Advertisement

ಗುಡ್ಡಾಪುರ ದಾನಮ್ಮದೇವಿಗೂ ನೀರಿನ ಅಭಾವ

06:54 AM May 19, 2019 | Lakshmi GovindaRaj |

ವಿಜಯಪುರ: ದಕ್ಷಿಣ ಭಾರತದ ಜನತೆಯ ಆರಾಧ್ಯ ದೈವ ಶಿವಶರಣೆ ಗುಡ್ಡಾಪುರ ದಾನಮ್ಮ ದೇವಿ ಕ್ಷೇತ್ರದಲ್ಲೂ ನೀರಿನ ಅಭಾವ ತಲೆದೋರಿದೆ. ಹೀಗಾಗಿ, ಭಕ್ತರು ದೇವಿಯ ದರ್ಶನಕ್ಕಾಗಿ ಕ್ಷೇತ್ರಕ್ಕೆ ಬರುವುದನ್ನು ಮುಂದೂಡಿದರೆ ಒಳಿತು ಎಂದು ಮನವಿ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ. ಇದಕ್ಕಾಗಿ ಮೇ 25ರಂದು ದೇವಸ್ಥಾನ ಆಡಳಿತ ಮಂಡಳಿ ಸಭೆ ಕರೆದಿದೆ.

Advertisement

ಗುಡ್ಡಾಪುರ ಕ್ಷೇತ್ರ ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದಲ್ಲಿದ್ದರೂ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಭಕ್ತರಿಗೆ ಆರಾಧ್ಯ ದೇವಿ. ದೇವಿ ದರ್ಶನ, ವಿವಿಧ ಹರಕೆ ತೀರಿಸಲು ನಿತ್ಯವೂ ಕನಿಷ್ಠ 3 ಸಾವಿರ ಭಕ್ತರು ಇಲ್ಲಿಗೆ ಬರುತ್ತಾರೆ. 2018ರ ಕಾರ್ತಿಕ ಮಾಸದ ಸಂದರ್ಭದಲ್ಲೇ ಸ್ಥಳೀಯ ಜಲಮೂಲಗಳು ಸಂಪೂರ್ಣ ಬತ್ತಿ, ಜಾತ್ರೆ ಹಂತದಲ್ಲೇ ನೀರಿನ ಅಭಾವ ಎದುರಾಗಿತ್ತು.

ಈಗ ಬರದಿಂದ ಕ್ಷೇತ್ರಕ್ಕೆ ಬರುವ ಭಕ್ತರಿಗೆ ನೀರು ಹೊಂದಿಸಲು ದೇವಸ್ಥಾನದ ಆಡಳಿತ ಮಂಡಳಿ ಹೈರಾಣಾಗುವಂತೆ ಮಾಡಿದೆ. ಹೀಗಾಗಿ, ಭಕ್ತರಿಗೆ ಸಮಸ್ಯೆ ಆಗದಿರಲಿ ಎಂದು ಕಳೆದ ವರ್ಷದ ನವೆಂಬರ್‌ನಿಂದಲೇ ದೇವಸ್ಥಾನದ ಟ್ರಸ್ಟ್‌ ಸಮಿತಿ, ಮಾಸಿಕ 1.50 ಲಕ್ಷ ರೂ.ವೆಚ್ಚ ಮಾಡಿ ಟ್ಯಾಂಕರ್‌ ನೀರು ಕೊಡುತ್ತಿದೆ. ಸ್ವಂತ ಟ್ರಾಕ್ಟರ್‌ ಹಾಗೂ 6000 ಲೀ.ಸಾಮರ್ಥ್ಯದ ಟ್ಯಾಂಕರ್‌ ಖರೀದಿಸಿ, ವಿದ್ಯುತ್‌ ಸಮಸ್ಯೆ ನೀಗಲು ಜನರೇಟರ್‌ ಇರಿಸಿದೆ.

ನೆರೆಯ ಅಂಕಲಗಿ, ಸೊರಡಿ ಹಾಗೂ ಮುಚ್ಚಂಡಿ ಗ್ರಾಮಗಳಿಂದ ನೀರನ್ನು ಟ್ಯಾಂಕರ್‌ ಮೂಲಕ ತರಲಾಗುತ್ತಿತ್ತು. ಈಗ ಅಲ್ಲಿಯೂ ಜಲಮೂಲ ಬತ್ತಿರುವುದರಿಂದ ನೀರಿನ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಿದೆ. ತಿಂಗಳಿಂದ ಕ್ಷೇತ್ರದಲ್ಲಿ ಮದುವೆ ಮಾಡಲು ಪರವಾನಗಿ ನೀಡಿಕೆ ಸ್ಥಗಿತ ಮಾಡಿದ್ದು, ದೇವಸ್ಥಾನದ ಶುದ್ಧ ನೀರಿನ ಘಟಕ ಮುಚ್ಚಿದೆ. ನಿತ್ಯ ದಾಸೋಹ, ಊಟದ ಮುನ್ನ-ನಂತರ ಕೈ ತೊಳೆಯಲು, ಕುಡಿಯಲು ಸೇರಿದಂತೆ ಕನಿಷ್ಠ 7 ಟ್ಯಾಂಕರ್‌ ನೀರು ಹೊಂದಿಸಲು ಹೆಣಗಾಟ ನಡೆದಿದೆ.

ಈಗ ಹಣ ಕೊಟ್ಟರೂ ನೀರಿಲ್ಲದಂತಾಗಿದೆ. ಮೇ 25ರ ಸಭೆಯಲ್ಲಿ ಇನ್ನೂ ಕೆಲವು ನಿರ್ಣಯಗಳನ್ನು ಮಾಡಲಿದ್ದೇವೆ. ಅದರೂ ಭಕ್ತರಿಗೆ ದಾನಮ್ಮದೇವಿ ದರ್ಶನಕ್ಕೆ ಬರಬೇಡಿ ಎನ್ನಲಾಗದು, ಬರುವುದನ್ನು ಮುಂದೂಡಿದರೆ ಒಳಿತು.
-ಪ್ರಕಾಶ ಗಣಿ, ಅಧ್ಯಕ್ಷರು, ಶ್ರೀದಾನಮ್ಮದೇವಿ ದೇವಸ್ಥಾನ ಟ್ರಸ್ಟ್‌, ಗುಡ್ಡಾಪುರ, ತಾ| ಜತ್ತ, ಮಹಾರಾಷ್ಟ್ರ.

Advertisement

* ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next