ವಯನಾಡ್: ಪೊಟ್ಟಮಾಲ್‌ನಲ್ಲಿ ಒಂದೇ ಕುಟುಂಬದ 6 ಮಂದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಇಡೀ ಮನೆ ನೀರು ಪಾಲಾಗಿದೆ. ಆದರೆ, ಅದೇ ಮನೆಯ 40 ದಿನದ ಹಸುಗೂಸು ಅನರಾ ಮತ್ತು 6 ವರ್ಷದ ಕಂದಮ್ಮ ಮೊಹಮ್ಮದ್ ಹಯನ್ ಮಾತ್ರ ಮೃತ್ಯುಪಾಶದಿಂದ ಪಾರಾಗಿ ದ್ದಾರೆ. ಪ್ರವಾಹದ ನೀರು ಮನೆ ಆವರಿಸುತ್ತಿದ್ದಂತೆಯೇ ಮಕ್ಕಳ ತಾಯಿ ಇಬ್ಬರೂ ಮಕ್ಕಳನ್ನು ಕೈಯಲ್ಲಿ ಹಿಡಿದು ಪಕ್ಕದ ಮನೆಯ ಮಹಡಿ ತಲುಪುವಲ್ಲಿ ಸಫಲರಾಗಿದ್ದಾರೆ. ಅನರಾಳನ್ನು ಅಲ್ಲಿ ರಕ್ಷಿಸಲಾಗಿದೆ. ಇತ್ತ ಹಯನ್ ತಾಯಿಯ ಕೈ ಜಾರಿ ಕೊಚ್ಚಿಹೋಗಿ, ಬಾವಿಯ ಹಗ್ಗದಲ್ಲಿ ಜೋತುಬಿದ್ದು, ರಕ್ಷಣ ಸಿಬ್ಬಂದಿ ಕೈ ಸೇರಿ ಕೊನೆಗೂ ಪಾರಾಗಿದ್ದಾನೆ.
4 ದಿನ ಅನ್ನ ನೀರಿಲ್ಲದೇ ದಿಕ್ಕೆಟ್ಟು ಗುಹೆಯಲ್ಲಿದ್ದ ಕುಟುಂಬ ಪಾರು!
ಚೂರಲ್‌ವುಲ, ಮುಂಡಕೈನಲ್ಲಿ ಭೂ ಕುಸಿತವಾಗುತ್ತಿದ್ದರೆ ಇತ್ತ ಕಾಡುಗಳನ್ನು ಬದಿಗೊತ್ತಿ ಜಲ ಪ್ರಳಯ ಮುನ್ನುಗಿದೆ. ಅದರ ನಡುವೆಯೇ ಬುಡಕಟ್ಟು ಕುಟುಂಬ ವೊಂದು ಅಟ್ಟಮಲ ಅರಣ್ಯದ ಬೆಟ್ಟವೊಂದ ರ ಗುಹೆಯಲ್ಲಿ ಆಶ್ರಯ ಪಡೆದಿದೆ. ಭೂ ಕುಸಿತ ದಿಂದ ಹೊರ ಪ್ರದೇಶದ ಸಂಪರ್ಕವೂ ಇಲ್ಲದೇ, ಅನ್ನ ನೀರುಗಳಿಲ್ಲದೇ ಕಂಗೆಟ್ಟಿದ್ದ ಕುಟುಂಬವನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಸತತ 8 ಗಂಟೆ ಅರಣ್ಯದಲ್ಲಿ ಹುಡುಕಾಟ ನಡೆಸಿ ಈ ಕುಟುಂಬ ಪತ್ತೆ ಯಾಗಿದ್ದು, ಕುಟುಂಬದಲ್ಲಿದ್ದ ದಂಪತಿ ಮತ್ತು 4 ಮಕ್ಕಳನ್ನು ರಕ್ಷಿಸಿ ಹಗ್ಗದ ಮೂಲಕ ಗುಹೆಯಿಂದ ಮೇಲೆ ತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಪವಾಡವೆಂಬಂತೆ ಉಳಿದ ಏಕೈಕ ಮನೆ: 4 ದಿನಗಳ ಬಳಿಕ ಕುಟುಂಬದ ರಕ್ಷಣೆ
ಪ್ರವಾಹಕ್ಕೆ ತತ್ತರಿಸಿದ ಪಡೆವೆಟ್ಟಿಕುನ್ನು ಪ್ರದೇಶದಲ್ಲಿ ಹಲವಾರು ಮನೆಗಳು ಕೊಚ್ಚಿಹೋಗಿವೆ. ಅದರ ನಡುವೆಯೇ ಒಂದು ಮನೆ ಮಾತ್ರ ಸುತ್ತಲಿನ ಸಂಪರ್ಕ ಕಳೆದುಕೊಂಡು ಪ್ರವಾಹದ ನಡುವೆಯೇ ಗಟ್ಟಿಗಾಗಿ ನಿಂತಿದೆ. ಅದೇ ಮನೆಯಲ್ಲಿದ್ದ ನಾಲ್ವರನ್ನು ದುರಂತ ನಡೆದ 4 ದಿನಗಳ ಬಳಿಕ ಪತ್ತೆ ಹಚ್ಚಿ ರಕ್ಷಿಸಲಾಗಿದೆ. ಜಾನ್ ಕೆ.