Advertisement

ಸುರಪುರದಲ್ಲಿ ನೀರಿನ ಹಾಹಾಕಾರ

11:50 AM Mar 22, 2019 | Team Udayavani |

ಸುರಪುರ: ಮೂರು ಶತಮಾನಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ್ದ ಇಲ್ಲಿನ ಗೋಸಲ ವಂಶದ ಅರಸರು ಭಾವಿ, ಕೆರೆ, ಕಟ್ಟೆ ನಿರ್ಮಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಕಲ್ಪಿಸಿದ್ದರು. ಆದರೆ ಇತಿಹಾಸಕ್ಕೆ ಸಾಕ್ಷಿಯಂತಿರುವ ಎಲ್ಲ ಬಾವಿಗಳು ಈಗ ಭೀಕರ ಬರಗಾಲದ ಹೊಡೆತಕ್ಕೆ ಸಿಲುಕಿ ನೀರಿಲ್ಲದೆ ಬತ್ತಿ ಹೋಗಿವೆ.

Advertisement

ಸತತ ಎರಡು ಮೂರು ವರ್ಷಗಳಿಂದ ಸರಿಯಾಗಿ ಮಳೆಯಾಗಿಲ್ಲ. ಈ ವರ್ಷವೂ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ತಾಲೂಕಿನಲ್ಲಿ ಭೀಕರ ಬರಗಾಲ ಆವರಿಸಿದೆ. ಬೇಸಿಗೆ ಪೂರ್ವದಲ್ಲಿಯೇ ನದಿ, ಕೆರೆ, ಹಳ್ಳಗಳು ಬತ್ತಿ ಹೋಗಿವೆ. 

ನಗರದ ಐತಿಹಾಸಿಕಸಿಹಿ ನೀರಿನ ಯಲ್ಲಪ್ಪನ ಬಾವಿ, ಹೊಸಬಾವಿ, ಬಡಿಗೇರ ಬಾವಿ, ರಂಗಮ್ಮನಬಾವಿ, ರಂಗಂಪೇಟೆ ದೊಡ್ಡ ಬಾವಿ ನೀರಿಲ್ಲದೆ ಬತ್ತಿವೆ. ಹೀಗಾಗಿ ನಗರದ ಜನರಲ್ಲಿ ಆತಂಕ ಮನೆ ಮಾಡಿದೆ.

ಕೃಷ್ಣಾ ನದಿಯಲ್ಲಿ ನೀರಿನ ಕೊರತೆಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಶೆಳ್ಳಗಿ ಜಾಕವೆಲ್‌
ಗೆ ನೀರು ಬರುತ್ತಿಲ್ಲ. ಕುಡಿಯುವ ನೀರಿಗಾಗಿ ಜಲಾಶಯದಿಂದ ನದಿಗೆ ನೀರು ಹರಿಸಲಾಗಿತ್ತು. ನದಿ ಪಾತ್ರದಲ್ಲಿನ ರೈತರು
ಒಡ್ಡು ಕಟ್ಟಿ ಹೊಲಗಳಿಗೆ ನೀರು ಪಡೆದುಕೊಂಡರು. ಸದ್ಯಕ್ಕೆ ಝರಿ ರೂಪದಲ್ಲಿ ನೀರು ಹರಿದು ಬರುತ್ತಿದೆ. ನಗರಸಭೆ ನದಿಯಲ್ಲಿ ರಿಂಗ್‌ ಬಾಂಡ್‌ ಹಾಕಿ ನಗರಕ್ಕೆ ಪೂರೈಸಲು ನೀರು ಸಂಗ್ರಹಿಸುತ್ತಿದೆ.

