ರಾಯಚೂರು: ಜಿಲ್ಲೆಯಲ್ಲಿ ಜಲಧಾರೆ ಕುಡಿಯುವ ನೀರಿನ ಯೋಜನೆ ಕೈಗೊಂಡಿದ್ದು, 1,406 ಗ್ರಾಮಗಳಿಗೆ ನೀರು ಪೂರೈಸುವ ಮಹೋನ್ನತ ಉದ್ದೇಶ ಯೋಜನೆ ಹಿಂದೆ ಅಡಗಿದೆ ಎಂದು ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ ತಿಳಿಸಿದರು.
ನಗರದ ಜಿಪಂ ಸಿಇಒ ಕಚೇರಿಯಲ್ಲಿ ಜಲಧಾರೆ ಯೋಜನೆ ಸಮಾಲೋಚಕರೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು. ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಬ್ಬರಿಗೆ 55 ಲೀಟರ್‌ನಂತೆ 21.39 ಲಕ್ಷ ಜನರಿಗೆ ನೀರು ಪೂರೈಸಬಹುದು. ಈ ಯೋಜನೆಗೆ 2.06 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಜಲಾಶಯದಿಂದ ಪಡೆಯಲಾಗುವುದು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಗ್ರ ಕುಡಿಯುವ ನೀರು ಯೋಜನೆ ಜಲಧಾರೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ ಎಂದರು.
ಜಿಲ್ಲೆಯಲ್ಲಿರುವ ನೀರಿನ ಸಂಪನ್ಮೂಲ ಬಳಸಿಕೊಂಡು ಪ್ರತಿ ಹಳ್ಳಿಗೂ ಕುಡಿವ ನೀರು ಪೂರೈಸಬೇಕು ಎಂಬುದು ಯೋಜನೆಯ ಉದ್ದೇಶವಾಗಿದೆ. ಸಾಮಾನ್ಯ ದಿನಗಳಲ್ಲಿ ಎಂದಿನ ಮೂಲಗಳಿಂದ ನೀರು ಪಡೆಯುವುದು, ಬೇಸಿಗೆ ದಿನಗಳಲ್ಲಿ ಜಲಧಾರೆ ಯೋಜನೆ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶವಿದೆ. ಈಗಾಗಲೇ ಯೋಜನೆ ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು, ಹಂತ ಹಂತವಾಗಿ ಅನುಷ್ಠಾನ ಮಾಡಲು ಸರ್ಕಾರ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಲಾಧಾರೆ ಯೋಜನೆಯ ಸಮಾಲೋಚಕರಿಗೆ ಕೆಲವೊಂದು ಅಂಶಗಳನ್ನು ಮರು ಪರಿಶೀಲಿಸುವಂತೆ ಸೂಚಿಸಿದರು. ನಂತರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲು ಸಮಿತಿಯಲ್ಲಿದ್ದ ಸರ್ವ ಸದಸ್ಯರ ಒಪ್ಪಿಗೆ ಪಡೆಯಲಾಯಿತು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಕೃಷ್ಣ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಅಧಿಕಾರಿ ಗಣಪತಿ ಸಾಕ್ರೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.