ರಾಯಚೂರು: ಬಿಸಿಲ ನಾಡಾದ ಜಿಲ್ಲೆಯಲ್ಲಿ ಬೇಸಿಗೆ ಬಂದರೆ ಮೊದಲು ಶುರವಾಗುವ ಸಮಸ್ಯೆ ನೀರಿನದ್ದು. ಆದರೆ, ಇನ್ನೂ ಬೇಸಿಗೆ ಶುರುವಾಗುವ ಮುನ್ನವೇ ತಾಲೂಕಿನ ಲಿಂಗಖಾನದೊಡ್ಡಿಯಲ್ಲಿ ನೀರಿನ ಬವಣೆ ಶುರುವಾಗಿದ್ದು, ಗ್ರಾಮದ ಮಹಿಳೆಯರು ಪರದಾಡುವಂತಾಗಿದೆ.
ಗ್ರಾಮಸ್ಥರು ಕುಡಿವ ನೀರಿಗಾಗಿ ಕಿ.ಮೀ ದೂರ ಸಾಗಿ ನೀರು ತರುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಆರು ವರ್ಷದಿಂದ ಈ ಗ್ರಾಮಸ್ಥರಿಗೆ ಕುಡಿವ ನೀರಿನದ್ದೇ ಸಮಸ್ಯೆ. ಅದರಲ್ಲೂ ಬೇಸಿಗೆ ಬಂದರೆ ಇಲ್ಲಿನ ಜನರಿಗೆ ಆತಂಕ ಇಮ್ಮಡಿಗೊಳ್ಳುತ್ತದೆ. ಅನೇಕ ವರ್ಷಗಳಿಂದ ಗ್ರಾಮದ ಸಮಸ್ಯೆ ಹೇಳಿಕೊಂಡರೂ ಸಂಬಂಧಿ ಸಿದವರು ಮಾತ್ರ ಸ್ಪಂದನೆ ನೀಡುತ್ತಿಲ್ಲ. ಇಂದಿಗೂ ಗ್ರಾಮದಲ್ಲೇ ಇದೇ ಪರಿಸ್ಥಿತಿ ಇದೆ. ಈ ಮುಂಚೆ ಗ್ರಾಮದಲ್ಲಿ ನೀರಿನ ಸೌಲಭ್ಯವಿತ್ತು. ಆದರೆ, ಈಗ ನೀರೇ ಬರುತ್ತಿಲ್ಲ. ಇದರಿಂದ ಬಳಕೆಗೂ ನೀರು ತರಲು ಪರದಾಡುವಂತಾಗಿದೆ.
ಕುಡಿವ ನೀರಿನದ್ದೇ ಸಮಸ್ಯೆಯಾಗಿದೆ. ನಲ್ಲಿಗಳ ಸೌಲಭ್ಯ ಇದ್ದರೂ ಸರಿಯಾಗಿ ನೀರು ಬರುತ್ತಿಲ್ಲ. ಕೆಲವರು ಬೈಕ್ ಗಳ ಮೇಲೆ ನಾಲ್ಕು ಕೊಡಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ, ಬೈಕ್ ಇಲ್ಲದವರು, ಮನೆಯಲ್ಲಿ ಪುರುಷರಿಲ್ಲದವರಿಗೆ ಮಾತ್ರ ಸಮಸ್ಯೆ ತಪ್ಪದು. ಅದರಲ್ಲೂ ಕೂಲಿ ಕೆಲಸ ಮಾಡಿಕೊಂಡು ಬರುವ ಮಹಿಳೆಯರಿಗೆ ನೀರಿನದ್ದೇ ತಲೆನೋವು. ಈ ಮುಂಚೆ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಈವರೆಗೂ ಸಮಸ್ಯೆಗೆ ಇತಿ ಹಾಡಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿಗಳ ಸಂಪರ್ಕ ಮಾಡುವ ಯೋಜನೆ ಶುರುವಾಗಿದೆ. ಆದರೆ, ಅದಿನ್ನೂ ಗ್ರಾಮಕ್ಕೆ ಕಾಲಿಟ್ಟಿಲ್ಲ.
ಈ ಹಿಂದೆ ನಲ್ಲಿಗಳ ಸಂಪರ್ಕ ಕಲ್ಪಿಸಿದ್ದು, ನೀರು ಕೂಡ ಬರುತ್ತಿತ್ತು. ಕೆಲ ವರ್ಷಗಳಿಂದ ಅದು ನಿಂತು ಹೋಗಿದೆ. ಬೇಸಿಗೆ ಶುರುವಾದರೆ ಇಲ್ಲಿನ ಮಹಿಳೆಯರಿಗೆ ಹೊಣೆ ಹೆಚ್ಚಾಗಲಿದೆ. ಕಿಮೀಗಟ್ಟಲೇ ಸಾಗಿ ಬೋರ್‌ವೆಲ್‌ಗಳಿಂದ ನೀರು ತರಬೇಕಿದೆ. ಗ್ರಾಮದಲ್ಲಿ ಎರಡು ಬೋರ್‌ಗಳಿದ್ದು ನೀರು ಬರುತ್ತಿಲ್ಲ. ಇರುವ ಒಂದೇ ಬೋರ್‌ವೆಲ್‌ನಲ್ಲಿ ಸಾಲುಗಟ್ಟಿ ನೀರು ಪಡೆಯಬೇಕು. ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚಿನ ಜನರು ವಾಸಿಸುತ್ತಿದ್ದು, ಕೃಷಿಕರು, ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಕೂಲಿ ಕೆಲಸ ಮಾಡುವುದಲ್ಲದೇ ನೀರಿಗೂ ಪರದಾಡುವುದೇ ನಿತ್ಯ ಕಾಯಕವಾಗಿದೆ.