 ಸಾವಿರಕ್ಕೂ ಅಧಿಕ ವೈದ್ಯರು ಪಾಲ್ಗೊಂಡಿದ್ದರು.

ಸಚಿವರನ್ನು ಅಭಿನಂದಿಸುತ್ತೇನೆ: ಡಾ.ಸುದರ್ಶನ್‌ ಬಲ್ಲಾಳ್‌ ಮಾತನಾಡಿ, “ಜನರಿಗೆ ಸೇವೆ ನೀಡುವ ಬದ್ಧತೆ ಖಾಸಗಿ ಆಸ್ಪತ್ರೆಗಳಿಗೂ ಇದೆ. ಸರ್ಕಾರ ನಮ್ಮ ಮೇಲೆ ಸವಾರಿ ಮಾಡಲು ಮುಂದಾಗಿರುವುದು ಸರಿಯಲ್ಲ. ನಾನು ವೈಯಕ್ತಿಕವಾಗಿ ಆರೋಗ್ಯ ಸಚಿವರನ್ನು ಅಭಿನಂದಿಸುತ್ತೇನೆ. ಕಾರಣ, ಸಚಿವರಿಂದಲೇ ನಾವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ.

ಬೆಂಗಳೂರು ಹೆಲ್ತ್‌ ಹಬ್‌ ಆಗಿ ಬೆಳೆಯುತ್ತಿದೆ. ದೇಶ ವಿದೇಶದಿಂದ ಚಿಕಿತ್ಸೆಗಾಗಿ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಚಿಕಿತ್ಸಾ ವೆಚ್ಚದ ದರ ಪಟ್ಟಿ ಪ್ರದರ್ಶಿಸಬೇಕು ಎನ್ನುವುದು ಮಾರಕ. ನಾವು ವೈದ್ಯರ ಕಲ್ಯಾಣಕ್ಕಾಗಿ ಅಲ್ಲ, ಬದಲಾಗಿ ರಾಜ್ಯದ ಕೋಟ್ಯಾಂತರ ಜನರ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಹೋರಾಟ ಮಾಡುತ್ತಿದ್ದೇವೆ,’ ಎಂದು ಹೇಳಿದರು.

Advertisement

ಡಾ. ಬಿ. ಜಯಣ್ಣ ಮಾತನಾಡಿ, ಖಾಸಗಿ ವೈದ್ಯರ ವಿರೋಧದ ನಡುವೆಯೂ ಆರೋಗ್ಯ ಸಚಿವ ರಮೇಶ್‌ ಕುಮಾರ್‌ ವಿಧೇಯಕ ಮಂಡನೆಗೆ ಮುಂದಾಗಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸೇರಿ ಹಲವು ರಾಜಕೀಯ ನಾಯಕರು ತರಾತುರಿಯಲ್ಲಿ ಮಸೂದೆ ತರುವ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ. ಆದರೂ, ತಿದ್ದುಪಡಿ ವಿಧೇಯಕ ತರಲು ಮುಂದಾಗಿರುವುದು ಸರಿಯಲ್ಲ ಎಂದು ಆಗ್ರಹಿಸಿದರು.

ಡಾ.ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, “ಸರ್ಕಾರದ ಹಠದಿಂದಾಗಿ ಐಎಂಎ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ಒಂದು ಕಾಲದಲ್ಲಿ ವೈದ್ಯರನ್ನು ರೋಗಿಗಳು ದೇವರಂತೆ ಪೂಜಿಸುತ್ತಿದ್ದರು. ಈಗ ಸರ್ಕಾರ, ವೈದ್ಯರ ಮೇಲಿನ ನಂಬಿಕೆ ದೂರ ಮಾಡುತ್ತಿದೆ. ಯೋಧರು ಮತ್ತು ವೈದ್ಯ ವೃತ್ತಿಗೆ ಘನತೆ ಇದೆ. ಇದನ್ನು ಪ್ರಶ್ನಿಸಿದರೆ ನಮ್ಮ ವೃತ್ತಿ ಉಳಿಯುವುದಿಲ್ಲ. ನಾವು ಉಗ್ರರಿಗಿಂತ ಬೇಡವಾದೆವಾ?’ ಎಂದು ಪ್ರಶ್ನಿಸಿದರು.

ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಆರೋಗ್ಯದ ಜವಬ್ದಾರಿ ತೆಗೆದುಕೊಳ್ಳಬೇಕು. ಆದರೆ ಹಾಗಾಗುತ್ತಿಲ್ಲ. ಶೇ.90ರಷ್ಟು ಆರೋಗ್ಯ ಕ್ಷೇತ್ರವನ್ನು ನೋಡಿಕೊಳ್ಳುತ್ತಿರುವ ಖಾಸಗಿ ಆಸ್ಪತ್ರೆ, ವೈದ್ಯರು ರೋಗಿಗಳ ಆರೋಗ್ಯ ಸುಧಾರಣೆಗೆ ಮುಂದಾಗಿದ್ದೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾವಿರಕ್ಕೂ ಅಧಿಕ ಹು¨ªೆಗಳು ಖಾಲಿ ಉಳಿದಿದೆ. ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಿದೆ. ಇದು ನಿಜಕ್ಕೂ ಬೇಸರ ತರುವ ವಿಚಾರ ಎಂದು ಹೇಳಿದರು.

ಫ‌ನಾ ಸಂಘಟನೆಯ ಡಾ.ಮದನ್‌ ಗಾಯ್ಕವಾಡ್‌ ಮಾತನಾಡಿ, ಜನಸಾಮಾನ್ಯರ ಹಿತದೃಷ್ಟಿಯಿಂದ ಬೀದಿಗಿಳಿದ್ದೇವೆ. ರೋಗಿಯ ಜೀವ ಉಳಿಸುವುದು ನಮ್ಮ ಧರ್ಮ. ಉಗ್ರನೊಬ್ಬ ಹತ್ಯೆ ಮಾಡಿದರೆ ಆತನ ಮೇಲೆ ಕ್ರಿಮಿನಲ್‌ ಮೊಕ್ಕದಮ್ಮೆ ಹೂಡಲಾಗುತ್ತದೆ. ಖಾಸಗಿ ವೈದ್ಯರು ಉಗ್ರರುಗಿಂತ ಕಡೆಯೇ? ವೈದ್ಯಕೀಯ ವೆಚ್ಚದ ಬಗ್ಗೆ ಎಲ್ಲರೂ ಚರ್ಚೆ ನಡೆಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಕಳೆದ 10 ವರ್ಷಗಳಿಂದ ವೈದ್ಯಕೀಯ ವೆಚ್ಚ ಕಡಿಮೆಯಾಗಿದೆ ಎಂದು ವಿವರಿಸಿದರು.

ಸರ್ಕಾರದ ಹೊಸ ಆದೇಶ: ರಾಜ್ಯದಲ್ಲಿ ಖಾಸಗಿ ವೈದ್ಯರ ಮುಷ್ಕರದಿಂದ ರೋಗಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಜಿಲ್ಲೆ ಹಾಗೂ ತಾಲೂಕು ವೈದ್ಯಾಧಿಕಾರಿಗಳು, ಕಾರ್ಯಕ್ರಮಾಧಿಕಾರಿಗಳು, ಆಹಾರ ಸುರಕ್ಷತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಸಂಚಾರಿ ಆರೋಗ್ಯ ಘಟಕಗಳು (ಮೊಬೈಲ್‌ ಹೆಲ್ತ್‌ ಯುನಿಟ್‌) ದಿನನಿತ್ಯದ ಕರ್ತವ್ಯವನ್ನು ಹೊರತುಪಡಿಸಿ,

ಹೆಚ್ಚಿನ ರೋಗಿಗಳು ಇರುವ ಭಾಗಗಳಿಗೆ ತೆರಳಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಆರ್‌ಬಿಎಸ್‌ಕೆ ಕಾರ್ಯಕ್ರಮಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಶಾಲೆಗಳಿಗೆ ತೆರಳುವ ಬದಲು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎಲ್ಲ ಶುಶ್ರೂಷಕರೂ ದಿನವಿಡೀ ಕಾರ್ಯನಿರ್ವಹಿಸುವಂತೆ ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮೇಲುಸ್ತುವಾರಿ ವಹಿಸುವಂತೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next