Advertisement

ಚಿತ್ರಾವತಿ ಡ್ಯಾಂನಿಂದ 128 ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತ

11:29 PM May 06, 2019 | Lakshmi GovindaRaj |

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದ ತೀವ್ರ ವಿರೋಧದ ಜತೆಗೆ ಹಲವು ಅಡ್ಡಿ, ಆತಂಕಗಳ ನಡುವೆಯೂ ಕುಡಿವ ನೀರಿನ ಆಸರೆಗಾಗಿ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಸಮೀಪ ನಿರ್ಮಿಸಲಾಗಿರುವ ಚಿತ್ರಾವತಿ ಡ್ಯಾಂ ಜಿಲ್ಲೆಯ ಪಾಲಿಗೆ ವರದಾನ. ಆದರೆ ಸತತ 2 ವರ್ಷಗಳಿಂದ ತೀವ್ರ ಮಳೆ ಕೊರತೆಯಿಂದಾಗಿ ಜಲಾಶಯದಲ್ಲಿ ನೀರು ಸಂಗ್ರಹ ಮಟ್ಟ ನೆಲಕಚ್ಚಿ ತಳಮಟ್ಟ ಬಿರುಕು ಬಿಡುತ್ತಿದೆ.

Advertisement

ಜಿಲ್ಲೆಯ ಆರು ತಾಲೂಕುಗಳ ಪೈಕಿ ವ್ಯಾಪಕವಾಗಿ ಅಂತರ್ಜಲ ಮಟ್ಟ ಕುಸಿದು ಪ್ಲೋರೈಡ್‌ ನೀರು ಕುಡಿಯುತ್ತಿರುವ ಬಾಗೇಪಲ್ಲಿ, ಗುಡಿಬಂಡೆ ತಾಲೂಕುಗಳ ಒಟ್ಟು 128 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಚಿತ್ರಾವತಿ ಡ್ಯಾಂ ನಿರ್ಮಿಸಿದರೂ ಬರಗಾಲದ ಪರಿಣಾಮ ನೀರಿಲ್ಲದೇ ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಮಾಡುವುದನ್ನು ಸದ್ಯ ಸ್ಥಗಿತಗೊಳಿಸಲಾಗಿದೆ.

ಬರೋಬ್ಬರಿ 17.50 ಅಡಿ ಎತ್ತರವಿರುವ ಚಿತ್ರಾವತಿ ಡ್ಯಾಂನಲ್ಲಿ ಸದ್ಯ ನೀರಿನ ಮಟ್ಟ ಕೇವಲ 7 ಅಡಿಗೆ ತಲುಪಿದ್ದು ಒಂದರಿಂದ ಒಂದೂವರೆ ತಿಂಗಳಿಗೆ ಮಾತ್ರ ಬಾಗೇಪಲ್ಲಿ ಪಟ್ಟಣಕ್ಕೆ ಮಾತ್ರ ಕುಡಿಯುವ ನೀರು ಸರಬರಾಜು ಮಾಡಬಹುದಾಗಿದೆ. ಡ್ಯಾಂನ ಒಟ್ಟು ನೀರು ಸಂಗ್ರಹ ಮಟ್ಟ ಸರಾಸರಿ 0.10 ಟಿಎಂಸಿ ಇದ್ದರೂ ಸದ್ಯಕ್ಕೆ 10 ಎಂಸಿಎಫ್ಟಿಯಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಹಲವು ವರ್ಷಗಳ ಬಳಿಕ 2017ರ ಅಕ್ಟೋಬರ್‌ನಲ್ಲಿ ಬಿದ್ದ ಮಳೆಯಿಂದ ತುಂಬಿ ಕೋಡಿ ಹರಿದಿದ್ದ ಚಿತ್ರಾವತಿ ಡ್ಯಾಂಗೆ 2 ವರ್ಷದಿಂದ ಹನಿ ನೀರು ಸೇರಿಲ್ಲ. ಕಳೆದ ವರ್ಷ ಇದೇ ಸಮಯಕ್ಕೆ ಡ್ಯಾಂನಲ್ಲಿ 10 ಅಡಿಯಷ್ಟು ನೀರು ಸಂಗ್ರಹಗೊಂಡಿತ್ತು.

ಚಿತ್ರಾವತಿಗೆ ಇದೆ ರೋಚಕ ಇತಿಹಾಸ: ಬರಡು ಜಿಲ್ಲೆಯೆಂಬ ಖ್ಯಾತಿಗೆ ಒಳಗಾಗಿರುವ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನಲ್ಲಿ ಚಿತ್ರಾವತಿ ಡ್ಯಾಂ ನಿರ್ಮಾಣದ ಹಿಂದೆ ರೋಚಕ ಇತಿಹಾಸವಿದೆ. 1994ರಲ್ಲಿ ಕ್ಷೇತ್ರದ ಶಾಸಕರಾಗಿದ್ದ ಜಿ.ವಿ.ಶ್ರೀರಾಮರೆಡ್ಡಿ ಮೊದಲ ಬಾರಿಗೆ ಪರಗೋಡು ಸಮೀಪ ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಸರ್ಕಾರ ಕೂಡ ಡ್ಯಾಂ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು.

