Advertisement

ಅಮೀನಗಡಕ್ಕೆ ವಾರಕ್ಕೊಮ್ಮೆ ನೀರು!

10:15 AM May 29, 2020 | Suhan S |

ಅಮೀನಗಡ: ಪಕ್ಕದ 10 ಕಿ.ಮೀ ದೂರದಲ್ಲಿ ಮಲಪ್ರಭಾ ನದಿ, 22 ಕಿ.ಮೀ ದೂರದಲ್ಲಿ 123 ಟಿಎಂಸಿ ಅಡಿ ನೀರು ಸಂಗ್ರಹದ ಆಲಮಟ್ಟಿ ಡ್ಯಾಂ ಕೂಡಾ ಇದ್ದರೂ ಕರದಂಟು ಖ್ಯಾತಿಯ ಊರಿಗೆ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಕನಿಷ್ಠ 2ದಿನಕ್ಕೊಮ್ಮೆ ನೀರು ಕೊಡಿ ಎಂಬ ಪಟ್ಟಣದ ಜನರ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.

Advertisement

2011ರ ಜನಗಣತಿ ಪ್ರಕಾರ 15,076 ಜನಸಂಖ್ಯೆ ಇದ್ದು, ಸುಮಾರು 5ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಪಪಂ ವ್ಯಾಪ್ತಿಯಲ್ಲಿ ಒಟ್ಟು 16 ವಾರ್ಡ್‌ಗಳಿವೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪಟ್ಟಣಕ್ಕೆ ಆಲಮಟ್ಟಿ ಜಲಾಶಯದಿಂದ ನಿರಂತರ ಕುಡಿಯುವ ನೀರು ಪೂರೈಸುವ ಕಮತಗಿ ಜಲಸಂಗ್ರಹಗಾರದಿಂದ ನೀರು ಪಡೆದರೂ ಅದು ವಾರಕೊಮ್ಮೆ ಮಾತ್ರ.

ಕೈಗೂಡದ ಶಾಶ್ವತ ಯೋಜನೆ: ಈ ಹಿಂದೆ ಪಟ್ಟಣಕ್ಕೆ ಕಲ್ಲಗೋನಾಳದ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿತ್ತು. ಅಲ್ಲಿ ಅಂತರ್ಜಲ ಕುಸಿದ ಪರಿಣಾಮ ಬೇರೆ ಬೋರ್‌ವೆಲ್‌ಗ‌ಳಿಂದ ವಾರಕೊಮ್ಮೆ ನೀರು ಪೂರೈಕೆಯ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಆಲಮಟ್ಟಿ ಜಲಾಶಯದಿಂದ ಎಂಸಿಎಸ್‌ ಯೋಜನೆಯಡಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಕೈಗೊಳ್ಳಲಾಯಿತು.

ನಮ್ಮೂರಿಗೆ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಿತೆಂದು ಜನರು ಸಂತಸಪಟ್ಟಿದ್ದರು. ಆದರೆ ಆಲಮಟ್ಟಿ ಡ್ಯಾಂ ಮುಖಾಂತರ ನೀರು ಬಂದರೂ ತಾಂತ್ರಿಕ ಸಮಸ್ಯೆಯಿಂದ ಮತ್ತು ಕಮತಗಿ ಪಟ್ಟಣದಲ್ಲಿರುವ ಜಲಶುದ್ಧೀಕರಣ ಘಟಕದಲ್ಲಿ ಅಮೀನಗಡ ಪಟ್ಟಣದ ನೆಲಮಟ್ಟದ ಜಲಸಂಗ್ರಹಗಾರ ಕೇವಲ 5ಲಕ್ಷ ಲೀಟರ ನೀರಿನ ಸಾಮರ್ಥ್ಯ ಇರುವ ಕಾರಣ ವಾರಕೊಮ್ಮೆ ನೀರು ಪಡೆಯುವುದು ನಿಂತಿಲ್ಲ.

