Advertisement

ಏರಿದ ಬಿಸಿಲ ಬೇಗೆ: ಕಲ್ಲಂಗಡಿಗೆ ಭರ್ಜರಿ ಬೇಡಿಕೆ

06:30 AM Apr 05, 2018 | Team Udayavani |

ಮಲ್ಪೆ: ಕೆಲದಿನಗಳಿಂದ ಬಿಸಿಲ ಝಳ ತೀವ್ರ ಏರಿಕೆ ಕಾಣುತ್ತಿದ್ದು, ಕಲ್ಲಂಗಡಿ (ಬಚ್ಚಂಗಾಯಿ)ಗೆ ಭರ್ಜರಿ ಬೇಡಿಕೆ ಕುದುರತೊಡಗಿದೆ. ನಗರ ಮತ್ತು ಹಳ್ಳಿಗಳಲ್ಲಿ ಬಾಯಿ ನೀರೂರಿಸುವ ಹಣ್ಣುಗಳಿಗೆ ಜನತೆ ಮುಗಿಬೀಳತೊಡಗಿದ್ದಾರೆ. 
ಬಿಸಿಲಿನಿಂದ ದಣಿದ ದೇಹಕ್ಕೆ ರಸವತ್ತಾದ ಕಲ್ಲಂಗಡಿ ಹಣ್ಣು ಫೇವರೆಟ್‌ ಆಗಿದ್ದು, ರಸ್ತೆ ಬದಿ ರಾಶಿ ಹಾಕಿದ ಕಲ್ಲಂಗಡಿ ಅಂಗಡಿ ಎದುರು ಹಣ್ಣು ತಿಂದು ದಣಿವಾರಿಸಿ, ಮನೆಗೂ ತೆಗೆದುಕೊಂಡು ಹೋಗುತ್ತಿದ್ದಾರೆ. ಆದಿವುಡುಪಿ, ಅಜ್ಜರಕಾಡು ಸಹಿತ ನಗರದ ಹಲವೆಡೆ ರಸ್ತೆ ಬದಿ ಕಲ್ಲಂಗಡಿ ಮಾರಾಟ ಬಿರುಸಿನಿಂದ ಸಾಗಿದೆ.  

Advertisement

ಬಾಯಾರಿಕೆಗೆ, ಆರೋಗ್ಯಕ್ಕೂ ಬೆಸ್ಟ್‌ 
ಕಲ್ಲಂಗಡಿ ಬಿಸಿಲ ಬೇಗೆಗೆ ಬಾಯಾರಿಕೆಗೆ ಅತ್ಯಂತ ಉತ್ತಮ ಹಣ್ಣು. ಇದರಲ್ಲಿ ನೀರಿನ ಅಂಶ ಹೆಚ್ಚಿದ್ದು ಬಾಯಾರಿಕೆ ಕಳೆಯುತ್ತದೆ. ಜೀರ್ಣಶಕ್ತಿ ವೃದ್ಧಿಸುತ್ತದೆ. ಬೇಸಗೆಯಲ್ಲಿ ಶುಭ ಸಮಾರಂಭಗಳಲ್ಲೂ ವೆಲ್‌ಕಂ ಡ್ರಿಂಕ್ಸ್‌ ಆಗಿ ಕಲ್ಲಂಗಡಿ ಜ್ಯೂಸ್‌ ಅನ್ನೇ ಬಳಸುವುದೂ ಈಗ ಹೆಚ್ಚಿದೆ. 

ಇನ್ನು ಇದರಲ್ಲಿ ಔಷಧೀಯ ಗುಣಗಳೂ ಇದ್ದು ಆರೋಗ್ಯಕ್ಕೂ ಉತ್ತಮ. ಕ್ಯಾಲ್ಸಿಯಂ, ಪೊಟ್ಯಾಶಿಯಂ, ವಿಟಮಿನ್‌ ಎ., ವಿಟಮಿನ್‌ ಸಿ. ಮೊದಲಾದ ಜೀವ ಸತ್ವಗಳು ಇವೆ. ಕೊಬ್ಬು-ಕೊಲೆಸ್ಟರಾಲ್‌ ಮುಕ್ತವಾಗಿರುವ ಈ ಹಣ್ಣು ಶಕ್ತಿವರ್ಧಕ, ಸೌಂದರ್ಯ ವರ್ಧಕವೂ ಆಗಿದೆ. ಕಣ್ಣುರಿ, ಕಜ್ಜಿ, ತುರಿಕೆ ಇತ್ಯಾದಿಗಳ ಶಮನಕ್ಕೂ ಇದು ರಾಮಬಾಣ.  

ಕೆ.ಜಿ.ಗೆ 15ರಿಂದ 20 ರೂ. 
ಆಂಧ್ರಪ್ರದೇಶದ ಶುಗರ್‌ ಕ್ವೀನ್‌ ಜಾತಿಯ ಕಲ್ಲಂಗಡಿ ಇಲ್ಲಿನ ಮಾರುಕಟ್ಟೆಗೆ ಹೆಚ್ಚಾಗಿ ಪೂರೈಕೆಯಾಗುತ್ತಿದೆ. ಇದು ಒಳಗೆ ಕಡುಕೆಂಪು ಬಣ್ಣವನ್ನು ಹೊಂದಿದ್ದು, ಹೆಚ್ಚು ಸಿಹಿಯೂ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆಯುವ ಕಡು ಹಸುರು ಬಣ್ಣದ ಸುಪ್ರೀಮ್‌ ಮತ್ತು ಸ್ಥಳೀಯವಾಗಿ ಕೋಟದಲ್ಲಿ ಬೆಳೆಯುವ ತಿಳಿ ಹಸುರಿನ ನಾಮ್‌ಧಾರಿ ಕಲ್ಲಂಗಡಿ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವೆಲ್ಲವೂ ಕೆ.ಜಿ.ಗೆ 15ರಿಂದ 20 ರೂ.ವರೆಗೆ ಮಾರಾಟವಾಗುತ್ತಿವೆ.  

– ನಟರಾಜ್‌ ಮಲ್ಪೆ

Advertisement
Advertisement

Udayavani is now on Telegram. Click here to join our channel and stay updated with the latest news.

Next