ಬಳಿಕ 1999-2000ನೇ ಸಾಲಿನ ಬಜೆಟ್‌ನಲ್ಲಿ 4.60 ಕೋಟಿ ವೆಚ್ಚದ ಡ್ಯಾಂಗೆ ಮೊದಲ ಕಂತಾಗಿ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೂ ಕಾಮಗಾರಿ ಆರಂಭಕ್ಕೆ ನೆರೆಯ ಆಂಧ್ರಪ್ರದೇಶ ಸರ್ಕಾರ ತಗಾದೆ ತೆಗೆಯಿತು. ಅನಂತಪುರ ಜಿಲ್ಲೆಯ ಪ್ರಭಾವಿ ಟಿಡಿಪಿ ನಾಯಕ ಪೆರಿಟಾಲ ರವಿ ನೇತೃತ್ವದಲ್ಲಿ ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

Advertisement

ಡ್ಯಾಂ ನಿರ್ಮಿಸಿದರೆ ಬಾಂಬ್‌ ಹಾಕುತ್ತೇವೆಂದು ಆಂಧ್ರದ ಹಲವು ಮುಖಂಡರು ಬೆದರಿಕೆಯನ್ನೂ ಹಾಕಿದ್ದರು. ವಿವಾದ ಕೊನೆಗೆ ಸುಪ್ರೀಂಕೋರ್ಟ್‌ವರೆಗೂ ಹೋಯಿತು. ಆಗಿನ ಎಸ್‌.ಎಂ.ಕೃಷ್ಣ ಸರ್ಕಾರ ಬಾಗೇಪಲ್ಲಿ ಸಮೀಪ ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ಕೋರ್ಟ್‌ನಿಂದ ಗ್ರೀನ್‌ ಸಿಗ್ನಲ್‌ ಪಡೆಯುವಲ್ಲಿ ಯಶಸ್ಸು ಕಂಡಿತು. ಕೇವಲ ಕುಡಿಯುವ ನೀರಿಗಾಗಿ ಡ್ಯಾಂ ಕಟ್ಟಲಾಯಿತು.

ಹೀಗಾಗಿ ಚಿತ್ರಾವತಿ ಡ್ಯಾಂ ನೀರು ಕೇವಲ ಕುಡಿಯಲು ಮಾತ್ರ ಬಳಕೆ ಆಗುತ್ತಿದೆ. ಆದರೂ 128 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕೊಡಬೇಕೆಂಬ ಉದ್ದೇಶ ಈಡೇರಿಲ್ಲ. ಡ್ಯಾಂ ನಿರ್ಮಾಣವಾಗಿ ದಶಕಗಳೇ ಉರುಳಿದರೂ ಅದರಲ್ಲಿ ತುಂಬಿರುವ ಹೂಳು ತೆಗೆಸುವಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ ವಿಫ‌ಲವಾಗಿರುವ ಕಾರಣ ನಿರೀಕ್ಷಿತ ಮಟ್ಟದಲ್ಲಿ ನೀರು ಸಂಗ್ರಹವಾಗುತ್ತಿಲ್ಲ ಎಂಬ ಕೊರಗು ಇಂದಿಗೂ ಇದೆ.

ಮಳೆ ಕೊರತೆಯಿಂದ ಸದ್ಯ ಡ್ಯಾಂನಲ್ಲಿ ಒಟ್ಟು 10 ಎಂಸಿಎಫ್ಟಿಯಷ್ಟು ನೀರಿದೆ. ಗುಡಿಬಂಡೆ ಸೇರಿ ಬಾಗೇಪಲ್ಲಿ ತಾಲೂಕಿನ ಒಟ್ಟು 128 ಹಳ್ಳಿಗಳಿಗೆ ನೀರು ಪೂರೈಸಬೇಕೆಂಬ ಉದ್ದೇಶದಿಂದ ಡ್ಯಾಂ ನಿರ್ಮಾಣವಾದರೂ ನೀರಿನ ಲಭ್ಯತೆ ಇಲ್ಲದೇ ಸದ್ಯಕ್ಕೆ ಬಾಗೇಪಲ್ಲಿ ಪಟ್ಟಣಕ್ಕೆ ಮಾತ್ರ ನೀರು ಪೂರೈಸಲಾಗುತ್ತಿದೆ. ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.
-ಹೆಚ್‌.ಶ್ರೀನಿವಾಸರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ಬಾಗೇಪಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 98 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಜೂನ್‌, ಜುಲೈವರೆಗೂ ಚಿತ್ರಾವತಿ ಡ್ಯಾಂ ನೀರು ಬಳಸಿಕೊಳ್ಳಬಹುದಾಗಿದೆ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಡ್ಯಾಂನಲ್ಲಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಹಲವು ವಾರ್ಡ್‌ಗಳಿಗೆ, 3, 5 7 ದಿನಕ್ಕೆ ಒಮ್ಮೆ ನೀರು ಪೂರೈಸಲಾಗುತ್ತಿದೆ.
-ಪಂಕಜಾರೆಡ್ಡಿ, ಮುಖ್ಯಾಧಿಕಾರಿ, ಬಾಗೇಪಲ್ಲಿ ಪುರಸಭೆ

* ಕಾಗತಿ ನಾಗರಾಜಪ್ಪ.

Advertisement

Udayavani is now on Telegram. Click here to join our channel and stay updated with the latest news.

Next