Advertisement

ನಗರಕ್ಕೆ  ಈ ಬಾರಿ ನೀರಿಗೆ ಬರವಿಲ್ಲ 

05:28 AM Feb 14, 2019 | Team Udayavani |

ಮಹಾನಗರ: ಮಹಾನಗರಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ತುಂಬೆ ವೆಂಟೆಡ್‌ಡ್ಯಾಂ ಹಾಗೂ ಎಎಂಆರ್‌ ಡ್ಯಾಂ ನೀರು ಸಂಗ್ರಹವನ್ನು ಅಂದಾಜಿಸಿದರೆ ಕನಿಷ್ಠ ಮೂರು ತಿಂಗಳು ಕುಡಿಯುವ ನೀರಿಗೆ ಸಮಸ್ಯೆಯಾಗದು. ಆದರೆ ನೀರು ಸರಬರಾಜು ವ್ಯವಸ್ಥೆಯ ಲೋಪದಿಂದ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ನಗರದ ಎತ್ತರ ಪ್ರದೇಶಗಳಿಗೆ ಈ ಬಾರಿಯೂ ಕುಡಿಯುವ ನೀರಿನ ಕೊರತೆ ಮುಂದುವರಿಯುವ ಸಾಧ್ಯತೆಗಳಿವೆ.

Advertisement

ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ನೇತ್ರಾವತಿ ನದಿಯ ತುಂಬೆ ವೆಂಟೆಡ್‌ ಡ್ಯಾಂನ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 7 ಮೀ. ಪ್ರಸ್ತುತ ಇಲ್ಲಿ ಗರಿಷ್ಠ 6 ಮೀ. ಎತ್ತರಕ್ಕೆ ನೀರು ಸಂಗ್ರಹಿಸಲಾಗಿದೆ. ನದಿಯಲ್ಲಿ ಒಳಹರಿವು ಇರುವುದರಿಂದ 6 ಮೀ. ಗಿಂತ ಹೆಚ್ಚಿನ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಸಾಮಾನ್ಯವಾಗಿ ನೀರಿನ ಒಳಹರಿವು ಫೆ. 15ವರೆಗೆ ಇರಲಿದ್ದು, ತುಂಬೆ ವೆಂಟೆಡ್‌ನಿಂದ ಮೇಲ್ಗಡೆ ಶಂಭೂರು ಬಳಿ ಇರುವ ಎಎಂಆರ್‌ ಡ್ಯಾಂನಲ್ಲಿ 12.5 ಮೀ. ಎತ್ತರಕ್ಕೆ ನೀರು ನಿಲ್ಲಿಸಲಾಗುತ್ತಿದ್ದು 14.25 ಎಂಎಲ್‌ಡಿ ನೀರು ಸಂಗ್ರಹವಾಗುತ್ತಿದೆ. ತುಂಬೆ ವೆಂಟೆಡ್‌ಡ್ಯಾಂನ ಎತ್ತರ 12 ಮೀ. ಆಗಿದ್ದು ಗರಿಷ್ಠ 7 ಮೀ. ನೀರು ನಿಲ್ಲಿಸಬಹುದಾಗಿದೆ. ಆದರೆ 7 ಮೀ. ನೀರು ಸಂಗ್ರಹಿಸಿದರೆ ನದಿಯ ಎರಡೂ ಕಡೆಗಳಲ್ಲಿ ಕೃಷಿ ಭೂಮಿ ಸೇರಿದಂತೆ ಗಣನೀಯ ಪ್ರಮಾಣದಲ್ಲಿ ಪ್ರದೇಶ ಜಲಾವೃತಗೊಳ್ಳುವುದರಿಂದ ಪ್ರಸ್ತುತ ನೀರು ಸಂಗ್ರಹವನ್ನು 6 ಮೀ. ಎತ್ತರಕ್ಕೆ ಮಿತಗೊಳಿಸಲಾಗುತ್ತಿದೆ. ತುಂಬೆ ವೆಂಟೆಡ್‌ಡ್ಯಾಂನಲ್ಲಿ 5 ಮೀ. ಎತ್ತರಕ್ಕೆ ನೀರು ಸಂಗ್ರಹಿಸಲು ಆರಂಭಿಸಿದ ಬಳಿಕ ಕಳೆದ ಎರಡು ವರ್ಷಗಳಲ್ಲಿ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ಕಾಡಿಲ್ಲ.

