Advertisement

ಶುದ್ಧ ಜಲವಾಗಿ ತೋಟಗಳಿಗೆ ಹರಿದ ಜೀವಜಲ

11:21 PM Mar 28, 2017 | Karthik A |

ಬೆಳ್ತಂಗಡಿ: ಧರ್ಮಸ್ಥಳದಲ್ಲಿ 1,790 ಶೌಚಾಲಯಗಳು ಹಾಗೂ 1,406 ಸ್ನಾನ ಗೃಹಗಳಿವೆ. ಇವುಗಳಿಂದ ಪ್ರತಿದಿನ 25ರಿಂದ 29 ಲಕ್ಷ ಲೀ. ತ್ಯಾಜ್ಯ ನೀರು ಬರುತ್ತದೆ. ಇದನ್ನು 8 ಕೋ.ರೂ. ವೆಚ್ಚದ ತ್ಯಾಜ್ಯ ಜಲ ಶುದ್ಧೀಕರಣ ಘಟಕಗಳ ಮೂಲಕ ಶುದ್ಧೀಕರಿಸಿ ಕೃಷಿಗೆ ಮರುಬಳಕೆ ಮಾಡಲಾಗುತ್ತಿದೆ. ಇದರ ರೂವಾರಿ ಡಿ. ಹರ್ಷೆಂದ್ರ ಕುಮಾರ್‌ ಹೀಗೆ ವಿವರಿಸುತ್ತಾರೆ: ಎಲ್ಲ ವಸತಿ ಛತ್ರಗಳ ತ್ಯಾಜ್ಯ ನೀರು ಪೈಪ್‌ಗಳ ಮೂಲಕ ಸಂಗ್ರಹವಾಗಿ ಬರುವಂತೆ ಮಾಡಲಾಗಿದೆ. ಪ್ರತೀ ವಸತಿ ಛತ್ರದಲ್ಲೂ ತ್ಯಾಜ್ಯ ಸಂಗ್ರಹ ಘಟಕಗಳಿವೆ. ಇಲ್ಲಿಂದ ಪೈಪ್‌ ಮೂಲಕ ಗುರುತ್ವಾಕರ್ಷಣ ಶಕ್ತಿಯಲ್ಲಿ ಶರಾವತಿ ಅತಿಥಿ ಗೃಹದ ಬಳಿ ಇರುವ ಪಂಪಿಂಗ್‌ ಸ್ಟೇಶನ್‌ಗೆ ಬರುತ್ತದೆ. ಅಲ್ಲಿಂದ ಘಟಕದ ಸಮೀಪ ಇರುವ ಪಂಪಿಂಗ್‌ ಸ್ಟೇಶನ್‌ಗೆ ಬರುತ್ತದೆ. ಅನಂತರ ತಲಾ 9 ಲಕ್ಷ ಲೀ. ಸಾಮರ್ಥ್ಯದ ಘಟಕಕ್ಕೆ 4 ಪೈಪ್‌ಗಳಲ್ಲಿ ರವಾನೆಯಾಗುತ್ತದೆ. ಅಲ್ಲಿ ಶುದ್ಧೀಕರಣ ಕಾರ್ಯ ನಡೆಯುತ್ತದೆ. ಈ ಘಟಕ ಧರ್ಮಸ್ಥಳ ದೇಗುಲದಿಂದ 2 ಕಿ.ಮೀ. ದೂರದಲ್ಲಿದೆ.

Advertisement

ಪ್ರಾಕೃತಿಕ ಪ್ರಕ್ರಿಯೆ ಮಾದರಿ
ನದಿಯಲ್ಲಿ ನೀರು ಶುದ್ಧಗೊಳ್ಳುವ ಪ್ರಕ್ರಿಯೆಯಂತೆಯೇ ಇಲ್ಲಿಯೂ ಕಾರ್ಯಾಚರಣೆ ವಿಧಾನವಿದೆ. ಗಾಳಿ ಹಾಯಿಸುವ ಮೂಲಕ ಘನತ್ಯಾಜ್ಯ ಬೇರ್ಪಡಿಸಲಾಗುತ್ತದೆ. ಅನಂತರ ಬಿಳಿಕಲ್ಲುಗಳ ಮೂಲಕ ನೀರು ಹರಿಸಲಾಗುತ್ತದೆ. ಬೇರೆ ಬೇರೆ ಗಾತ್ರದ ಕಲ್ಲು, ಮರಳು ಮೂಲಕ ಐದು ಹಂತಗಳಲ್ಲಿ ನೀರು ಹಾದು ಹೋಗಿ ಶುದ್ಧವಾಗುತ್ತದೆ. ಈ ಯಾವುದೇ ಪ್ರಕ್ರಿಯೆಗೆ ಮಾನವಶ್ರಮದ ಅಗತ್ಯವಿಲ್ಲ. ಎಲ್ಲವೂ ಸಾಫ್ಟ್ವೇರ್‌ ನಿಯಂತ್ರಿತ. ನೀರಿನಲ್ಲಿರುವ ತ್ಯಾಜ್ಯದ ಪ್ರಮಾಣದ ಮೇಲೆ ಅದರ ಶುದ್ಧಗೊಳ್ಳುವ ಪ್ರಕ್ರಿಯೆ ನಿರ್ಧಾರವಾಗುತ್ತದೆ. ಹಾಗೆ ಪ್ರಕೃತಿಯ ಜೈವಿಕ ಬ್ಯಾಕ್ಟೀರಿಯಾ ಮೂಲಕ ಶುದ್ಧಗೊಂಡ ನೀರನ್ನು  ತೋಟಗಳಿಗೆ ಹರಿಸಲಾಗುತ್ತದೆ.

