Advertisement
ಗಂಗೊಳ್ಳಿ/ಗುಜ್ಜಾಡಿ: ಕುಂದಾಪುರ ತಾಲೂಕಿನಲ್ಲಿಯೇ ದೊಡ್ಡ ಗ್ರಾ.ಪಂ.ಗಳಲ್ಲಿ ಒಂದಾದ ಗಂಗೊಳ್ಳಿಯಲ್ಲಿ ಸದ್ಯಕ್ಕೆ ಅಷ್ಟೇನೂ ನೀರಿನ ಸಮಸ್ಯೆಯಿಲ್ಲ. ಆದರೆ ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಈಗಿನಿಂದಲೇ ನೀರಿನ ಸಮಸ್ಯೆ ಆರಂಭವಾಗಿದೆ.
ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಲ್ಲ ಐದು ವಾರ್ಡ್‌ಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷ ಇರುತ್ತದೆ. ಇಲ್ಲಿನ ಜನತಾ ಕಾಲೋನಿ, ಕಳಿಹಿತ್ಲು, ಮಂಕಿ, ನಾಯಕವಾಡಿ, ಕೊಡಪಾಡಿ ವಾರ್ಡ್‌ಗಳಲ್ಲಿ ಈ ಸಮಸ್ಯೆಯಿದೆ. ಇಲ್ಲೆಲ್ಲ ಇನ್ನು ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬಾವಿ ಇದೆ. ಆದರೆ ಉಪ್ಪು ನೀರಿನಿಂದಾಗಿ ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಹೆಚ್ಚಿನ ಮನೆಗಳಲ್ಲಿ ಬಾವಿಯಿದ್ದರೂ, ಬೇಸಗೆಯಲ್ಲಿ ನೀರಿರುವುದಿಲ್ಲ. ಪಂಚಾಯತ್‌ನಿಂದ ನಳ್ಳಿ ನೀರನ್ನು ಎರಡು ದಿನಕ್ಕೊಮ್ಮೆ ಕೊಡುತ್ತಾರೆ. ಅದು ಕೂಡ ಎತ್ತರದ ಪ್ರದೇಶಗಳಿಗೆ ನಿರಂತರವಾಗಿ ಸಿಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಇಲ್ಲಿರುವ ಕೇವಲ ಶೇ.10 ರಷ್ಟು ಮನೆಗಳಿಗೆ ಮಾತ್ರ ನೀರಿನ ಸಮಸ್ಯೆಯಿಲ್ಲ. ಆದರೆ ಶೇ. 90 ರಷ್ಟು ಮನೆಗಳಲ್ಲಿ ನೀರಿನ ಸಮಸ್ಯೆಯಿದೆ. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ. ದೊಡ್ಡ ಮಟ್ಟದ ನೀರಿನ ಯೋಜನೆಗೆ ಈ ಗ್ರಾಮದ ತುರ್ತು ಅಗತ್ಯವಾಗಿದೆ.
Related Articles
ಗಂಗೊಳ್ಳಿಯ ಸುತ್ತಲೂ 3 ನದಿಗಳು ಹರಿಯುತ್ತಿದ್ದರೂ ಬೇಸಗೆಯಲ್ಲಿ ನೀರಿಗೆ ಪರದಾಡಬೇಕಾಗಿದೆ. ಎತರ್ತದ ಪ್ರದೇಶವಾದ ಮೇಲ್ ಗಂಗೊಳ್ಳಿ, ಅಂಬೇಡ್ಕರ್ ಕಾಲನಿ, ಬಾವಿಕಟ್ಟೆ ಭಾಗಗಳಲ್ಲಿ ಏಪ್ರಿಲ್‌ನಿಂದ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಬಂದರು ಪ್ರದೇಶ, ಮಲ್ಯರಮಠ, ದಾಕುಹಿತ್ಲು, ಲೈಟ್‌ಹೌಸ್, ಮ್ಯಾಂಗನೀಸ್ ವಾರ್ಫ್, ಖಾರ್ವಿಕೇರಿ, ಕಲೈಕಾರ್ ಪ್ರದೇಶಗಳು ಕೆಳಗಿನ ಭಾಗ ಆಗಿರುವುದರಿಂದ ಟ್ಯಾಂಕ್‌ನ ನೀರು ಪೂರೈಕೆ ಆಗುತ್ತಿದೆ.
