Advertisement

14 ಗ್ರಾಮಗಳಲ್ಲಿ ನೀರು ಪೂರೈಕೆ ಪುನಶ್ಚೇತನ ಕಾಮಗಾರಿ ಚಾಲನೆ

07:29 AM Feb 23, 2019 | Team Udayavani |

ಹುಣಸೂರು: ತಾಲೂಕಿನ ಬನ್ನಿಕುಪ್ಪೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 14 ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆೆಯ ಪುನಶ್ಚೇತನ ಕಾಮಗಾರಿ ಸೇರಿದಂತೆ 42 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ, ಜಿಪಂ ಸದಸ್ಯೆ ಡಾ.ಪುಷ್ಪಾ ಅಮರ್‌ನಾಥ್‌ ಚಾಲನೆ ನೀಡಿದರು.

Advertisement

ತಾಲೂಕಿನ ಬೀಜಗನಹಳ್ಳಿ ಬಳಿಯ ಮಂಟಿಕೊಪ್ಪಲಿನಲ್ಲಿ 5.2 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕುಡಿಯುವ ನೀರು ಪೂರೈಕೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಗುರುತಿಸಿ ಜಿಪಂ ಕ್ಷೇತ್ರಕ್ಕೆ ಬಂದಿರುವ 42 ಲಕ್ಷ ರೂ. ಅನುದಾನದಲ್ಲಿ ಅಗತ್ಯವಿರುವೆಡೆ ಹೊಸ ಕೊಳವೆಬಾವಿ ಕೊರೆಸುವುದು, ಅಂತರ್ಜಲ ವೃದ್ಧಿಸಲು ರೀಡ್ರಿಗ್‌, ಹೆಚ್ಚುವರಿ ಪೈಪ್‌ಲೈನ್‌ ಅಳವಡಿಕೆ, ಬದಲಾಯಿಸುವಿಕೆ, ಮೋಟಾರ್‌-ಸ್ಟಾರ್ಟರ್‌ ದುರಸ್ತಿ ಸೇರಿದಂತೆ ಹಲವೆಡೆ ಚರಂಡಿ-ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ಈಗಾಗಲೇ ಹಲವೆಡೆ ನೀರಿನ ಸಮಸ್ಯೆ ಎದುರಾಗಿದ್ದು,  ತಕ್ಷಣವೇ ಕಾಮಗಾರಿಗಳನ್ನು ಆರಂಭಿಸಿ, ವಾರದೊಳಗೆ ಪೂರ್ಣಗೊಳಿಸಿ ತಮಗೆ ಮಾಹಿತಿ ನೀಡಬೇಕೆಂದು ಎಂಜಿನಿಯರ್‌ ಹಾಗೂ ಗುತ್ತಿಗೆದಾರರಿಗೆ ತಾಕೀತು ಮಾಡಿದ ಅವರು, ಗ್ರಾಮಸ್ಥರು ಸಹ ಕಾಮಗಾರಿಗಳು ಉತ್ತಮವಾಗಿ ನಡೆಯುವಂತೆ ಮೇಲುಸ್ತುವಾರಿ ವಹಿಸಬೇಕು. ನೀರನ್ನು ಮಿತವಾಗಿ ಬಳಸಬೇಕು ಎಂದು ಮನವಿ ಮಾಡಿದರು.

ಮಂಟಿಕೊಪ್ಪಲು ಬಳಿಯ ಕೆರೆ ಏರಿ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು,  ದುರಸ್ತಿ ಮಾಡಿಸಿಕೊಡುವಂತೆ ಗ್ರಾಮಸ್ಥರ ಕೋರಿಕೆಗೆ ಸ್ಪಂದಿಸಿದ ಅವರು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಕಾಮಗಾರಿಯನ್ನು ತಾವೇ ಮುಂದೆ ನಿಂತು ಪೂರ್ಣಗೊಳಿಸುವುದಾಗಿ ತಾಪಂ ಸದಸ್ಯ ರವಿ ಪ್ರಸನ್ನ ವಾಗ್ಧಾನ ಮಾಡಿದರು.

ಬರಪಟ್ಟಿಗೆ ಹುಣಸೂರು ಸೇರಿಸಿ: ತಾಲೂಕಿನ ಬಹುತೇಕ ಕಡೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೃಷಿ ಕಾರ್ಮಿಕರು ಕೆಲಸಕ್ಕೆ ಪರದಾಡುವಂತಾಗಿದೆ. ಹೀಗಾಗಿ ಹುಣಸೂರು ತಾಲೂಕನ್ನು ತಕ್ಷಣವೇ ಬರ ಪೀಡಿತ ಪ್ರದೇಶವೆಂದು ಘೋಷಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮತ್ತು ಸರಕಾರದಿಂದ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಬೇಕೆಂದು ಶಾಸಕ ವಿಶ್ವನಾಥ್‌ ಅವರಲ್ಲಿ ಪುಷ್ಪಾ ಅಮರನಾಥ್‌ ಮನವಿ ಮಾಡಿದರಲ್ಲದೆ, ತಾವು ಕೂಡ ಜಿಪಂ ಸಭೆಯಲ್ಲಿ ಒತ್ತಾಯಿಸುವುದಾಗಿ ತಿಳಿಸಿದರು. 

Advertisement

ಎಲ್ಲೆಲ್ಲಿ ಚಾಲನೆ?: ಬನ್ನಿಕುಪ್ಪೆ, ದೊಡ್ಡೇಗೌಡನಕೊಪ್ಪಲು, ಮೂಡಲಕೊಪ್ಪಲು, ಕುಪ್ಪೆ-ಕೊಳಗಟ್ಟ, ಶ್ರವಣನಹಳ್ಳಿ, ಕಾಳೇಗೌಡನಕೊಪ್ಪಲು-ಜಡಗನಕೊಪ್ಪಲು, ಕೆಬ್ಬೇಕೊಪ್ಪಲು-ಮರದೂರು, ರಾಮಪಟ್ಟಣ, ಸಿದ್ದನಕೊಪ್ಪಲು, ಚಿಕ್ಕಹುಣಸೂರು, ಹಂಚ್ಯ-ಆಜಾದ್‌ನಗರ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಮಂಟಿಕೊಪ್ಪಲು ಮಹದೇವ್‌, ಗ್ರಾಪಂ ಸದಸ್ಯರಾದ ಶಾಂತಮ್ಮ, ಸ್ವಾಮಿ, ರವಿರೆಡ್ಡಿ, ಮಹೇಶ್‌, ರವಿ, ಜಿಲ್ಲಾ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕುಮಾರ್‌ ಮತ್ತಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next