ಕುರುಗೋಡು: ಸಮೀಪದ ಎಮ್ಮಿಗನೂರು ಗ್ರಾಮದ ಇಂದಿರಾ ನಗರದಲ್ಲಿ ಕಳೆದ ವಾರದಿಂದ ನಳ್ಳಿಯಲ್ಲಿ ನೀರು ಬರದೇ ಪಕ್ಕದ ವಾರ್ಡಿಗೆ ತೆರಳಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ಸಮರ್ಕಕವಾಗಿ ನೀರು ಬರದ ಕಾರಣ ಇಲ್ಲಿನ ಮಹಿಳೆಯರು ಖಾಲಿ ಕೊಡ ಪ್ರದರ್ಶನ ಮಾಡಿದ ಪ್ರಸಂಗ ನಡೆಯಿತು.
ಗ್ರಾಮದ 6 ವಾರ್ಡಿನ ಜನರಿಗೆ ನಳ್ಳಿಯಲ್ಲಿ ನೀರು ಬರದಿರುವ ಪರಿಣಾಮ ನಿತ್ಯ ಬಳಕೆಗೆ ಹಾಗೂ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ ಎಂದು ವಾರ್ಡಿನ ಗ್ರಾಮಸ್ಥರು ಗ್ರಾ.ಪಂ. ವಿರುದ್ಧ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ರಾಜಕೀಯ ಪ್ರತಿನಿಧಿಗಳು ಕೂಡ ಇದರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದ್ದಾರೆ.
ದೀಪಾವಳಿ ಹಬ್ಬದ ಸಮಯದಲ್ಲಿ ಸರಿಯಾಗಿ ನೀರು ಸರಬರಾಜು ಆಗದೆ ಕಳೆದ ವಾರದಿಂದ ವಾರ್ಡಿನಲ್ಲಿ ನೀರಿನ ಸಮಸ್ಯೆ ಕಾಡುತಿದ್ದು, ಜನರು ತಲ್ಲಣಗೊಂಡಿದ್ದಾರೆ. ಇಲ್ಲಿ ಹಲವು ವರ್ಷಗಳಿಂದ ಬೋವಿ ಸಮಾಜದವರು ನೆಲೆಸುತ್ತಿದ್ದು, ಕೂಲಿ ಕೆಲಸದ ಮೇಲೆ ಅವಲಂಭಿತರಾಗಿದ್ದಾರೆ. ಇವರು ಸಂಜೆ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೀರು ಸಂಗ್ರಹಿಸಲು ನೋಡಿದರೆ ಇಲ್ಲಿ ನೀರೇ ಬರುವುದಿಲ್ಲ. ಇಲ್ಲಿನ ವಾಸ್ತವದ ಪರಸ್ಥಿತಿಯ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಅಲ್ಲಿನ ಸಾರ್ವಜನಿಕರು.
ಸ್ಥಳೀಯ ಜನತೆಗೆ ಮಾತ್ರ ನಿತ್ಯ ಕುಡಿಯುವ ನೀರಿಗಾಗಿ ಪರದಾಟ ತಪ್ಪಿಲ್ಲ. ಇದರ ಬಗ್ಗೆ ಕಿಂಚತ್ತು ಅಧಿಕಾರಿಗಳು ಗಮನ ವಹಿಸದೇ ಕುರುಡು ಜಾಣತನ ತೊರುತ್ತಿದ್ದಾರೆ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ದೀಪಾವಳಿ ಹಬ್ಬದ ಸಮಯದಲ್ಲಿ ವಾರ್ಡಿನಲ್ಲಿ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಇಲ್ಲದೆ ಹಬ್ಬ ಹೇಗೆ ಆಚರಿಸಬೇಕು ಮತ್ತು ಮಕ್ಕಳ ವಿದ್ಯಾಭ್ಯಾಸ ಹೇಗೆ ನೋಡಿಕೊಳ್ಳಬೇಕು. ತುಂಬಾ ತೊಂದರೆ ಅನುಭವಿಸುವಂತಾಯಿತು. ನೀರು ಇರದೆ, ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ಹಬ್ಬ ಆಚರಿಸುವಂತಾಯಿತು. –
ವಡ್ಡರ ಮಾರೆಮ್ಮ ಇಂದಿರ ನಗರ ಎಮ್ಮಿಗನೂರು