ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ನಡೆದಿರುವ ಕೆರೆ, ಕಲ್ಯಾಣಿಗಳ ಅಭಿವೃದ್ಧಿ ಕೆಲಸಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪಿ.ಹೇಮಲತಾ ಅವರು ನಗರದ ಮುತ್ತೂರು ಕೆರೆ, ನ್ಯಾಯಾಲಯ ಸಮೀಪದ ಕಲ್ಯಾಣಿ ಹಾಗೂ ಕಾವೇರಿ ಕಲ್ಯಾಣ ಮಂದಿರ, ಆದಿತ್ಯ ಪಬ್ಲಿಕ್ ಶಾಲೆಯಲ್ಲಿ ಮಳೆ ನೀರು ಸಂಗ್ರಹ ವೀಕ್ಷಣೆ ಮಾಡಿ ಮಾಹಿತಿ ಪಡೆದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿ.ಎಸ್. ಕರೀಗೌಡ, ಜಿಲ್ಲೆಯಲ್ಲಿ 28 ಕೆರೆಗಳ ಅಭಿವೃದ್ಧಿ ಕೆಲಸ ನಡೆದಿದೆ. ಈ ಎಲ್ಲಾ ಕೆರೆಗಳ ಕಾಮಗಾರಿಯು ಸಹ ಜನರ ಸಹಭಾಗಿತ್ವದಲ್ಲಿಯೇ ನಡೆದಿವೆ. ಐದು ಕೆರೆಗಳಿಗೆ ಕೈಗಾರಿಕೆಗಳು ಸಿಆರ್‌ಎಫ್ ನಿಧಿಯಲ್ಲಿ ನೆರವು ನೀಡಿವೆ. ಇದೇ ರೀತಿ ನಗರದಲ್ಲಿನ ಪುರಾತನ ಕಲ್ಯಾಣಿಗಳ ಹೂಳು ತೆಗೆಯುವುದು. ಇವುಗಳ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುವುದರ ಜೊತೆಗೆ ತಾವೇ ಮುಂದೆ ನಿಂತು ಕೆಲಸ ಮಾಡಿಸುತ್ತಿದ್ದಾರೆ ಎಂದರು.
ಮಳೆ ನೀರು ಸಂಗ್ರಹ ಮಾಡಿಕೊಳ್ಳುವುದನ್ನು ಕಲ್ಯಾಣ ಮಂದಿರ, ಶಾಲೆ, ಕೈಗಾರಿಕೆ, ಮನೆ, ಚಿತ್ರಮಂದಿರಗಳಿಗೆ ಕಡ್ಡಾಯಗೊಳಿಸಲಾಗಿದ್ದು, ಕಾಲಮಿತಿ ವಿಧಿಸಿ ನೋಟಿಸ್ ನೀಡಲಾಗಿದೆ. ಸಾಕಷ್ಟು ಜನರು ಜಿಲ್ಲಾಡಳಿತಕ್ಕೆ ಸ್ಪಂದಿಸಿ ಮಳೆ ನೀರು ಸಂಗ್ರಹ ಮಾಡಿಕೊಂಡಿದ್ದಾರೆ ಎಂದರು.
ಕಾವೇರಿ ಕಲ್ಯಾಣ ಮಂದಿರದ ಮಾಲಿಕ ಸುಹಾಸ್ ಮಳೆ ನೀರು ಸಂಗ್ರಹದಿಂದ ಆಗಿರುವ ಲಾಭದ ಕುರಿತು ಮಾಹಿತಿ ನೀಡಿ, ಜಿಲ್ಲಾಡಳಿತ ನೋಟಿಸ್ ನೀಡಿದ್ದರಿಂದ 35 ಸಾವಿರ ಖರ್ಚು ಮಾಡಿ ಕಲ್ಯಾಣ ಮಂದಿರದ ಮೇಲ್ಛಾವಣಿಯಲ್ಲಿನ ಮಳೆ ನೀರು ಸಂಗ್ರಹ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಇದರಿಂದ ನಾಲ್ಕು ತಿಂಗಳಿಂದ ಈಚೆಗೆ ಸುಮಾರು 60 ಸಾವಿರ ಹಣ ಉಳಿತಾಯದ ಜೊತೆಗೆ ಸಕಾಲಕ್ಕೆ ನೀರು ದೊರೆತಿದೆ ಎಂದರು.
ಆದಿತ್ಯ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಎಂ.ಜಿ. ಶ್ರೀನಿವಾಸ್, 2 ಲಕ್ಷ ಲೀಟರ್ ಮಳೆ ನೀರು ಸಂಗ್ರಹದ ಸಂಪ್ ನಿರ್ಮಿಸಿದ್ದೇವೆ. ಬೇಸಿಗೆಯಲ್ಲಿ ಸುಮಾರು 4 ತಿಂಗಳ ಕಾಲ ಶಾಲೆಯಲ್ಲಿನ 800 ಜನ ಮಕ್ಕಳಿಗೆ ಅಗತ್ಯ ಇರುವ ಕುಡಿಯುವ ನೀರು, ಶೌಚಾಲಯ ಬಳಕೆಗೆ ದೊರೆಯುತ್ತವೆ. ಇದರಿಂದ ಕೊಳವೆಬಾವಿ, ನಗರಸಭೆ ಮೇಲೆ ನೀರಿಗಾಗಿ ಅವಲಂಭನೆಯಾಗುವುದು ತಪ್ಪಿದೆ ಎಂದರು.
ಜಿಲ್ಲೆಯಲ್ಲಿ ಜನರ ಸಹಭಾಗಿತ್ವದಲ್ಲಿ ನಡೆದಿರುವ ಕೆರೆ, ಕಲ್ಯಾಣಿ, ಮಳೆ ನೀರು ಸಂಗ್ರಹದ ಕೆಲಸಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತಾ, ಜನರ ಸಹಭಾಗಿತ್ವದಲ್ಲಿ ಇಲ್ಲಿ ನಡೆದಿರುವ ಕೆಲಸಗಳು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಮಳೆ ನೀರು ಸಂಗ್ರಹ ಮಾಡಿಕೊಳ್ಳದ ಹೊರತು ಕುಡಿಯುವ ನೀರಿನ ಬವಣೆ ನೀಗಿಸಲು ಯಾರಿಂದಲೂ ಸಾಧ್ಯವೇ ಇಲ್ಲದಾಗಲಿದೆ. ಹಣ ಖರ್ಚಾಗಲಿದೆ ಎನ್ನುವುದನ್ನು ಚಿಂತಿಸದೆ ಎಲ್ಲರು ಮಳೆ ನೀರು ಸಂಗ್ರಹ ಮಾಡಿಕೊಳ್ಳುವ ಕಡೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.