ಬೆಂಗಳೂರು: ಹಾಪ್‌ಕಾಮ್ಸ್‌ನಿಂದ ಪ್ರಾರಂಭಿಸಲಾಗಿರುವ “ಹಾರ್ಟಿಬಜಾರ್’ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ ತಿಳಿಸಿದ್ದಾರೆ. ಕಸ್ತೂರಿ ನಗರದಲ್ಲಿ ಹಾಪ್‌ಕಾಮ್ಸ್ ಆರಂಭಿಸಿರುವ ಹಾರ್ಟಿ ಬಜಾರ್ ಮಳಿಗೆಯಲ್ಲಿ ಶುಕ್ರವಾರ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಎರಡು ತಿಂಗಳ ಹಿಂದೆ ತೆರೆಯಲಾಗಿರುವ ಹಾರ್ಟಿಬಜಾರ್ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಶೀಘ್ರದಲ್ಲೇ ಸದಾಶಿವನಗರ ಹಾಗೂ ಮೈಸೂರು ರಸ್ತೆಯ ಜಾನಪದ ಲೋಕ ಬಳಿ ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ನಗರದಲ್ಲಿ 30 ರಿಂದ 40 ಕಡೆ ಪ್ರಾರಂಭಿಸುವ ಯೋಜನೆಯಿದೆ ಎಂದು ಹೇಳಿದರು. ಹಾರ್ಟಿಬಜಾರ್‌ನಲ್ಲಿ ಹಣ್ಣು, ತರಕಾರಿ, ಪಾನೀಯ, ಐಸ್‌ಕ್ರೀಂ , ಹಾಲಿನ ಉತ್ಪನ್ನ, ದ್ರಾಕ್ಷಾ ರಸ, ಸಿರಿಧಾನ್ಯಗಳು, ಕ್ಯಾಂಪ್ಕೋ ಉತ್ಪನ್ನಗಳು ಸಿಗಲಿದ್ದು, ದಿನಕ್ಕೆ 40ರಿಂದ 50 ಸಾವಿರ ರೂ. ವರೆಗೆ ವಹಿವಾಟು ನಡೆಯುತ್ತಿದೆ ಎಂದು ತಿಳಿಸಿದರು.
ಹಾರ್ಟಿ ಬಜಾರ್‌ನಿಂದ ಬರುವ ಆದಾಯದಲ್ಲಿ ಶೇ.3ರಿಂದ 5ರಷ್ಟು ಕಟ್ಟಡ ಮಾಲೀಕರಿಗೆ ನೀಡಲಾಗುವುದು. ಕಸ್ತೂರಿ ನಗರದ ಮಾಲೀಕರಿಗೆ ತಿಂಗಳಿಗೆ 45ರಿಂದ 50 ಸಾವಿರ ರೂ. ಬಾಡಿಗೆ ಸಿಗುತ್ತಿದೆ. ಹಾಪ್‌ಕಾಮ್ಸ್ ಸಹಭಾಗಿತ್ವದೊಂದಿಗೆ ಹಾರ್ಟಿ ಬಜಾರ್ ಮಳಿಗೆಯನ್ನು ಪ್ರಾರಂಭಿಸಲು ಬಯಸುವವರು ಹಾಪ್‌ಕಾಮ್ಸ್ ಕಚೇರಿಯನ್ನು ಸಂಪರ್ಕಿಸಬಹುದು. 800 ರಿಂದ 1 ಸಾವಿರ ಚದರಡಿಯಷ್ಟು ವಿಸ್ತೀರ್ಣದ ಜಾಗ ಇದಕ್ಕೆ ಸಾಕು ಎಂದು ಹೇಳಿದರು.
ಪಾಲಿಕೆ ಸದಸ್ಯೆ ಮೀನಾಕ್ಷ್ಮಿ ಲಕ್ಷ್ಮೀಪತಿ, ಹಾಪ್‌ಕಾಮ್ಸ್ ತನ್ನ ಮಾರುಕಟ್ಟೆ ಜಾಲವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಹಾರ್ಟಿ ಬಜಾರ್ ಪರಿಕಲ್ಪನೆ ಅತ್ಯಂತ ಯಶಸ್ವಿ ಹೆಜ್ಜೆ ಎಂದು ಶ್ಲಾ ಸಿದರು. ಹಾಪ್‌ಕಾಮ್ಸ್‌ನಲ್ಲಿ ರೈತರಿಂದ ನೇರವಾಗಿ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಿ, ಗ್ರಾಹಕರಿಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಅಂಗ ಸಂಸ್ಥೆಯೊಂದು ರೈತ ಮತ್ತು ಗ್ರಾಹಕರ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಪ್ರಶಂಸನೀಯ.
ಯಾವುದೇ ರಾಸಾಯನಿಕ ಬಳಸದೆ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ಒದಗಿಸುತ್ತಿರುವುದರಿಂದ ಆರೋಗ್ಯದ ದೃಷ್ಠಿಯಿಂದಲೂ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ಹಾರ್ಟಿ ಬಜಾರ್ ಮಾರುಕಟ್ಟೆ ವ್ಯವಸ್ಥೆಯನ್ನು ನಗರದೆಲ್ಲೆಡೆ ವಿಸ್ತರಿಸುವ ಕಾರ್ಯವಾಗಬೇಕು. ಪ್ರತಿ 5 ಕಿ.ಮೀ.ಗೆ ಒಂದರಂತೆ ಇಂತಹ ಮಳಿಗೆಗಳು ಇರಬೇಕು.
ಸಾಧ್ಯವಾದರೆ ಆನ್‌ಲೈನ್ ಮೂಲಕ ಮನೆ ಬಾಗಿಲಿಗೆ ಹಣ್ಣು, ತರಕಾರಿ ತಲುಪಿಸುವ ಸೇವೆ ಆರಂಭಿಸಿದರೆ ಮುಂದಿನ ದಿನಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಹಾಪ್‌ಕಾಮ್ಸ್ ಅಧಿಕಾರಿಗಳು ಚಿಂತನೆ ನಡೆಸಬೇಕು. ಇದರಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು. ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸನ್, ಉಪನಿರ್ದೇಶಕ ಪ್ರಶಾಂತ್ ಉಪಸ್ಥಿತರಿದ್ದರು.
ಮಾರ್ಚ್ ಅಂತ್ಯದವರೆಗೆ ಮೇಳ
ಹಾರ್ಟಿ ಬಜಾರ್‌ನಲ್ಲಿ ಪ್ರಾರಂಭವಾಗಿರುವ ದ್ರಾಕ್ಷಿ, ಕಲ್ಲಂಗಡಿ ಮೇಳ ಮಾರ್ಚ್ ಅಂತ್ಯದವರೆಗೆ ನಡೆಯಲಿದೆ. ಶೇ.10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳು ಸಿಗಲಿವೆ.