Advertisement

ಜನಪ್ರತಿನಿಧಿಗಳಿಗೆ ನೀರು ಮರುಬಳಕೆಯ ಚಾಲೆಂಜ್‌

12:02 PM Jun 21, 2018 | Team Udayavani |

ಮಹಾನಗರ: ಬುಕ್‌ ಚಾಲೆಂಜ್‌,ಫಿಟ್‌ನೆಸ್‌ ಚಾಲೆಂಜ್‌, ಫೋಟೋ ಹಾಕುವ ಚಾಲೆಂಜ್‌ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹತ್ತುಹಲವು ಚಾಲೆಂಜ್‌ಗಳ ನಡುವೆಯೇ ನಗರದ ಸಾಮಾಜಿಕ ಹೋರಾಟಗಾರರೊಬ್ಬರು ನೀರು ಮರು ಬಳಕೆ ಮಾಡುವ ಸಾಮಾಜಿಕ ಬದ್ಧತೆಯ ಚಾಲೆಂಜ್‌ ಪ್ರಾರಂಭಿಸಿದ್ದಾರೆ.

Advertisement

ಮಾತ್ರವಲ್ಲದೆ ತಮ್ಮ ಮನೆಯಲ್ಲಿ ಸ್ನಾನ ಹಾಗೂ ಬಟ್ಟೆ ಒಗೆದ ನೀರನ್ನು ಪೋಲಾಗಲು ಬಿಡದೆ ಅದನ್ನು ಮರು ಬಳಕೆ ಮಾಡುವ ತಂತ್ರಜ್ಞಾನ ಅಳವಡಿಸಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಪಂಚಾಯತ್‌ ಅಧಿಕಾರಿಗಳಿಗೆ ತಮ್ಮ ಮನೆಗಳಲ್ಲೂ ನೀರು ಮರುಬಳಕೆ ಮಾಡುವ ತಂತ್ರಜ್ಞಾನ ಅಳವಡಿಸಿ ಇತರರಿಗೂ ಸ್ಫೂರ್ತಿಯಾಗಿ ಎಂದು ಸವಾಲು ಹಾಕಿದ್ದಾರೆ.

ಸಾಮಾಜಿಕ ಹೋರಾಟಗಾರರು ಹಾಗೂ ನಗರದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನೂ ನಡೆಸುತ್ತಿರುವ ಎಂ.ಜಿ. ಹೆಗಡೆ ಅವರೇ
ಈ ರೀತಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ನೀರು ಮರುಬಳಕೆಯ ಕುರಿತಂತೆ ಚಾಲೆಂಜ್‌ ಹಾಕಿದವರು. 

ದೇಶದ ಪ್ರಗತಿಗೆ ಸವಾಲು
ಸಾಮಾಜಿಕ ಸ್ವಾಸ್ತ್ಯ ವೃದ್ಧಿಸುವ ಸವಾಲು ಹಾಕಿ, ಆ ಮೂಲಕ ದೇಶದ ಪ್ರಗತಿಗೆ ಒಳಿತಾಗುವ ಚಾಲೆಂಜ್‌ ಹಾಕುವುದು ಉತ್ತಮ ಎಂಬುದು ಅವರ ಅಭಿಪ್ರಾಯ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮನೆಯಲ್ಲಿ ನೀರನ್ನು ಪೋಲಾಗದಂತೆ 2 ಟ್ಯಾಂಕ್‌ಗಳಲ್ಲಿ ಹರಿಸಿ ಅದನ್ನು ಸರಳ ವಿಧಾನದ ಮೂಲಕ ಶುದ್ಧೀಕರಿಸಿ ಬಳಿಕ ಆ ನೀರನ್ನು ಮನೆಯ ಟಾಯ್ಲೆಟ್‌ಗೆ ಫ್ಲಶ್‌ ಮಾಡಲು, ಗಾರ್ಡನ್‌ಗೆ ನೀರುಣಿಸಲು, ವಾಹನ ತೊಳೆಯಲು ಹಾಗೂ ಅಂಗಳ ತೊಳೆಯಲು ಬಳಸಿಕೊಂಡಿದ್ದೇನೆ ಎಂದರು. 

