Advertisement

ನೀರಿಲ್ಲದೆ ನೂರಾರು ಎಕ್ರೆ ಗದ್ದೆ ಹಡಿಲು

08:00 PM Jan 03, 2019 | Team Udayavani |

ಮೊಳಹಳ್ಳಿ: ವರ್ಷದ ಎಲ್ಲ ದಿನವೂ ಹೊಳೆಯಲ್ಲಿ ನೀರಿದ್ದರೂ, ಇಲ್ಲಿರುವ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸದ ಕಾರಣ ಕಳೆದ ಎರಡು ವರ್ಷಗಳಿಂದ ಮೊಳಹಳ್ಳಿಯ ಮಾವಿನಕಟ್ಟೆ ಸಮೀಪದ ಕೈಲ್ಕೆರೆ ಭಾಗದ ನೂರಾರು ರೈತರಿಗೆ ಹಿಂಗಾರು ಹಂಗಾಮಿಗೆ ನೀರಿಲ್ಲದೆ ಭತ್ತ ಬೇಸಾಯ ಮಾಡದೆ, ನೂರಾರು ಎಕರೆ ಗದ್ದೆ ಹಡಿಲು ಬಿಟ್ಟಿದ್ದಾರೆ.

Advertisement

ಮತ್ತೆ ವಾರಾಹಿ ಹೊಳೆಗೆ ನೀರು
ಕೈಲ್ಕೆರೆಯಲ್ಲಿರುವ ವಾರಾಹಿ ಕಾಲುವೆಯಿಂದ ವರ್ಷದ ಎಲ್ಲ ದಿನವೂ ನೀರು ಹರಿದು ಬರುತ್ತದೆ. ಆದರೆ ಇಲ್ಲಿನ ಸಣ್ಣ ಹೊಳೆಗೆ ನಿರ್ಮಿಸಿದ ಸಣ್ಣ ಕಿಂಡಿ ಅಣೆಕಟ್ಟಿನ ಹಲಗೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಎರಡು ನಾಲೆಗಳ ಈ ಭಾಗದ ಗದ್ದೆಗಳಿಗೆ ಹರಿದು ಹೋಗಬೇಕಾದ ನೀರು ಮತ್ತೆ ವಾರಾಹಿ ಹೊಳೆಗೆ ಸೇರುತ್ತಿದೆ. ಈ ಕಿಂಡಿ ಅಣೆಕಟ್ಟನ್ನು ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಅನೇಕ ವರ್ಷಗಳಿಂದ ಈ ಭಾಗದ ರೈತರ ಕೃಷಿ ಪ್ರದೇಶಕ್ಕೆ ನೀರುಣಿಸುತ್ತಿತ್ತು. ಕಳೆದ 4 ವರ್ಷಗಳಿಂದ ಹಲಗೆಗಳು ನಾಶವಾಗಿದ್ದು, ಆ ಬಳಿಕ ಹೊಸದಾಗಿ ಹಲಗೆ ಅಳವಡಿಸಿಲ್ಲ. ಇದರಿಂದ ವಾರಾಹಿ ನೀರು ಪೂರೈಕೆಯಾಗತ್ತಿದ್ದರೂ ಉಪಯೋಗವಾಗದೆ ವ್ಯರ್ಥವಾಗುತ್ತಿದೆ.

ಮೋರಿ ನಿರ್ಮಿಸದೇ ಸಮಸ್ಯೆ
ವಾರಾಹಿ ಕಾಲುವೆಯಿಂದ ಬರುವ ನೀರು ಸಣ್ಣ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿ ಅಲ್ಲಿಂದ ಎರಡು ಸಣ್ಣ – ಸಣ್ಣ ನಾಲೆಗಳ ಮೂಲಕ ಈ ಪ್ರದೇಶದ ಗದ್ದೆ, ತೋಟಗಳಿಗೆ ನೀರು ಹರಿಸಲಾಗುತ್ತದೆ. ಆದರೆ ಮಾವಿನಕಟ್ಟೆಯಿಂದ ಮರತ್ತೂರು ರಸ್ತೆ ಕಾಮಗಾರಿ ವೇಳೆ ಕೈಲ್ಕೆರೆಯಲ್ಲಿ ರಸ್ತೆಗೆ ಅಡ್ಡಲಾಗಿ ಮೋರಿ ನಿರ್ಮಿಸದ ಕಾರಣ ಎರಡು ಬದಿಯ ನಾಲೆಗಳು ಬಂದ್‌ ಆಗಿದ್ದು, ಇಲ್ಲಿನ ಗದ್ದೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ಹಿಂಗಾರಿನಲ್ಲಿ ಕೃಷಿಯೇ ಮಾಡದೆ ಗದ್ದೆಗಳನ್ನು ಹಡಿಲು ಬಿಟ್ಟಿದ್ದಾರೆ.

ನೂರಾರು ಎಕ್ರೆಗೆ ನೀರಿಲ್ಲ
ನಮ್ಮ ಕೃಷಿಗೆ ಈ ಸಣ್ಣ ಹೊಳೆಯ ನೀರೇ ಆಧಾರ. ನಾವು ಇದನ್ನೇ ನಂಬಿಕೊಂಡು ಬೇಸಾಯ ಮಾಡುತ್ತಿದ್ದೇವು. ಆದರೆ ಕಳೆದ ಕೆಲ ವರ್ಷಗಳಿಂದ ಹಲಗೆ ಅಳವಡಿಸದ ಕಾರಣ ನೀರು ಸಂಗ್ರಹವಾಗುತ್ತಿಲ್ಲ. ರಸ್ತೆ ಕೆಲಸದಿಂದಾಗಿ ಇದ್ದ ಮೋರಿಯನ್ನು ಮುಚ್ಚಿದ್ದಾರೆ. ಆಚೆ ಬದಿಗೆ ನೀರು ಹರಿದು ಹೋಗುತ್ತಿಲ್ಲ. ಇದರಿಂದ ನೂರಾರು ಎಕ್ರೆ ಕೃಷಿ ಭೂಮಿಗೆ ನೀರಿಲ್ಲದೆ ತೊಂದರೆಯಾಗುತ್ತಿದೆ. ಇನ್ನಾದರೂ ಹಲಗೆ ಅಳವಡಿಸಿ, ಮೋರಿ ನಿರ್ಮಿಸುವ ಕಾರ್ಯ ಮಾಡಲಿ.
– ಸಂತೋಷ್‌ ಶೆಟ್ಟಿ, ಕೃಷಿಕ, ಕೈಲ್ಕೆರೆ, ಮೊಳಹಳ್ಳಿ

ಪರಿಶೀಲಿಸಿ ಶೀಘ್ರ ಕ್ರಮ
ಈ ಕುರಿತಂತೆ ಪಂಚಾಯತ್‌ಗೆ ಅಲ್ಲಿನ ಗ್ರಾಮಸ್ಥರು ದೂರು ನೀಡಿದ ಬಗ್ಗೆ ಮಾಹಿತಿಯಿಲ್ಲ. ದೂರು ಬಂದಿದ್ದರೆ, ಶೀಘ್ರ ಪರಿಶೀಲನೆ ನಡೆಸಿ, ಪರಿಹಾರ ಕಂಡುಕೊಳ್ಳುವ ಕುರಿತು ಕ್ರಮ ಕೈಗೊಳ್ಳಲಾಗುವುದು. 
– ಪಾವನಾ, ಪಿಡಿಒ, ಮೊಳಹಳ್ಳಿ ಗ್ರಾ.ಪಂ.

Advertisement

— ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next