Advertisement
ಮರಿಗೆಮ್ಮದಿಬ್ಬಿ, ತುಗ್ಲೆರದೊಡ್ಡಿ, ಕಾಳಪ್ಪನ ತಾಂಡಾ, ಎಚ್.ಎನ್.ತಾಂಡಾ, ಕುರ್ಲೆರದೊಡ್ಡಿ, ಬೂದೆಪ್ಪನ ತಾಂಡಾ,ನಾಮನಾಯ್ಕ ತಾಂಡಾ, ಧರ್ಮನಾಯ್ಕ ತಾಂಡಾ, ತಳವಾರದೊಡ್ಡಿ, ಅರಕೇರಾ ಸೇರಿ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಆರೇಳು ವರ್ಷಗಳಿಂದ ತೀರಾ ಹದಗೆಟ್ಟು ಹೋಗಿದೆ. ಅರಕೇರಾ, ಕೊತ್ತದೊಡ್ಡಿ, ಕೋತಿಗುಡ್ಡ, ಮನಸಗಲ್, ಹೇಮನೂರು ಸೇರಿ ಇತರೆ ಗ್ರಾಮಗಳ ಜನರು ಈ ಮಾರ್ಗದ ಮೂಲಕವೇ ಪಟ್ಟಣಕ್ಕೆ ಆಗಮಿಸುತ್ತಾರೆ. ರಸ್ತೆಯ ಡಾಂಬರ್, ಕಲ್ಲು ಖಡಿ ಕಿತ್ತುಹೋಗಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿವೆ. ಬರೀ ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ವಾಹನ ಸವಾರರು, ಚಾಲಕರು ಸರ್ಕಸ್ ಮಾಡುವಂತಾಗಿದೆ.
ಅಧಿಕಾರಿಗಳು, ಗುತ್ತಿಗೆದಾರರು ಮಿಲಾಪಿಯಾಗಿ ಕಳಪೆ ಕಾಮಗಾರಿ ಮಾಡಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇಲ್ಲಿನ ಬಹುತೇಕ ಗ್ರಾಮಗಳಿಗೆ ದಶಕ ಕಳೆದರೂ ಸಾರಿಗೆ ಬಸ್ ಭಾಗ್ಯ ಕಾಣದಾಗಿದೆ. ಗ್ರಾಮಸ್ಥರು, ಗ್ರಾಮೀಣ ಶಾಲೆಗೆ ಬರುವ ಶಿಕ್ಷಕರು ಟಂಟಂ ರಿಕ್ಷಾಗಳನ್ನೇ ಅವಲಂಬಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.