ಕೊಡಿ ಎರಡು ದಿನಕೊಮ್ಮೆ ನೀರು: ಬಹುನಗರ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಪಟ್ಟಣಕ್ಕೆ ಆಲಮಟ್ಟಿ ಜಲಾಶಯದಿಂದ ಬರುವ ಕುಡಿಯುವ ನೀರಿನ ನೆಲಮಟ್ಟದ ಜಲಸಂಗ್ರಹಗಾರ 5ಲಕ್ಷ ಲೀ. ಸಾಮರ್ಥ್ಯ ಹೊಂದಿದೆ. ನೀರಿನ ಸಂಗ್ರಹ ಪ್ರಮಾಣ ಹೆಚ್ಚಿಸಲು ಪಪಂ ಆಡಳಿತ ಮಂಡಳಿ ನಗರೋತ್ಥಾನ ಯೋಜನೆಯಡಿ ನಗರ ನೀರು ಸರಬರಾಜು, ಒಳಚರಂಡಿ ಇಲಾಖೆಯಿಂದ ಮತ್ತೂಂದು ನೆಲಮಟ್ಟದ ಜಲಸಂಗ್ರಹಗಾರ ನಿರ್ಮಿಸಲು ತೀರ್ಮಾನಿಸಿ 2019ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಲು ಗುತ್ತಿಗೆದಾರನಿಗೆ ಟೆಂಡರ್‌ ನೀಡಿತ್ತು. ಗುತ್ತಿಗೆದಾರನ ನಿರ್ಲಕ್ಷ್ಯ, ಒಳಚರಂಡಿ ಮಂಡಳಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ಮೂರು ತಿಂಗಳಿಂದ ಸ್ಥಗಿತಗೊಂಡಿದೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

ಪಕ್ಕದಲ್ಲಿ ಮಲಪ್ರಭಾ ನದಿ, ಆಲಮಟ್ಟಿ ಡ್ಯಾಂ ಇದ್ದರೂ ನಮಗೆ ವಾರಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕಾಗಿಯೇ 10ಲಕ್ಷ ಲೀಟರ ಸಾಮರ್ಥ್ಯದ ಇನ್ನೊಂದು ನೆಲಮಟ್ಟದ ಜಲಸಂಗ್ರಹಗಾರ ನಿರ್ಮಿಸಲು ಪಟ್ಟಣ ಪಂಚಾಯಿತಿಯಲ್ಲಿ ಠರಾವು ಕೈಗೊಂಡಿದ್ದೆವು. ಕಳೆದ ಒಂದು ವರ್ಷದಿಂದ ಕಾಮಗಾರಿ ಮುಗಿದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸಿ, ಎರಡು ದಿನಕ್ಕೊಮ್ಮೆ ನೀರು ಕೊಡಬೇಕು. –ಗುರುನಾಥ ಚಳ್ಳಮರದ, ಪಪಂ ಸದಸ್ಯರು

ಪಟ್ಟಣಕ್ಕೆ ಬರುವ ಕುಡಿಯುವ ನೀರಿನ ನೆಲಮಟ್ಟದ ಜಲಸಂಗ್ರಹಗಾರ 5ಲಕ್ಷ ಲೀ. ಸಾಮರ್ಥ್ಯ ಹೊಂದಿದ್ದು, ಸಮಸ್ಯೆ ಬಗೆಹರಿಸುವನಿಟ್ಟಿನಲ್ಲಿ ಇನ್ನೊಂದು 10 ಲಕ್ಷ ಲೀಟರ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಗಾರ ನಿರ್ಮಿಸಲು ಒಳಚರಂಡಿ ಮಂಡಳಿಗೆ ನೀಡಲಾಗಿದೆ. ಕಾಮಗಾರಿ ಮಾತ್ರ ತೀವ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಈಕುರಿತು ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರನಿಗೆ ಸೂಚನೆ ನೀಡಿದರೂ ಕಾಮಗಾರಿ ಕೈಗೊಳ್ಳುತ್ತಿಲ್ಲ.  -ಐ.ಜಿ.ಕೊಣ್ಣೂರ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ.

50ಲಕ್ಷ ರೂ.ಅನುದಾನದಲ್ಲಿ 10 ಲಕ್ಷ ಲೀ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಗಾರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಆದರೆ ಅನುದಾನ ಬಿಡುಗಡೆಯಾಗಿಲ್ಲ. ಬಿಲ್‌ ಆಗದ ಕಾರಣ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದ. ಈಗ ಅರ್ಧ ಹಣ ಬಿಡುಗಡೆಯಾಗಿದೆ. ಸೋಮವಾರ ಕಾಮಗಾರಿ ಪುನಃ ಆರಂಭಿಸಿ ಶೀಘ್ರದಲ್ಲೇ ಜಲಸಂಗ್ರಹಗಾರ ಕಾಮಗಾರಿ ಪೂರ್ಣಗೊಳಿಸಲಾಗುವುದು. –ಗುರುರಾಜ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಒಳಚರಂಡಿ ಮಂಡಳಿ

 

– ಎಚ್‌.ಎಚ್‌.ಬೇಪಾರಿ

Advertisement

Udayavani is now on Telegram. Click here to join our channel and stay updated with the latest news.

Next