Advertisement

ಕಲ್ಲಂಗಡಿ ಬೆಳೆ ಬೆಳೆಯಲು ರೈತರ ನಿರಾಸಕ್ತಿ

05:23 PM Feb 07, 2022 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಕಲ್ಲಂಗಡಿ ಬೆಳೆಗೆ ನಿರಂತರ ಮಳೆ ಹಾಗೂ ಮತ್ತೆ ಲಾಕ್‌ಡೌನ್‌ ಆಗಬಹುದು ಎನ್ನುವ ಭೀತಿಯಿಂದಾಗಿ ಈ ಬಾರಿ ರೈತರು ನಿರಾಸಕ್ತಿ ತೋರಿದ್ದಾರೆ.

Advertisement

ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಸುಮಾರು 100 ರಿಂದ 150 ಹೆಕ್ಟೇರ್‌ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯನ್ನು ಬೆಳೆಯುತ್ತಾರೆ. ಆದರೆ ಈ ಬಾರಿ ಒಟ್ಟಾರೆ ಕೇವಲ 20 ರಿಂದ 30 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಕಲ್ಲಂಗಡಿ ಬೆಳೆಯನ್ನು ಬೆಳೆದಿದ್ದಾರೆ. ಆ ಮೂಲಕ ಕಲ್ಲಂಗಡಿ ಬೆಳೆಯಿಂದ ಅನ್ಯ ಕೃಷಿಯತ್ತ ರೈತರು ಚಿತ್ತ ಹರಿಸಿದ್ದಾರೆ.

ಬೈಂದೂರು ತಾಲೂಕಿನಲ್ಲಿ ಕಿರಿಮಂಜೇಶ್ವರ ಗ್ರಾಮದಲ್ಲಿ ಗರಿಷ್ಠ 18 ಹೆಕ್ಟೇರ್‌, ಕಂಬದಕೋಣೆ, ಹೇರೂರು, ನಂದನವನ, ಕೆರ್ಗಾಲು, ಉಪ್ಪುಂದ, ಬಿಜೂರು, ಶಿರೂರು, ನಾವುಂದ ಮತ್ತಿತರ ಪ್ರದೇಶಗಳಲ್ಲಿ ಹೆಚ್ಚಾಗಿ ಕಲ್ಲಂಗಡಿ ಬೆಳೆ ಬೆಳೆಯುತ್ತಾರೆ.

2 ವರ್ಷಗಳ‌ಲ್ಲಿ ನಷ್ಟ
ಕುಂದಾಪುರ, ಬೈಂದೂರು ಭಾಗದಲ್ಲಿ ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಮಾರ್ಚ್‌, ಎಪ್ರಿಲ್‌ ವೇಳೆಗೆ ಕೊಯ್ಲುಗೆ ಬರುತ್ತದೆ. ಆದರೆ ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಕೊರೊನಾದಿಂದಾಗಿ ಮಾರ್ಚ್‌, ಎಪ್ರಿಲ್‌, ಮೇ ವೇಳೆಗೆ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲಾಗದೇ, ಕೆಲ ಹಣ್ಣಿಗೆ ಬೇಡಿಕೆ ಯಿದ್ದರೂ, ನಿರೀಕ್ಷಿತ ಬೆಲೆ ಇಲ್ಲದೇ, ನಷ್ಟದಲ್ಲಿಯೇ ಮಾರಾಟ ಮಾಡಿದ ಪ್ರಸಂಗವೂ ನಡೆದಿತ್ತು. ಅದಕ್ಕಾಗಿ ಈ ವರ್ಷ ಬಹುತೇಕ ಮಂದಿ ಕಲ್ಲಂಗಡಿ ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಇನ್ನು ಡಿಸೆಂಬರ್‌ವರೆಗೂ ಮಳೆ ಬರುತ್ತಿದ್ದುದರಿಂದ ಕಲ್ಲಂಗಡಿ ನಾಟಿ ಕಾರ್ಯಕ್ಕೂ ತೊಡಕಾಗಿತ್ತು.

