ಉಡುಪಿ: ಮಳೆಗಾಲ ಆರಂಭವಾಗುತ್ತಿದ್ದಂತೆ ನಗರದೊಳಗಿನ ಮತ್ತು ಒಳ ರಸ್ತೆಗಳ ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗಿರುವುದು ಕಂಡುಬರುತ್ತಿವೆ. ಜತೆಗೆ ಕೆಲವೆಡೆ ನೀರು ನಿಂತು ಕೊಳಚೆಗಳು ಸಂಗ್ರಹಗೊಂಡು ರೋಗ ರುಜಿನಗಳು ಹರಡಲು ದಾರಿ ಮಾಡಿಕೊಡುತ್ತದೇನೋ ಎನ್ನುವ ಅನುಮಾನ ಮೂಡುತ್ತದೆ.
ವಾಹನ ಸವಾರರು ಗುಂಡಿ ಬಿದ್ದ, ನೀರು ನಿಂತ ರಸ್ತೆಗಳಲ್ಲಿ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಮಳೆಗಾಲ ಆರಂಭದ ಹೊತ್ತಲ್ಲೆ ಅಲ್ಲಲ್ಲಿ ಗೋಚರಿಸುತ್ತಿದೆ. ನಗರದ ವಿವಿಧೆಡೆಗಳಲ್ಲಿ ರಸ್ತೆಯ ಡಾಮರು ಕಿತ್ತು ಹೋಗಿದೆ. ಸಂಚಾರಕ್ಕೂ ಅಡಚಣೆಯಾಗಿದೆ. ಮಳೆ ಬಂದಾಗ ರಸ್ತೆಗಳ ಮಧ್ಯೆ ಅಲ್ಲಲ್ಲಿ ಇರುವ ಗುಂಡಿಗಳಲ್ಲಿ ನೀರು ಸಂಗ್ರಹಗೊಂಡು ರಸ್ತೆಗಳು ಕಾಣಿಸುವುದಿಲ್ಲ.
ಹೀಗಾಗಿ ವಾಹನ ಸವಾರರು ಬಹಳಷ್ಟು ಪ್ರಯಾಸದಿಂದ ಸಂಚಾರ ಬೆಳೆಸಬೇಕಾಗುತ್ತದೆ. ಕಾಲ್ನಡಿಗೆಯಲ್ಲಿ ತೆರಳುವವರು ಕೂಡ ತೊಂದರೆ ಅನುಭವಿಸುತ್ತಾರೆ. ನಗರದೊಳಗಿನ ಮತ್ತು ನಗರಸಭೆಯ 35 ವಾರ್ಡ್ ವ್ಯಾಪ್ತಿಯೊಳಗೆ ಹದಗೆಟ್ಟಿರುವ ರಸ್ತೆಗಳು ಕಂಡುಬರುತ್ತದೆ. ಸೂಕ್ತ ಚರಂಡಿಗಳಿಲ್ಲದೆ ರಸ್ತೆಗಳ ಮೇಲೆ ನೀರು ನಿಲ್ಲುತ್ತದೆ. ಕೆಲವೊಂದು ಕಡೆಗಳಲ್ಲಿ ಕೊಳಚೆ ನೀರು ಕೂಡ ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ರುಜಿನಗಳು ಹರಡಲು ಕಾರಣ ವಾಗುವ ಸಂದೇಹ ತರಿಸುತ್ತಿದೆ.
ಕೋವಿಡ್-19 ವೈರಸ್ ಆತಂಕದ ನಡುವೆ ನಿಂತ ನೀರಿನಿಂದ ಎಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆಯೋ ಎನ್ನುವ ಭೀತಿ ಕೂಡ ಈಗ ಮಳೆಗಾಲದ ಆರಂಭದಲ್ಲಿ ಜನರನ್ನು ಆವರಿಸಿಕೊಂಡಿದೆ.