ಸಂಗ್ರಹಿಸಿದ ನದಿ ನೀರು ಖಾಲಿಯಾದಲ್ಲಿ ಪುನಃ ಪೂರೈಕೆ ನಿಂತು ಹೋಗಲಿದೆ. ಹೀಗಾಗಿ ಈ ಬೇಸಿಗೆಯಲ್ಲಿ ನಗರಕ್ಕೆ ನೀರಿನ ಅಭಾವ ತಲೆ ದೋರಲಿದೆ. ಈಗಲೇ ನದಿಯಲ್ಲಿ ನೀರು ಖಾಲಿಯಾದರೆ ಬೇಸಿಗೆಯಲ್ಲಿ ನಗರದ ಜನರಿಗೆ ಎಲ್ಲಿಂದ ನೀರು ಪೂರೈಸಬೇಕು ಎಂಬ ಚಿಂತೆ ನಗರಸಭೆಗೆ ಕಾಡ ತೊಡಗಿದೆ. ನೀರಿನ ಸಮಸ್ಯೆ ಭವಿಷ್ಯದ ದಿನಗಳು ನಾಗರಿಕರ ನಿದ್ದೆಗೆಡಿಸುವಂತೆ ಮಾಡಿದೆ. ನಗರದ ನೀರಿನ ಸ್ಥಿತಿ ಡೋಲಾಯಮಾನವಾಗಲಿದೆ. ನಗರದ ಯಲ್ಲಪ್ಪನ ಬಾವಿಯಲ್ಲಿ ನೀರು ಸ್ವಲ್ಪ ದಿನಗಳಿಗೆ ಆಗುವಷ್ಟಿದೆ. ಇನ್ನೂ ರಂಗಂಪೇಟೆ ದೊಡ್ಡ ಬಾವಿ ಸಂಪೂರ್ಣ ಖಾಲಿಯಾಗಿದೆ.

Advertisement

ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕ್ಷೀಣಿಸಿದೆ. ಹಾಗಾಗಿ ನಗರದ ಬಹುತೇಕ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ತಾಸುಗಟ್ಟಲೇ ಹೊಡೆದರು ಕೊಡ ನೀರು ಬರುವುದಿಲ್ಲ. ಇನ್ನೂ ಅಂಬೇಡ್ಕರ್‌ ನಗರದ ಜನರ ಪರಿಸ್ಥಿತಿ ದೇವರೇ ಬಲ್ಲ. ಬಡಾವಣೆ ಸಂಪೂರ್ಣ ಬೆಟ್ಟದ ಮೇಲಿರುವುದರಿಂದ ಇಲ್ಲಿ ಯಾವುದೇ ನಳದ ವ್ಯವಸ್ಥೆ ಇಲ್ಲ. ಒಂದು ಕೈ ಪಂಪ್‌ ಇದೆ. ಅದರಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಅಲ್ಲಿಯ ಜನರು ಹೊಸ ಬಾವಿಯನ್ನೇ ನೆಚ್ಚಿಕೊಂಡಿದ್ದರು. ಬಾವಿ ನೀರಿಲ್ಲದೆ ಬತ್ತಿ ಹೋಗಿದೆ. ಹೀಗಾಗಿ ನಮ್ಮ ಗೋಳು ಕೇಳುವರಾರು ಎಂಬುದು ಬಡಾವಣೆ ಜನರ ಗೋಳು.

ನಗರದ ಅನೇಕರ ಮನೆಗಳಲ್ಲಿನ ಕೊಳವೆ ಬಾವಿಗಳು ನೀರಿಲ್ಲದೆ ಬಂದಾಗಿವೆ. ಹೀಗಾಗಿ ನೀರಿನ ಹಾಹಾಕಾರ ದಿನ ಕಳೆದಂತೆ ಜೋರಾಗುತ್ತಿದೆ. ಇದು ಎಲ್ಲರಿಗೂ ದಿಕ್ಕು ತೋಚದಂತೆ ಮಾಡಿದೆ.