ವಿತರಣೆ ವ್ಯವಸ್ಥೆಯಲ್ಲಿ ಲೋಪ
ಮಂಗಳೂರು ನಗರಕ್ಕೆ ತುಂಬೆಯಿಂದ 160 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದೆ. 135 ಎಂಎಲ್‌ಡಿ ನೀರಿಗೆ ಬೇಡಿಕೆ ಇದೆ. ತುಂಬೆಯಿಂದ ಬರುವ ನೀರಿನಲ್ಲಿ 1 ಎಂಜಿಡಿ ನೀರು ಮೂಲ್ಕಿಗೆ, 2ಎಂಜಿಡಿ ನೀರು ಉಳ್ಳಾಲಕ್ಕೆ ನೀಡಲಾಗುತ್ತಿದೆ. ನೀರು ವಿತರಣೆ ವ್ಯವಸ್ಥೆಯಲ್ಲಿ ಲೋಪಗಳಿಂದಾಗಿ ಬಹಳಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಪಾಲಿಕೆ ಲೆಕ್ಕಾಚಾರದಲ್ಲಿ ಇದರ ಪ್ರಮಾಣ ಸುಮಾರು ಶೇ.15ರಷ್ಟಿದೆ. ಎತ್ತರದ ಪ್ರದೇಶಗಳಿಗೆ ಮಳೆಗಾಲದಲ್ಲೂ 2 ದಿನಗಳಿಗೊಮ್ಮೆ 6 ತಾಸುಗಳ ಕಾಲ ಮಾತ್ರ ನೀರು ನೀಡಲಾಗುತ್ತಿದೆ. ಕೊನೆಯಲ್ಲಿರುವ ಪ್ರದೇಶಗಳಿಗೆ ನೀರು ಹೋಗುತ್ತಿಲ್ಲ.

ಕುಡಿಯುವ ನೀರಿನ ಸಮಸ್ಯೆಯಿಲ್ಲ
ಮನಪಾ ವ್ಯಾಪ್ತಿಯಲ್ಲಿ ಬೇಸಗೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗದು. ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಈಗಾಗಲೇ 6 ಮೀ., ಎಎಂಆರ್‌ ಡ್ಯಾಂನಲ್ಲೂ 12.5 ಮೀಟರ್‌ ಎತ್ತರದವರೆಗೆ ನೀರು ಸಂಗ್ರಹಿಸಲಾಗಿದೆ. ಬೇಸಗೆಯಲ್ಲಿ ಸಮಸ್ಯೆ ಆಗದಂತೆ ಕುಡಿಯುವ ನೀರು ಸರಬರಾಜಿಗೆ ಪೂರಕ ಕ್ರಮ ಕೈಗೊಂಡಿದ್ದು, ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಜನವರಿ ಮೊದಲ ವಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆದಿದೆ.
– ಮಹಮ್ಮದ್‌ ನಜೀರ್‌,
ಮನಪಾ ಆಯುಕ್ತರು

ಕ್ರಮ ಕೈಗೊಳ್ಳಲಾಗಿದೆ 
ಬೇಸಗೆಯಲ್ಲಿ ನಗರಕ್ಕೆ ಕುಡಿಯುವ ನೀರು ಸಮಸ್ಯೆ ತಲೆದೋರದಂತೆ ಈಗಾಗಲೇ ಕ್ರಮವಹಿಸಲಾಗಿದೆ. ತುಂಬೆ ವೆಂಟೆಡ್‌ಡ್ಯಾಂನಲ್ಲಿ ಒಳ ಹರಿವು ಮುಂದುವರಿದಿದ್ದು ಫೆಬ್ರವರಿ ಮಧ್ಯಭಾಗದವರೆಗೆ ಮುಂದುವರಿಯುವ ಎಂದು
ಅಂದಾಜಿಸಲಾಗಿದೆ. ಹೀಗಾಗಿ ಬೇಸಗೆಯಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಸಮಸ್ಯೆಯಾಗದು. ಎತ್ತರದ ಪ್ರದೇಶಗಳಿಗೆ ಬೇಸಗೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೂ ಕ್ರಮಕೈಗೊಳ್ಳಲಾಗಿದೆ.
– ಲಿಂಗೇಗೌಡ
ಕಾರ್ಯನಿರ್ವಾಹಕ ಎಂಜಿನಿಯರ್‌,
ಮನಪಾ ನೀರು ಸರಬರಾಜು ವಿಭಾಗ

Advertisement

ಕಳೆದ ವರ್ಷ ಸ್ಥಿತಿ 
. ಬಿಗಡಾಯಿಸಿದ ತಿಂಗಳು:
ಎಪ್ರಿಲ್‌, ಮೇಯಲ್ಲಿ ಸಾಧಾರಣ ಸಮಸ್ಯೆ.
.  ಕ್ರಮ ಕೈಗೊಂಡದ್ದು ಕೊಳವೆ ಬಾವಿ, ಟ್ಯಾಂಕರ್‌ ಮೂಲಕ ಪೂರೈಕೆ.
.  ನೀರು ಪೂರೈಕೆಗೆ ಯೋಜನೆ: ತುಂಬೆ ವೆಂಟೆಂಡ್‌ ಡ್ಯಾಂ ನೀರು.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next