Advertisement

ಬೇಸಗೆ ಕೊನೆಯಲ್ಲಿ ಮಳೆ ಬಂದರಷ್ಟೇ  ಕುಡಿಯಲು ನೀರು

02:45 PM Mar 15, 2018 | |

ಸುಳ್ಯ : ಒಡಲಲ್ಲೇ ಪಯಸ್ವಿನಿ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ತತ್ವಾರ. ಮುಂದಿನ ಒಂದು ತಿಂಗಳ ಒಳಗೆ ಮಳೆ ಆಗದಿದ್ದರೆ ನಗರಕ್ಕೆ ನೀರಿನ ಬರ ತಟ್ಟಲಿದೆ. 

Advertisement

2016ರಲ್ಲಿ ನೀರಿನ ಮಟ್ಟ ಬರಿದಾಗಿ ನದಿ ಮೂಲಗಳೆಲ್ಲ ಬತ್ತಿ ಹೋಗಿ ನಗರದೆಲ್ಲೆಡೆ ಹಾಹಾಕಾರ ಎದ್ದಿತ್ತು. ಅವಾಗ ರಕ್ಷಣೆಗೆ ಬಂದಿದ್ದು ಬೇಸಿಗೆಯ ಕೊನೆಯ ದಿನಗಳಲ್ಲಿ ಸುರಿದ ಮಳೆ. ಅದು ಇಡೀ ನಗರವನ್ನು ನೀರಿನ ಅಭಾವದಿಂದ ಪಾರು ಮಾಡಿತ್ತು. ಇದರ ಅರಿವು ಜನಪ್ರತಿನಿಧಿಗಳು ಹಾಗೂ ನ.ಪಂ. ಆಡಳಿತಕ್ಕೆ ಇದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಂಗ್ರಹಕ್ಕೆ ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ.

ಕೃಷಿ ಜತೆಗೆ ಸಣ್ಣಪುಟ್ಟ ಉದ್ಯಮ ನಡೆಸುತ್ತಿರುವ ಸುಳ್ಯದ ಜನತೆಗೆ ಇಲ್ಲಿ ಹರಿಯುವ ಪಯಸ್ವಿನಿ ನದಿಯ ನೀರೇ ಆಧಾರ. ಬೇಸಗೆಯಲ್ಲಿ ಉಂಟಾಗುವ ನೀರಿನ ಕೊರತೆ ನೀಗಿಸಲು ಅಂತರ್ಜಲ ವೃದ್ಧಿ ಹಾಗೂ ಸಂರಕ್ಷಣೆಗೆ ಯೋಜನೆಗಳು ಇಲ್ಲಿ ತನಕ ಅನುಷ್ಠಾನಕ್ಕೆ ಬಂದಿಲ್ಲ. ಬೇಸಗೆಯ ಕೊನೆ ದಿನಗಳಲ್ಲಿ ಮಳೆ ಆಗುತ್ತಿರುವುದರಿಂದ ಗಂಭೀರ ಪ್ರಮಾಣದ ಅನುಭವ ಇದುವರೆಗೆ ಆಗಿಲ್ಲ. ಮಳೆ ಲೆಕ್ಕಾಚಾರ ತಪ್ಪಿದರೆ ಮಾತ್ರ ಜಲಕ್ಷಾಮ ಬಾಧಿಸದೇ ಇರದು.

ನಗರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಸರಕಾರಕ್ಕೆ 65.5 ಕೋಟಿ ರೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದು ಇನ್ನು ಈಡೇರಿಲ್ಲ. ಸುಳ್ಯದ ಪಯಸ್ವಿನಿ ನದಿಗೆ ವೆಂಟೆಡ್‌ ಡ್ಯಾಂ ನಿರ್ಮಿಸುವ ಬಹು ವರ್ಷಗಳ ಬೇಡಿಕೆಗೆ ಕವಡೆ ಕಿಮ್ಮತ್ತು ದೊರಕಿಲ್ಲ. ನಾಲ್ಕು ವರ್ಷಗಳಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆದರೆ, ನಿರೀಕ್ಷಿತ ವೇಗ ಪಡೆಯದೆ ಹಿನ್ನಡೆಯಾಗಿದೆ.