ನಗರದಲ್ಲಿ ಒಟ್ಟು 200 ಕೊಳವೆಬಾವಿಗಳಿವೆ. 83 ಕಿರು ನೀರು ಸರಬರಾಜು ಘಟಕಗಳಿವೆ. 5 ನೀರು ಶುದ್ಧೀಕರಣ ಘಟಕಗಳಿವೆ. ಒಡೆದು ಹೋಗಿದ್ದ ಪೈಪ್‌ ಲೈನ್‌ ದುರಸ್ತಿಯಾಗಿದೆ. ನದಿಯಲ್ಲಿ ರಿಂಗ್‌ಬಾಂಡ್‌ ಹಾಕಿ ನೀರು ಸಂಗ್ರಹಿಸುತ್ತಿದ್ದು, ವಾರದಲ್ಲಿ ಎರಡು ಬಾರಿ ನದಿ ನೀರು ಪೂರೈಸುತ್ತೇವೆ. ಪ್ರತಿ ವಾರ್ಡ್‌ಗಳಲ್ಲಿ ಕೊಳವೆ ಬಾವಿ ಕೊರೆಯಿಸಲಾಗುತ್ತಿದೆ. 12 ನೂತನ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ. ಒಟ್ಟಾರೆಯಾಗಿ ನೀರು
ಪೂರೈಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೀದ್ದೇವೆ.
 ಏಜಾಜ್‌ ಹುಸೇನ್‌, ಪೌರಾಯುಕ್ತ

ಅಧಿಕಾರಕ್ಕೆ ಬರುವ ಜನಪ್ರತಿನಿಧಿ ಗಳು ನೀರಿನ ಭರವಸೆ ನೀಡುತ್ತಾರೆ. ನಂತರ ತಿರುಗಿ ಸಹ ನೋಡುವುದಿಲ್ಲ. ಯಾರೇ ಅಧಿಕಾರಕ್ಕೆ ಬಂದರೂ ಈವರೆಗೂ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಜನರ ಗೋಳು ತಪ್ಪುತ್ತಿಲ್ಲ. ನಗರದ ಜನರಿಗೆ ವರ್ಷವಿಡಿ ಬರಗಾಲವೇ ಇದ್ದಂತೆ. ಇದಕ್ಕೆ ನಮ್ಮನ್ನಾಳುತ್ತಿರುವ ಸರಕಾರಗಳ ಬೇಜವಾಬ್ದಾರಿಯೇ ಕಾರಣ. ಅಂತರ್ಜಲ ಸಂರಕ್ಷಿಸಲು ಬಾವಿಗಳ, ಕೆರೆಗಳ ಹೂಳು ಎತ್ತಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಈಗಲಾದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೆರೆ, ಬಾವಿಗಳ ಹೂಳು ಎತ್ತಬೇಕು ಶಾಶ್ವತ ಪರಿಹಾರ ಕಂಡುಕೊಂಡು ನೀರಿನ ಸಮಸ್ಯೆ ನೀಗಿಸಬೇಕು.
 ವೆಂಕೋಬ ದೊರೆ, ಶೋಷಿತ ಒಕ್ಕೂಟದ ರಾಜ್ಯಾಧ್ಯಕ್ಷ

ನದಿ ಪಕ್ಕದಲ್ಲೇ ಹರಿಯುತ್ತಿದ್ದರು ನೀರು ಕುಡಿಯುವ ಭಾಗ್ಯವಿಲ್ಲ. ಏನಾದರು ನೆಪ ಹೇಳಿ ನೀರು ಸರಬರಾಜಿನಲ್ಲಿ ನಗರಸಭೆ ವ್ಯತ್ಯಯ ಉಂಟು ಮಾಡುತ್ತಿದೆ. ನೀರು ಸಂಗ್ರಹಿಸುವ ಸಲುವಾಗಿ ನೆಂಟರ ಮದುವೆ, ಮುಂಜುವೆಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಪರೀಕ್ಷೆ ಮುಗಿದ ನಂತರ ನೀರು ಸಮೃದ್ದವಾಗಿರುವ ನೆಂಟರ ಊರುಗಳಿಗೆ ಹೋಗಲು ಯೋಚಿಸುತ್ತಿದ್ದೇವೆ. 
 ಗುರಯ್ಯ ಪೋಲಂಪಲ್ಲಿ, ರಂಗಪೇಟ ನಾಗರಿಕ

„ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next