ಜೆ ಅವರ ನಿವಾಸದ ಸುತ್ತಲಿನ ಎಲ್ಲ ಮನೆಗಳು ಕೊಚ್ಚಿ ಹೋಗಿದ್ದು, ನೀರು ಆ ಮಾರ್ಗವಾಗಿ ಸಾಗಿದ ಹಿನ್ನೆಲೆಯಲ್ಲಿ ಜಾನ್ ಅವರ ಮನೆ ಮುಳುಗದೇ ಇರಲು ಸಾಧ್ಯವಾಗಿದೆ. 4 ದಿನಗಳಿಂದ ಅದೇ ಮನೆ ಒಳಗಿದ್ದ ಇಬ್ಬರು ಮಹಿಳೆಯರು ಮತ್ತು ಪುರುಷರು ಬದುಕಿ ಉಳಿದಿರುವ ಬಗ್ಗೆ ಶುಕ್ರವಾರ ತಿಳಿದುಬಂದಿದ್ದು, ರಕ್ಷಣ ಸಿಬಂದಿ ಅವರನ್ನು ಪಾರು ಮಾಡಿದ್ದಾರೆ.
ಸಂತ್ರಸ್ತರಿಗೆ ಉಳಿತಾಯ ನೀಡಿದ ವೃದ್ಧ ದಂಪತಿ: ಜೀವನೋಪಾಯಕ್ಕೆ ಪಲ್ಲಿತೊಟ್ಟಂನಲ್ಲಿ ಚಹಾ ಅಂಗಡಿ ನಡೆಸುತ್ತಿರುವ ಸುಬೈದಾ ವೃದ್ಧ ದಂಪತಿ ಕೇರಳ ಸಿಎಂ ಪರಿಹಾರ ನಿಧಿಗೆ ತಮ್ಮ ಗಳಿಕೆ ಹಾಗೂ ಪಿಂಚಣಿ ಉಳಿತಾಯದ 10,000 ರೂ.ಹಣ ನೀಡಿ ಔದಾರ್ಯತೆ ಮೆರೆದಿದ್ದಾರೆ.
ಸಾವಿನ ಸಂಖ್ಯೆ 333ಕ್ಕೇರಿಕೆ: 130 ಅಂಗಾಂಗಗಳು ಪತ್ತೆ
ದುರಂತದಲ್ಲಿ ಮೃತರ ಸಂಖ್ಯೆ 333ಕ್ಕೇರಿಕೆ ಆಗಿದೆ. 130 ಅಂಗಾಂಗಗಳು ಪತ್ತೆಯಾಗಿವೆ. 300 ಮಂದಿ ಕಾಣೆಯಾಗಿದ್ದು, ಮೃತರ ಸಂಖ್ಯೆ 400ಕ್ಕೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಅವಶೇಷದಡಿ ಜೀವದ ಸುಳಿವು ನೀಡಿದ ಯಂತ್ರ
ಭೂಕುಸಿತ ಸಂಭವಿಸಿರುವ ಮುಂಡಕೈನಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಅವಶೇಷಗಳ ಅಡಿಯಲ್ಲಿ ಜೀವಂತವಿರುವವರ ಸುಳಿವು ಸೇನೆಯ ಥರ್ಮಲ್ ಸ್ಕ್ಯಾನರ್ ಮೂಲಕ ಸಿಕ್ಕಿದೆ. ಜೀವಿಯ ಉಸಿರಾಟವನ್ನು ಪತ್ತೆಹಚ್ಚಿ ಥರ್ಮಲ್ ಸ್ಕ್ಯಾನರ್ ಸಿಗ್ನಲ್ ನೀಡಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಯಾವುದೇ ಕಟ್ಟಡಗಳಲ್ಲಿ ಭಯೋತ್ಪಾದಕರು ಅಡಗಿದ್ದರೆ ಅಂಥವರ ಉಪಸ್ಥಿತಿ ಖಚಿತ ಪಡಿಸಿ ಕೊಳ್ಳಲು ನಾವು ಈ ಥರ್ಮಲ್ ಸ್ಕ್ಯಾನರ್‌ಗಳನ್ನು ಬಳಸುತ್ತಿದ್ದೆವು. ಈ ಮಷೀನ್ ವ್ಯಕ್ತಿಯ ಉಸಿರಾಟ ವನ್ನು ಗ್ರಹಿಸಬಲ್ಲದು. ಅದೇ ರೀ ಸುಳಿವು ಇಲ್ಲಿ ಅವಶೇಷಗಳ ಅಡಿಯಲ್ಲಿ ಸಿಕ್ಕಿದೆ. ಆದರೆ, ಈವರೆಗೆ ಯಾವುದೇ ಜೀವಿಯೂ ಪತ್ತೆಯಾಗಿಲ್ಲ ಕಾರ್ಯಾಚರಣೆ ನಡೆಯುತ್ತಿದೆ ಎಂದಿದ್ದಾರೆ.