ಸುಳ್ಯದ ನಗರ ವ್ಯಾಪ್ತಿಯ 18 ವಾರ್ಡ್‌ಗಳ ಪೈಕಿ 10-12 ವಾರ್ಡ್‌ಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ನಗರದ ಒಟ್ಟು ಜನಸಂಖ್ಯೆ 19,958. ಇರುವ ಕುಟುಂಬಗಳಿಗೆ ದಿನವೊಂದಕ್ಕೆ 1.60 ಎಂಎಲ್‌ಡಿ ನೀರಿನ ಆವಶ್ಯಕತೆ ಇದೆ. ಸುಮಾರು 4000 ನಳ್ಳಿ ನೀರು ಸಂಪರ್ಕಗಳಿವೆ. ಕೊಳವೆ ಬಾವಿ ಬಿಟ್ಟರೆ ಬಹುತೇಕ ನೀರಿನ ಆವಶ್ಯಕತೆ ಪೂರೈಸುವುದು ಆಲೆಟ್ಟಿ ಅರಂಬೂರು ಸೇತುವೆ ಬಳಿಯ ಕಟ್ಟದಿಂದ.

Advertisement

ಈಗ ಬೇಸಗೆ ಕಾಲಿಟ್ಟಿದೆ. ನದಿಯಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಇನ್ನಾದರೂ ಅಂತರ್ಜಲ ವೃದ್ಧಿ, ಮಳೆಕೊಯ್ಲು ಇತ್ಯಾದಿಗಳತ್ತ ಗಮನ ಹರಿಸುವುದೊಳಿತು. ಕಳೆದ ವರ್ಷ ನೀರಿಗೆ ಬರ ಬಂದ ಹಿನ್ನೆಲೆಯಲ್ಲಿ ಪಯಸ್ವಿನಿ ನದಿ ದಂಡೆಯಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಗೆ ನದಿಗೆ ಅಳವಡಿಸಿದ ಪಂಪ್‌ ಸಂಪರ್ಕ ತೆರವುಗೊಳಿಸಲು ಸೂಚನೆ ನೀಡಲಾಗಿತ್ತು.

ಅಲ್ಲಿ ಆಗೋದು ಇಲ್ಲೇಕಿಲ್ಲ?
ಕುಮಾರಧಾರೆ ನದಿಗೆ ವೆಂಟೆಡ್‌ ಡ್ಯಾಂ ನಿರ್ಮಿಸಿ ಪುತ್ತೂರು ನಗರಕ್ಕೆ ಕುಡಿಯುವ ನೀರು ಪೂರೈಸಲಾಗುತ್ತದೆ. ಆದರೆ ಸುಳ್ಯದ ಹೃದಯ ಭಾಗದಲ್ಲಿ ಪಯಸ್ವಿನಿ ಹರಿಯುತ್ತಿದ್ದರೂ ವ್ಯವಸ್ಥೆಗಳಿಲ್ಲ. ಅಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಸ್ಥಳೀಯರು ಮುಂದಿಡುತ್ತಿದ್ದಾರೆ.

ನಾಗಪಟ್ಟಣ ಬಳಿ 13.4 ಕೋಟಿ ರೂ. ವೆಚ್ಚದಲ್ಲಿ ವೆಂಟೆಡ್‌ ಡ್ಯಾಂ, ಜಾಕ್‌ ವೆಲ್‌, ಪಂಪ್‌ ಹೌಸ್‌ ನಿರ್ಮಾಣ, 200 ಎಚ್‌ಪಿಯ ಎರಡು ಪಂಪ್‌ ಅಳವಡಿಕೆ ಕುರುಂಜಿ ಗುಡ್ಡೆಯಲ್ಲಿ ವಾಟರ್‌ ಟ್ರೀಟ್‌ ಪ್ಲಾಂಟ್‌ ರಚನೆ, 2.8 ಕೋಟಿ ರೂ. ವೆಚ್ಚದಲ್ಲಿ ಟ್ಯಾಂಕ್‌ ನಿರ್ಮಾಣ. ಜಯನಗರ, ಬೋರುಗುಡ್ಡೆ ಕಲ್ಲುಮುಟ್ಟುವಿನಲ್ಲಿ 3.38 ಕೋಟಿ ರೂ. ವೆಚ್ಚದಲ್ಲಿ ಮೂರು ಟ್ಯಾಂಕ್‌ ನಿರ್ಮಾಣ ಕಾಮಗಾರಿ ನಡೆಸುವ ಕುರಿತು ಇದ್ದ ಪ್ರಸ್ತಾವ ನನೆಗುದಿಗೆ ಬಿದ್ದಿದೆ.