ನೀರು ಮರು ಬಳಕೆ ಮಾಡುವ ಈ ಸರಳ ವಿಧಾನದ ಫೂಟೋಗಳನ್ನು, ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲೆಯ ಎಲ್ಲ ಶಾಸಕರಿಗೆ ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ ಟ್ಯಾಗ್‌ ಮಾಡಿ, ಸರಕಾರದ ಹಣ ಬಳಸದೆ, ಅವರವರ ಮನೆಗಳಲ್ಲಿ ತಮ್ಮ ಸ್ವಂತ ಹಣದಲ್ಲಿ ಹೀಗೆ ನೀರು ಮರುಬಳಕೆ ಮಾಡುವ ವಿಧಾನವನ್ನು ಅಳವಡಿಸುವಂತೆ ಅವರಿಗೆ ಸವಾಲು ಹಾಕುತ್ತೇನೆ. ಆ ಮೂಲಕ ಅವರು ಇತರರಿಗೂ ಅವರು ಪ್ರೇರೇಪಣೆ ನೀಡಬೇಕು ಎಂದು ಹೇಳಿದರು.

Advertisement

ಸಬ್ಸಿಡಿ ನೀಡಿ
ಬೇಸಗೆ ಕಾಲದಲ್ಲಿ ನೀರಿನ ಆವಶ್ಯಕತೆ ಹೆಚ್ಚಾಗಿದ್ದು ನೀರಿನ ಮರುಬಳಕೆ ಹೆಚ್ಚಾಗಿರುತ್ತದೆ. ಹೀಗಾಗಿ ನೀರು ಮರುಬಳಕೆ ಮಾಡಲು ಸಾರ್ವಜನಿಕರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಇಂತಹ ತಂತ್ರಜ್ಞಾನ ಅಳವಡಿಸಲು ಸರಕಾರದಿಂದ ಸಬ್ಸಿಡಿ ನೀಡಬೇಕು ಎಂದು ಅವರು ಆಗ್ರಹಿಸಿದರು. ಸ್ವರ್ಣ ಸುಂದರ್‌, ರಾಘವೇಂದ್ರ ರಾವ್‌ ಹಾಗೂ ಸುಧೀರ್‌ ಹೆಗ್ಡೆ ಉಪಸ್ಥಿತರಿದ್ದರು. 

ಸರಳ ತಂತ್ರಜ್ಞಾನ ಹೇಗೆ? 
ಬಟ್ಟೆ ಒಗೆದ ಹಾಗೂ ಸ್ನಾನ ಮಾಡಿದ ನೀರನ್ನು ಟ್ಯಾಂಕಿಗೆ ಹರಿಯುವಂತೆ ಪೈಪ್‌ಲೈನ್‌ ಜೋಡಿಸಬೇಕು. ನೀರು ತಿಳಿಯಾಗಲು ಸಹಕರಿಸುವ ಮರಳು, ತೆಂಗಿನ ಸಿಪ್ಪೆಯ ನಾರು ಹಾಗೂ ಇದ್ದಿಲನ್ನು ಟ್ಯಾಂಕ್‌ನ ತಳಭಾಗದಲ್ಲಿ ಅಳವಡಿಸಿದ ಅನಂತರ ಈ ನೀರು ಇನ್ನೊಂದು ಟ್ಯಾಂಕ್‌ಗೆ ಬೀಳುವಂತೆ ಪಂಪ್‌ ಮಾಡಬೇಕು. ಈ ನೀರು ಮರುಬಳಕೆಗೆ ಯೋಗ್ಯವಾಗಿರುತ್ತದೆ. ಸುಮಾರು 35,000 ರೂ. ವೆಚ್ಚದಲ್ಲಿ ಈ ವಿಧಾನವನ್ನು ಮಾಡಿದ್ದೇನೆ. ಕಡಿಮೆ ವೆತ್ಛದಲ್ಲೂ ನಿರ್ಮಾಣ ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next