ಚಿಂಚೋಳಿ: 2023ರಲ್ಲಿ ನಡೆಯುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಎಲ್ಲ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು, ಇದೇ “ಜನತಾ ಜಲಧಾರೆ’ ಕಾರ್ಯಕ್ರಮ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಹತ್ತಿರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಕುರಿತು ಕೆಲವರು ಉಡಾಫೆ ಮಾತುಗಳನ್ನಾಡುತ್ತಾರೆ. ಆದರೆ ಜೆಡಿಎಸ್ ಅಧಿಕಾರದಲ್ಲಿದ್ದಾಗ ರೈತರ ಸಾಲ ಮನ್ನಾ ಮಾಡಲಾಗಿದೆ ಎನ್ನುವುದನ್ನು ಗಮನಿಸಬೇಕು ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಆಗ 24 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದು ದೇಶದಲ್ಲೇ ಐತಿಹಾಸಿಕ ಸಾಧನೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಅನೇಕ ಭಾಗ್ಯಗಳನ್ನು ಕೊಟ್ಟಿದ್ದಾರೆ. ಆದರೆ 2018ರ ಚುನಾವಣೆಯಲ್ಲಿ 130 ಸ್ಥಾನಗಳಲ್ಲಿ ಕೇವಲ 79 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು. ಜೆಡಿಎಸ್ 38 ಸ್ಥಾನ ಗಳಿಸಿತ್ತು. ಹೀಗಿದ್ದಾಗ್ಯೂ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆ ಮಾಡಿ ರೈತರಿಗೋಸ್ಕರ ಒಳ್ಳೆಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು ಎಂದರು.
ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ನೀರಾವರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರದ ವೈಫಲ್ಯಗಳು ಮತ್ತು ಸಮಸ್ಯೆಗಳ ಬಗ್ಗೆ ಹೋರಾಟ ನಡೆಸುತ್ತಿಲ್ಲ. ನಮ್ಮದು ನಗದಿ ಕೆಲಸ, ಉದ್ರಿ ಕೆಲಸ ಎಂದಿಗೂ ಮಾಡುವುದಿಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣ ಕಡೆಗೆ ಪಾದಯಾತ್ರೆ ನಡೆಸಿತ್ತು. ಅದರಿಂದ ಏನು ಫಲ ಸಿಕ್ಕಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ಎತ್ತಿನಹೊಳೆ, ಮಹಾದಾಯಿ ಆಲಮಟ್ಟಿ ನೀರಾವರಿ ಯೋಜನೆಗಳಿಂದ ಇನ್ನು ರೈತರ ಜಮೀನುಗಳಿಗೆ ನೀರು ಬಳಕೆಯಾಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕಾದರೆ, ರೈತರು ಉದ್ಧಾರ ಆಗಬೇಕಾದರೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯವಿದೆ ಎಂದರು.