Advertisement
ಕೈಗೊಂಡ ಕ್ರಮಗಳೇನು?ಜನತಾ ಕಾಲನಿಯಲ್ಲಿ 1.50 ಲಕ್ಷ ರೂ. ವೆಚ್ಚದಲ್ಲಿ ಬೋರ್‌ವೆಲ್ ತೆರೆಸಲಾಗಿದೆ. ಮತ್ತೂಂದು ಬೋರ್‌ವೆಲ್‌ಗೆ 95 ಸಾವಿರ ರೂ. ವ್ಯಯಿಸಲಾಗಿದೆ. 20 ಲಕ್ಷ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಬೇಡಿಕೆಯಿದೆ. ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ? ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇದು. ಗರಿಷ್ಠ ಪ್ರಯತ್ನ
ಗುಜ್ಜಾಡಿ ಗ್ರಾಮ ಪಂಚಾಯತ್‌ನಲ್ಲಿ ಕಳೆದೊಂದು ವರ್ಷದಲ್ಲಿ ಜನರಿಗೆ ನೀರು ಪೂರೈಕೆಗೆ ಪಂಚಾಯತ್ ಗರಿಷ್ಠ ಪ್ರಯತ್ನ ನಡೆಸುತ್ತಿದೆ. ಕಳೆದ ವರ್ಷ ಟ್ಯಾಂಕರ್ ನೀರು ಪೂರೈಕೆಗೆ ಅಂದಾಜು 5 ಲಕ್ಷ ರೂ. ವರೆಗೆ ವ್ಯಯಿಸಿದೆ. 3ನೇ ವಾರ್ಡ್‌ನ ಮಾವಿನಕಟ್ಟೆಯಲ್ಲಿ 50 ಸಾವಿರ ರೂ. ವೆಚ್ಚದಲ್ಲಿ ಬೋರ್‌ವೆಲ್ ಕೊರೆಯಿಸಲಾಗಿದೆ. ಜಿ.ಪಂ. ಸದಸ್ಯೆ ಶೋಭಾ ಜಿ.ಪುತ್ರನ್ ಅವರ ಅನುದಾನದಡಿ ಬಾವಿಯೊಂದನ್ನು ತೆಗೆಯಲಾಗುತ್ತಿದೆ. ಶಾಶ್ವತ ಪರಿಹಾರ ಬೇಕು
ಬೇಸಗೆಯಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಶಾಶ್ವತ ಪರಿಹಾರಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಈ ಗ್ರಾಮವನ್ನು ಸೇರಿಸಿಕೊಂಡು, ಸೌಕೂರು – ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಜಿ.ಪಂ.ಗೂ ಕೂಡ ಮನವಿ ಸಲ್ಲಿಸಲಾಗಿದೆ.
– ಶಕುಂತಳಾ,
ಕಾರ್ಯದರ್ಶಿ,ಗುಜ್ಜಾಡಿ ಗ್ರಾ.ಪಂ. ಮನವಿ ಸಲ್ಲಿಕೆ
ಪಂಚಾಯತ್‌ನಿಂದ ಪ್ರತಿ ಬೇಸಗೆಯಲ್ಲಿ ನೀರು ಪೂರೈಕೆಗೆ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಆದರೆ ಇಲ್ಲಿನ ಇಡೀ ಪ್ರದೇಶ ಉಪ್ಪು ನೀರಿನಿಂದ ಆವೃತವಾಗುತ್ತಿರುವುದರಿಂದ ಏಪ್ರಿಲ್ – ಮೇಯಲ್ಲಿ ಎತ್ತರದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಸೌಕೂರು – ಸಿದ್ದಾಪುರ ಏತ ನೀರಾವರಿ ಯೋಜನೆಯಲ್ಲಿ ನಮ್ಮ ಪಂಚಾಯತನ್ನು ಕೂಡ ಸೇರಿಸಲು ಮನವಿ ಸಲ್ಲಿಸಿದ್ದೇವೆ. ಓವರ್ ಹೆಡ್ ಟ್ಯಾಂಕ್‌ಗೆ ಬೇಡಿಕೆಯಿದೆ.
– ಶ್ರೀನಿವಾಸ ಖಾರ್ವಿ,
ಅಧ್ಯಕ್ಷರು,ಗಂಗೊಳ್ಳಿ ಗ್ರಾ.ಪಂ. -ಪ್ರಶಾಂತ್ ಪಾದೆ