Advertisement

ಹಾಸ್ಟೇಲ್‌ ಅವ್ಯವಸ್ಥೆಗೆ ಶಾಸಕಿ ಗರಂ

05:30 PM Oct 01, 2018 | Team Udayavani |

ಕಾರವಾರ: ನಗರದ ಹೃದಯ ಭಾಗದಲ್ಲಿರುವ ಹಿಂದುಳಿದ ವರ್ಗಗಳ ದೇವರಾಜ ಅರಸು ಮೆಟ್ರಿಕ್‌ ನಂತರದ ವೃತ್ತಿಪರ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ರವಿವಾರ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಕಿಡಿಕಿಡಿಯಾದರು. ಸ್ಥಳದಲ್ಲಿದ್ದ ಹಾಸ್ಟೆಲ್‌ ವಾರ್ಡನ್‌ ಮತ್ತು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮೂರು ದಿನಗಳ ಒಳಗಾಗಿ ಶೌಚಾಲಯದ ಗುಂಡಿ ಸರಿಪಡಿಸಬೇಕು. ಹಾಸ್ಟೆಲ್‌ ಆವರಣದ ಕೊಳಚೆ ನೀರು ಸಂಗ್ರಹವನ್ನು ಖಾಲಿ ಮಾಡಿಸಬೇಕೆಂದು ತಾಕೀತು ಮಾಡಿದರು.

Advertisement

ಮೂರು ವಿದ್ಯಾರ್ಥಿಗಳು ಇರುವ ಕೋಣೆಯಲ್ಲಿ 15 ವಿದ್ಯಾರ್ಥಿಗಳನ್ನು ಹಾಕಲಾಗಿದೆ. ಕುಡಿವ ನೀರಿನ ವ್ಯವಸ್ಥೆ, ಸೆಫ್ಟಿಕ್‌ ಟ್ಯಾಂಕ್‌, ಸ್ನಾನದ ನೀರು ಶುದ್ಧೀಕರಣ ಘಟಕ ವ್ಯವಸ್ಥೆ ಮಾಡದೇ 400 ವಿದ್ಯಾರ್ಥಿಗಳ ಸಾಮರ್ಥ್ಯದ ಹಾಸ್ಟೆಲ್‌ನ್ನು ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಉದ್ಘಾಟಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ಇದರಲ್ಲಿ ಹಣ ಬಾಚಿಕೊಳ್ಳಬೇಕಿತ್ತು. ಐದು ಕೋಟಿ ರೂ. ವೆಚ್ಚದ ಹಾಸ್ಟೆಲ್‌ಗೆ ಶೌಚಾಲಯದ ಗುಂಡಿಯಿಲ್ಲ. ಸ್ನಾನದ ವ್ಯವಸ್ಥೆ ಶುದ್ಧೀಕರಣ ಘಟಕ ಏಕಿಲ್ಲ ? ಈಗಿನ ಮಾಜಿ ಶಾಸಕರು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಹಣ ಕೊಳ್ಳೆ ಹೊಡೆದಿದ್ದಾರೆ, ಈ ಬಗ್ಗೆ ತನಿಖೆಯಾಗಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇಂದೇ ಈ ಸಂಬಂಧ ಪತ್ರ ಬರೆಯುವೆ ಎಂದು ಗುಡುಗಿದರು. ಊಟದ ಕೋಣೆಯ ಪಕ್ಕ ಕೊಳಚೆ ನೀರು ಸಂಗ್ರಹದ ತೊಟ್ಟಿ ಇದೆ. ವಿದ್ಯಾರ್ಥಿಗಳನ್ನು ಪಶು ಎಂದು ತಿಳಿದುಕೊಂಡಿದ್ದೀರಾ? ಎಂಜಿನಿಯರಿಂಗ್‌, ಡಿಪ್ಲೊಮಾ, ಪದವಿ ಕಲಿಯುವ ವಿದ್ಯಾರ್ಥಿಗಳು ಮೆಟ್ರಿಕ್‌ ಪೂರ್ವ ಬಾಲಕರ ಹಾಸ್ಟೆಲ್‌ಗೆ ತೆರಳಿ ಶೌಚ ಮಾಡಬೇಕಿದೆ. 20 ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಬಳಸುವ ಸ್ಥಿತಿ ಇದೆ. ಇಂಥ ಕರ್ಮಕ್ಕೆ ವಿದ್ಯಾರ್ಥಿಗಳನ್ನು ಯಾಕೆ ಅಪೂರ್ಣ ಕಾಮಗಾರಿ ಮಾಡಿದ ಹಾಸ್ಟೆಲ್‌ಗೆ ತರಬೇಕಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಬಾಡಿಗೆ ಕಟ್ಟಡದಲ್ಲಿ ಆರಾಮದಿಂದ ಇದ್ದರು. ಹಾಸ್ಟೆಲ್‌ ವ್ಯವಸ್ಥೆ ಸರಿ ಮಾಡದೇ, ಕೊಳಚೆ ನೀರು ಶುದ್ಧೀಕರಣ ಘಟಕ, ಶೌಚಾಲಯದ ಸಫ್ಟಿಕ್‌ ಟ್ಯಾಂಕ್‌ ನಿರ್ಮಿಸದೇ ಹಾಸ್ಟೆಲ್‌ಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿದ್ದು ತಪ್ಪು. ಇದರಿಂದ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಚರ್ಮದ ಕಾಯಿಲೆ ಬರತೊಡಗಿದೆ. ಪಕ್ಕದ ನಿವಾಸಿಗಳಿಗೂ ಕೊಳಚೆ ನೀರಿನ ಸಮಸ್ಯೆ, ಅಲ್ಲದೇ ಪಕ್ಕದ ಡಿಗ್ರಿ ಕಾಲೇಜು ಹಾಸ್ಟೆಲ್‌ ಕೊಳಚೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಹಾಸ್ಟೆಲ್‌ಗೆ 5 ಕೋಟಿ ಮಾತ್ರ ಖರ್ಚು ಹಾಕಲಾಗಿದೆ. ಇದರಲ್ಲಿ ಯಾರು ಎಷ್ಟು ದುಡ್ಡು ಹೊಡೆದಿದ್ದಾರೆ ಎಂಬುದು ತನಿಖೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಅಧಿಕಾರಿಗಳು ತರಾಟೆಗೆ: ಶಾಸಕಿ ರೂಪಾಲಿ ನಾಯ್ಕ ಹಾಸ್ಟೆಲ್‌ಗೆ ಬಂದ ಸುದ್ದಿ ತಿಳಿದು ತಡಬಡಾಯಿಸಿದ ಹಾಸ್ಟೆಲ್‌ ವಾರ್ಡನ್‌ ಮತ್ತು ಅಧಿ ಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್‌ನಲ್ಲಿ ಮೂಗು ಮುಚ್ಚಿ ಬದುಕುವ ವಾತಾವರಣ ಇದೆ. ನೀವು ಮೂರು ದಿನ ಇಲ್ಲೇ ಇದ್ದು ಇದನ್ನು ಅನುಭವಿಸಿ ಎಂದು ತಿವಿದರು. ಮೂರು ದಿನದಲ್ಲಿ ಶೌಚಾಲಯದ ಕೊಳಚೆ ನೀರು ತೆರವು ಮಾಡಬೇಕು. ಸ್ನಾನದ ತೊಟ್ಟಿ ನೀರು ಶುದ್ಧ ಮಾಡಿ, ತೊಟ್ಟಿ ತೊಳೆಸಬೇಕು. ಶುದ್ಧೀಕರಣ ಘಟಕ ಹಾಕಬೇಕು ಎಂದು ತಾಕೀತು ಮಾಡಿದರು.