ಬೈಲೆ ಸೇತುಗೆ ಮಹಿಳಾ ಸೇನಾಧಿಕಾರಿ ಸಾರಥ್ಯ
ಮೇಜರ್ ಸೀತಾ ಶೆಲ್ಕೆ, ಮೇಪ್ಪಾಡಿಯ ಭೂಕುಸಿತದಿಂದ ಸೇತುವೆ ನಶಿಸಿ ಸಂಪರ್ಕ ಕಡಿತಗೊಂಡಿದ್ದ ಗ್ರಾಮಗಳಲ್ಲಿ ರಕ್ಷಣ ಕಾರ್ಯಕ್ಕಾಗಿ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸಿದ ಮದ್ರಾಸ್ ಎಂಜಿನಿಯರ್ ಗ್ರೂಪ್‌ನ ಸೇನಾಪಡೆಯಲ್ಲಿದ್ದ ಏಕೈಕ ಮಹಿಳಾ ಅಧಿಕಾರಿ. ಸೀತಾ ನೇತೃತ್ವದಲ್ಲಿ 140ಕ್ಕೂ ಹೆಚ್ಚು ಸಿಬಂದಿ ಸಮರೋಪಾದಿಯಲ್ಲಿ ಸೇತುವೆ ನಿರ್ಮಾಣ ಮಾಡಿದ್ದು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಹಾರಾಷ್ಟ್ರ ಮೂಲದ ಸೀತಾ ಸೇತುವೆ ನಿರ್ಮಾಣದ ಬಗ್ಗೆ ಮಾತನಾಡಿದ್ದು, “ಹಲವು ಸಂಕಷ್ಟಗಳ ನಡುವೆ ಸೇತುವೆ ನಿರ್ಮಾಣಗೊಂಡಿದೆ ಎಂದಿದ್ದಾರೆ.
ಕಾಂಗ್ರೆಸ್‌ನಿಂದ 100 ಮನೆಗಳ ನಿರ್ಮಾಣ: ರಾಹುಲ್
ವಯನಾಡಿನಲ್ಲಿ 100ಕ್ಕೂ ಅಧಿಕ ಮನೆಗಳನ್ನು ಕಾಂಗ್ರೆಸ್ ನಿರ್ಮಿಸಿಕೊಡಲು ಬದ್ಧವಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಭೂಕುಸಿತದ ಸಂಭವಿಸಿದ ಸ್ಥಳಗಳಿಗೆ ಗುರುವಾರ ಭೇಟಿ ನೀಡಿದ್ದ ರಾಹುಲ್, ಶುಕ್ರವಾರವೂ ಸಂತ್ರಸ್ತರೊಂದಿಗೇ ಇದ್ದು ಧೈರ್ಯ ತುಂಬಿದ್ದಾರೆ. ನಿರಾಶ್ರಿತ ಶಿಬಿರಗಳಿಗೂ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ನಾವು ಇಲ್ಲಿರುವುದೇ ಸಂತ್ರಸ್ತರ ನೆರವಿಗಾಗಿ. ಈಗಾಗಲೇ ಆಡಳಿತಾಧಿಕಾರಿಗಳು, ಪಂಚಾಯತ್ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಹಾನಿಗೊಳಗಾದ ಮನೆಗಳ ಸಂಖ್ಯೆ, ನಿರಾಶ್ರಿತರು ಮತ್ತು ಕಾಣೆಯಾದವರ ಬಗ್ಗೆ ಮಾಹಿತಿ ಪಡೆದಿದ್ದೇನೆ. ವಯನಾಡಿನಲ್ಲಿ ಸಂಭವಿಸಿರುವ ಈ ದುರಂತ ಬಹುದೊಡ್ಡ ಮಟ್ಟದ್ದು. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗಾಗಿ 100ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇಲ್ಲಿನ ಪರಿಹಾರ ಕಾರ್ಯಗಳ ಕುರಿತು ದಿಲ್ಲಿಯಲ್ಲೂ ವಿಚಾರ ಪ್ರಸ್ತಾವಿಸಲಿದ್ದೇನೆ ಎಂದೂ ರಾಹುಲ್ ಭರವಸೆ ನೀಡಿದ್ದಾರೆ.