ತಿಂಗಳಿಗಷ್ಟೆ ನೀರು ಇದೆ 
ಕಲ್ಲುಮುಟ್ಟು ಪಂಪ್‌ ಹೌಸ್‌ನಿಂದ ನೀರು ಸಂಗ್ರಹಿಸಿ ಅದನ್ನು ನಳ್ಳಿ ಮೂಲಕ ಪೂರೈಸಲಾಗುತ್ತದೆ. ಬೇಸಗೆ ಕಾಲದ ಕೊನೆಯ ಹಂತದ ತನಕ ನೀರು ಪೂರೈಸಲಾಗುತ್ತದೆ. ಇನ್ನು ಒಂದು ತಿಂಗಳು ಕಳೆದರೆ ನೀರಿಗೆ ಬರ ನಿಶ್ಚಿತ ಎಂದು ನೀರು ನಿರ್ವಹಣ ವಿಭಾಗದ ಸಿಬಂದಿ ಹೇಳುತ್ತಿದ್ದಾರೆ.

ಒಂದು ಪಂಪ್‌ ಕೆಟ್ಟಿದೆ
ಕಲ್ಲುಮುಟ್ಟು ಪಂಪ್‌ ಹೌಸ್‌ನಲ್ಲಿ ನೀರೆತ್ತಲು ಲೋ ವೋಲ್ಟೇಜ್‌ ಸಮಸ್ಯೆಯೂ ಇದೆ. ಲೋ ವೋಲ್ಟೇಜ್‌ನಲ್ಲಿ ಅಲ್ಲಿನ ಯಂತ್ರ ಸರಾಗವಾಗಿ ಕೆಲಸ ಮಾಡುತ್ತಿಲ್ಲ. ಪಂಪ್‌ಹೌಸ್‌ನಲ್ಲಿ ಒಂದು ಪಂಪ್‌ ಲೋ ವೋಲ್ಟೇಜ್‌ ಸಮಸ್ಯೆಯಿಂದ ಕೆಟ್ಟಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ಮುನ್ಸೂಚನೆ ಈ ಮೂಲಕ ಸಿಕ್ಕಿದೆ.

ಪ್ರಯತ್ನಗಳು ನಡೆದಿವೆ
ಶಾಶ್ವತ ಪರಿಹಾರಕ್ಕೆ ಪಯಸ್ವಿನಿ ನದಿಗೆ ವೆಂಟೆಡ್‌ ಡ್ಯಾಂ ನಿರ್ಮಾಣ ಆಗಬೇಕೆಂಬ ವಿಚಾರವಾಗಿ ಪ್ರಯತ್ನಗಳು ನಡೆದಿವೆ. ಅನುದಾನ ಲಭ್ಯವಾಗಿಲ್ಲ. ಅನೇಕ ಬಾರಿ ಪತ್ರ ಬರೆಯಲಾಗಿದೆ.
– ಶೀಲಾವತಿ ಮಾಧವ
ಅಧ್ಯಕ್ಷೆ. ನ.ಪಂ ಸುಳ್ಯ 

ಪ್ರಸ್ತಾವನೆ ಹೋಗಿದೆ
ಸರಕಾರಕ್ಕೆ ಈ ಕುರಿತು ಪ್ರಸ್ತಾವನೆ ಈ ಹಿಂದೆಯೇ ಹೋಗಿದೆ. ಸರಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಅದಕ್ಕೆ ಅಂಕಿತ ಸಿಗಬೇಕಿದೆ.
– ಗೋಪಾಲ ನಾಯ್ಕ,
 ಸುಳ್ಯ ನ.ಪಂ. ಮುಖ್ಯಾಧಿಕಾರಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next