ಬೀದರ ಜಿಲ್ಲೆಯ ಗೋದಾವರಿ ಉಪ ನದಿ ಮಾಂಜ್ರಾ ನದಿಯ ನೀರು ಅನಾವಶ್ಯಕವಾಗಿ ಹರಿದು ಹೋಗುತ್ತಿದೆ. ತೆಲಂಗಾಣ ಸರ್ಕಾರ ಗೋದಾವರಿ ನದಿ ನೀರು ಬಳಕೆ ಮಾಡಿಕೊಳ್ಳುವುದಕ್ಕಾಗಿ ಕಾಳೇಶ್ವರ ಹತ್ತಿರ 1.20ಲಕ್ಷ ಕೋಟಿ ರೂ.ಗಳಲ್ಲಿ ಜಲಾಶಯ ನಿರ್ಮಿಸುತ್ತಿದೆ. ಇದರಲ್ಲಿ 10 ಸಾವಿರ ಜನರಿಗೆ ಉದ್ಯೋಗ ಸಿಕ್ಕಿದೆ. ನಮ್ಮ ರಾಜ್ಯದಲ್ಲಿ ಕೇವಲ ಹಲಾಲ್, ಹಿಜಾಬ್, ಮಸೀದಿಗಳಲ್ಲಿ ಧ್ವನಿ ಬಳಕೆ, ಜಟಕಾ ಕಟ್ ಇವೆಲ್ಲ ಅಶಾಂತಿ ಸೃಷ್ಟಿಸುವ ವಾತಾವಣ ನಿರ್ಮಿಸುತ್ತಿವೆ. ಇವೆಲ್ಲ ನಮಗೆ ಬೇಕಾ ಎಂದು ಪ್ರಶ್ನಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಬಡವರು, ರೈತರು ಮತ್ತು ಯುವಕರಿಗೆ ಉದ್ಯೋಗ ಒದಗಿಸಬೇಕು ಎನ್ನುವ ಚಿಂತನೆ ಇಲ್ಲ. ವಿಜಯನಗರ ಜಿಲ್ಲೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಮಾವೇಶದಲ್ಲಿ 2023 ಚುನಾವಣೆಯಲ್ಲಿ 150 ಬಿಜೆಪಿ ಗೆಲುವು ಸಾಧಿಸಬೇಕೆಂದು ತೀರ್ಮಾನಿಸಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ದರ ಏರಿಕೆಯಿಂದ ಬಡವರು ತೊಂದರೆ ಪಡಬೇಕಾಗಿದೆ. ಈ ಕುರಿತು ಯಾರೂ ಚಕಾರವೆತ್ತುತ್ತಿಲ್ಲ ಎಂದು ಟೀಕಿಸಿದರು.
54 ನದಿಗಳ ನೀರು ತಂದು ಗಂಗಾ ಆರತಿ ನಡೆಸಲಾಗುವುದು. ಮೇ. 8ರಂದು ಬೆಂಗಳೂರಿನಲ್ಲಿ ಜನತಾ ಜಲಧಾರೆ ಮುಕ್ತಾಯವಾಗಲಿದೆ. ಇದಾದ ನಂತರ ಪಂಚ ರತ್ನ ಹೊಸ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪುರ ಮಾತನಾಡಿ, ತಾಲೂಕಿನಲ್ಲಿ ಕೆಳದಂಡೆ ಮುಲ್ಲಾಮಾರಿ, ಚಂದ್ರಂಪಳ್ಳಿ ನೀರಾವರಿ ಯೋಜನೆಗಳಿವೆ. 20 ಸಣ್ಣ ನೀರಾವರಿ ಕೆರೆಗಳಿವೆ. ಆದರೂ ಜಮೀನುಗಳಿಗೆ ನೀರು ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೇದಾಲಿಂಗಯ್ಯ ಹಿರೇಮಠ ಮಾತನಾಡಿ, ಚಿಂಚೋಳಿ, ಸೇಡಂ, ಚಿತ್ತಾಪುರ, ಅಫಜಲಪುರ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಸಾಕಷ್ಟು ಬಲಿಷ್ಠವಾಗುತ್ತಿದೆ. ಚಿಂಚೋಳಿ ಮೀಸಲು ಮತಕ್ಷೇತ್ರಕ್ಕೆ ಸಂಜೀವನ್ ಯಾಕಾಪುರ ಜೆಡಿಎಸ್ ಅಭ್ಯರ್ಥಿ ಎಂದು ಪರಿಗಣಿಸಿ ಹಸಿರು ನಿಶಾನೆ ತೋರಲಾಗಿದೆ. ಚಿಂಚೋಳಿ ಮತಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರವಿಶಂಕರ ಮುತ್ತಂಗಿ, ಹಣಮಂತ ಪೂಜಾರಿ, ರಾಹುಲ್ ಯಾಕಾಪುರ, ಶರಣಪ್ಪ ಮಾಳಗಿ, ನಿಯಾಜಅಲಿ, ಗೌರಿಶಂಕರ, ಪ್ರಕಾಶರೆಡ್ಡಿ, ರವಿಕುಮಾರ ಪಾಟೀಲ ಕೊಟಗಾ, ಸನ್ನಿ ಜಾಬಶೆಟ್ಟಿ ಇನ್ನಿತರರಿದ್ದರು. ಜೆಡಿಎಸ್ ಅಧ್ಯಕ್ಷ ರವಿಶಂಕರ ಮುತ್ತಂಗಿ ಸ್ವಾಗತಿಸಿದರು.