ಇದನ್ನು ನಿರ್ಮಿಸಿಕೊಟ್ಟ ಬೆಂಗಳೂರಿನ ಬ್ರೂಕ್‌ಫೀಲ್ಡ್‌ ಟೆಕ್ನಾಲಜೀಸ್‌ ಸಂಸ್ಥೆಯ ನಿರ್ದೇಶಕಿ ಶೈಲಾ ಅಯ್ಯರ್‌ ಹೇಳುವಂತೆ ಸಂಸ್ಥೆ ನಿರ್ಮಿಸಿದ ರಾಜ್ಯದ ಅತಿದೊಡ್ಡ  ಘಟಕ ಇದಾಗಿದೆ. ಕನಿಷ್ಠ 10,000 ಲೀ. ಸಾಮರ್ಥ್ಯದ ಘಟಕಗಳಿಂದ ಎಷ್ಟು ಸಾಮರ್ಥ್ಯವಿದ್ದರೂ ನಿರ್ಮಿಸಬಹುದು ಎನ್ನುತ್ತಾರೆ. ಫ್ಲ್ಯಾಟ್‌, ಲಾಡ್ಜ್ ಗಳಿಗೆ ಇವು ಅನುಕೂಲ, ನಗರದಲ್ಲಿ ಸುಲಭ ಕೂಡ. ಒತ್ತೂತ್ತಾಗಿ ಮನೆಗಳು ಇರುವಂತಹ ನಗರಗಳಲ್ಲಿ ತ್ಯಾಜ್ಯ ಜಲ ಸಂಗ್ರಹಿಸಿ ಇಂತಹ ಘಟಕಗಳಿಗೆ ಕೊಂಡೊಯ್ಯುವುದು ಕೂಡ ಸುಲಭವೇ ಸರಿ.

ಎಲ್ಲೆಲ್ಲಿ ಇದೆ
ಧರ್ಮಸ್ಥಳದಲ್ಲಿ ಉಜಿರೆ ಎಸ್‌ಡಿಎಂ ಸ್ನಾತಕೋತ್ತರ ಕಾಲೇಜಿನ ಹಾಸ್ಟೆಲ್‌, ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್‌ಗ‌ಳು, ಎಸ್‌ಡಿಎಂ ಆಸ್ಪತ್ರೆ, ರಜತಾದ್ರಿ ಅತಿಥಿ ಗೃಹದಲ್ಲಿ ಇಂತಹ ಪ್ರತ್ಯೇಕ ಘಟಕಗಳಿವೆ. ಈ ಪ್ರಕ್ರಿಯೆಯಲ್ಲಿ ಶುದ್ಧಗೊಂಡ ನೀರಲ್ಲಿ ಕೆಟ್ಟ ವಾಸನೆ ಇಲ್ಲ. ಸಹಜ ನೀರಿನಲ್ಲಿ ಇರುವ ಅಂಶಗಳೇ ಇವೆ ಎಂದು ತಜ್ಞರ ಪ್ರಮಾಣ ಪತ್ರ ದೊರಕಿದೆ. ಧಾರವಾಡದ ಹಾಸ್ಟೆಲ್‌ಗ‌ಳಲ್ಲಿ ಇಂತಹ ನೀರನ್ನು ಟಾಯ್ಲೆಟ್‌ ತೊಳೆಯಲು ಮರುಬಳಕೆ ಮಾಡಲಾಗುತ್ತದೆ. ಧರ್ಮಸ್ಥಳದಲ್ಲಿ ಕ್ಷೇತ್ರದ ತೋಟಕ್ಕಷ್ಟೇ ಅಲ್ಲದೇ ಸಾರ್ವಜನಿಕರ ತೋಟಗಳಿಗೂ ನೀಡಲಾಗುತ್ತಿದೆ.

– ಲಕ್ಷ್ಮೀ ಮಚ್ಚಿನ

Advertisement
Advertisement

Udayavani is now on Telegram. Click here to join our channel and stay updated with the latest news.

Next