ವಿದ್ಯಾರ್ಥಿಗಳ ದೂರು: ವಿದ್ಯಾರ್ಥಿಗಳು ಊಟಕ್ಕೆ ಬರುವಾಗ ಬಯೋಮೆಟ್ರಿಕ್‌ ಪದ್ಧತಿ ಬಳಸಬೇಕು. ಆದರೆ ಬಯೋ ಮೆಟ್ರಿಕ್‌ ಸಿಸ್ಟಮ್‌ ಹಾಳು ಮಾಡಲಾಗಿದೆ. 3 ಇಡ್ಲಿ, 3 ದೋಸೆ, 3 ಕಪ್ಪ ಅನ್ನ ಕೊಡುತ್ತಾರೆ. ಸಾರು ಕಳಪೆಯಾಗಿರುತ್ತದೆ. ನೀರಿನ ಸಮಸ್ಯೆ ಇದೆ. ಇದನ್ನು ಆಲಿಸಲು ಅಧಿಕಾರಿಗಳೇ ಇಲ್ಲ ಎಂದು ವಿದ್ಯಾರ್ಥಿಗಳು ದೂರಿದರು. ಸ್ಥಳಕ್ಕೆ ಬಂದ ಕೆಲ ನಿವಾಸಿಗಳು ಹಾಸ್ಟೆಲ್‌ ಮುಚ್ಚಿಸಿ ಎಂದು ಶಾಸಕರನ್ನು ಒತ್ತಾಯಿಸಿದರು. ಇಲ್ಲವೇ ಕೊಳಚೆ ನಿಲ್ಲದಂತೆ ಮಾಡಿ ಎಂದು ಮನವಿ ಮಾಡಿದರು. ಬಿಜೆಪಿ ಜಿಲ್ಲಾ ವಕ್ತಾರ ರಾಜೇಶ್‌ ನಾಯಕ್‌ ಶಾಸಕರ ಜೊತೆಯಲ್ಲಿದ್ದು, ಹಾಸ್ಟೆಲ್‌ ನಿರ್ಮಾಣದಲ್ಲೇ ಅವ್ಯವಹಾರವಾಗಿದೆ. 5 ಕೋಟಿ ಖರ್ಚಾದರೂ ಎಲ್ಲಾ ವ್ಯವಸ್ಥೆ ಮಾಡಲಾಗಿಲ್ಲ ಎಂದು ಆರೋಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next