ಇತರ ಬೆಳೆಯತ್ತ ಚಿತ್ತ
ಕಲ್ಲಂಗಡಿ ಬೆಳೆಯುವ ರೈತರು ಇತರ ಬೆಳೆಯತ್ತ ಈ ಬಾರಿ ಚಿತ್ತ ಹರಿಸಿದ್ದಾರೆ. ಕೆಲವರು ಗದ್ದೆಯನ್ನು ಹಡಿಲು ಬಿಟ್ಟರೆ, ಇನ್ನು ಕೆಲವರು ನೆಲಗಡಲೆ, ಮತ್ತೆ ಕೆಲವರು ಹಿಂಗಾರು ಹಂಗಾಮಿನಲ್ಲೂ ಭತ್ತದ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

Advertisement

ಬಂಪರ್‌ ಬೆಲೆ ನಿರೀಕ್ಷೆ
ಇನ್ನು ಈ ಬಾರಿ ಸರಿಸುಮಾರು ಮುಕ್ಕಾಲು ಭಾಗದಷ್ಟು ಜಾಗದಲ್ಲಿ ಬೆಳೆಯುವ ಕಲ್ಲಂಗಡಿ ಬೆಳೆ ಕಡಿಮೆಯಾಗಿದ್ದು, ಇದರಿಂದಾಗಿ ಬೆಳೆದ ಸ್ವಲ್ಪ ಜನರಿಗೆ ಬಂಪರ್‌ ಬೆಲೆ ನಿರೀಕ್ಷೆಯಲ್ಲಿ ರೈತರದ್ದಾಗಿದೆ.

ಕಡಿಮೆ ಬೆಳೆದಿದ್ದೇನೆ
ನಾನು ಪ್ರತೀ ವರ್ಷ 4-5 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆಯುತ್ತಿದ್ದೆ. ಆದರೆ ಈ ಬಾರಿ ಗೇಣಿ ವಹಿಸಿಕೊಂಡು ಬೆಳೆಯುವ ಜಾಗದಲ್ಲಿ ಬೆಳೆದಿಲ್ಲ. ಕಳೆದ ಬಾರಿಗಿಂತ 1 ಎಕರೆ ಕಡಿಮೆ ಬೆಳೆದಿದ್ದೇನೆ. ಕಳೆದೆರಡು ವರ್ಷ ಸೀಸನ್‌ನಲ್ಲೇ ಹೊಡೆತ ಬಿದ್ದಿತ್ತು. ಈ ಬಾರಿ ಕೆಲವರು ಮಳೆಯಿಂದಾಗಿಯೂ ಬೆಳೆಯಲು ಮುಂದಾಗಿಲ್ಲ.
– ಪುಂಡರೀಕ ಮಧ್ಯಸ್ಥ, ಕಿರಿಮಂಜೇಶ್ವರ, ಕಲ್ಲಂಗಡಿ ಕೃಷಿಕರು

ಕಲ್ಲಂಗಡಿ ಇಳಿಮುಖ
ಬೈಂದೂರು ಭಾಗದಲ್ಲಿ ಬೆಳೆಯುವ ಕಲ್ಲಂಗಡಿ ಬೆಳೆ ಈ ಬಾರಿ ತುಂಬಾ ಇಳಿಮುಖವಾಗುವ ಸಂಭವವಿದೆ. ಕಲ್ಲಂಗಡಿ ಬೆಳೆಯುವವರೆಲ್ಲ ನೆಲಗಡಲೆ ಬೆಳೆಯಲು ಮುಂದಾಗಿದ್ದಾರೆ. ಮಳೆ, ಲಾಕ್‌ಡೌನ್‌ ಭೀತಿಯಿಂದ ರೈತರು ಈ ತೀರ್ಮಾನ ಕೈಗೊಂಡಿರಬಹುದು.
– ಹೇಮಂತ್‌ ಕುಮಾರ್‌, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ ಉಡುಪಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next