Advertisement
ಕಿನ್ನಿಮೂಲ್ಕಿ ನಿವಾಸಿ ರಾಮಚಂದ್ರ ಆಚಾರ್ಯರು ಬಟ್ಟೆ ಒಗೆದ ನೀರನ್ನು ಬೇರೆ ಬೇರೆ ಗಿಡಗಳಿಗೆ ಹಾಕುತ್ತಾರೆ. ದಿನವೂ ಒಂದೊಂದು ತೆಂಗಿನ ಮರದ ಬುಡದಲ್ಲಿ ಪಾತ್ರೆಯನ್ನು ತಿಕ್ಕುತ್ತಾರೆ. ಹೀಗೆ ಮಾಡಿದಾಗ ಆ ಮರಕ್ಕೆ ಒಂದಿಷ್ಟು ನೀರು ಸಿಕ್ಕಿದಂತಾಯಿತಲ್ಲ. ನೆಲ ಒರೆಸಿ ಶುಚಿಗೊಳಿಸಿದ ಬಕೆಟ್ ನೀರನ್ನೂ ಅವರು ಹೂಗಿಡಗಳಿಗೆ ಹಾಕುತ್ತಾರೆ. ಕೆಲವು ಮನೆಗಳಲ್ಲಿ ಬಚ್ಚಲು ಮನೆ, ಬಾವಿ ಕಟ್ಟೆಯ ನೀರಿಗೆ ಪೈಪು ಅಳವಡಿಸಿ ಅದರಿಂದ ಬರುವ ನೀರನ್ನು ಒಂದೊಂದು ದಿನ ಕೆಲವು ಗಿಡಮರಗಳಿಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಕಡಿಮೆ ಶ್ರಮ ಸಾಕು. ಬೇಸಗೆಯಲ್ಲಿ ಇಷ್ಟು ನಾಜೂಕಾಗಿ ವ್ಯವಹರಿಸದೆ ಹೋದರೆ ಒಂದೋ ಗಿಡ ಸಾಯುತ್ತದೆ, ಇಲ್ಲವಾದರೆ ಅದಕ್ಕೂ ಇಷ್ಟೇ ಪ್ರಮಾಣದ ಒಳ್ಳೆಯ ನೀರು ಕೊಡಬೇಕು. ಮನುಷ್ಯರಿಗೇ ಒಳ್ಳೆಯ ನೀರು ಕುಡಿಯುವುದಕ್ಕೆ ಸಿಗದಿರುವಾಗ ಗಿಡಗಳಿಗೆ ಎಲ್ಲಿಂದ ತರುವುದು? ರಾಮಚಂದ್ರ ಆಚಾರ್ಯರ ಮನೆಯ ಬಾವಿಗೆ ಪಂಪು ಇದ್ದರೂ ಅದನ್ನು ಈಗ ಚಾಲು ಮಾಡುವುದಿಲ್ಲ. ಪಂಪು ಚಾಲು ಮಾಡಿದರೆ ಒಂದೇ ಬಾರಿ ನೀರು ಖಾಲಿ ಆಗುತ್ತದೆ. ಮತ್ತೆ ಕುಡಿಯುವ ನೀರಿಗೆ ಪರದಾಡಬೇಕು. ಹೀಗಾಗಿ ನಿತ್ಯವೂ ಒಂದಿಷ್ಟು ಕೊಡ ನೀರನ್ನು ಸೇದಿ ತೆಂಗಿನ ಮರಗಳಿಗೆ ಹಾಕುತ್ತಾರೆ. ಮರಗಳಿಗೆ ನೀರುಣಿಸಿದಂತೆಯೂ ಆಯಿತು, ಇವರಿಗೆ ವ್ಯಾಯಾಮವೂ ಆಯಿತು ಎಂಬ ಸಕಾರಾತ್ಮಕ ಚಿಂತನೆ ಇದೆ. ಶೌಚಾಲಯದ ನೀರು ಹೊರತುಪಡಿಸಿ ಯಾವುದೇ ನೀರನ್ನೂ ಮನೆಯವರಿಗೆ ಮನಸ್ಸಿದ್ದರೆ ಗಿಡ ಮರಗಳಿಗೆ ಹಾಕಲು ಸಾಧ್ಯ. ಹೀಗೆ ಮಾಡಿದರೆ ಗಿಡಮರಗಳಿಗೆ ಕೊಡುವ ಉತ್ತಮ ಗುಣಮಟ್ಟದ ನೀರಿನ ಪ್ರಮಾಣ ವನ್ನು ಮನುಷ್ಯರು ಉಪಯೋಗಿಸಬಹುದು.