ಶಿವಮೊಗ್ಗ: ನಗರದ ಪ್ರತಿಷ್ಠಿತ ಬಡಾವಣೆಯಾಗಿದ್ದ ಶಾಂತಮ್ಮ ಲೇಔಟ್ ಈಗ ತುಂಗ ಮತ್ತು ಭದ್ರಾ ಕಾಲುವೆಗಳ ಸಂಗಮ ತಾಣವಾಗಿದೆ. ಒತ್ತುವರಿ, ಅವೈಜ್ಞಾನಿಕ ಕಾಮಗಾರಿಗಳಿಂದ ಸಣ್ಣ ಮಳೆ ಬಂದರೂ ರಾಜಕಾಲುವೆ ಉಕ್ಕಿ ಹರಿದು ಇಡೀ ಲೇಔಟ್‌ಗೆ ನೀರು ಆವರಿಸಿಕೊಳ್ಳುತ್ತದೆ. ಈ ಕುರಿತು ‘ಉದಯವಾಣಿ ‘ ನಡೆಸಿದ ಸಾಕ್ಷಾತ್ ವರದಿ ಇಲ್ಲಿದೆ.
ಹೊಳೆಹೊನ್ನೂರು ರಸ್ತೆಯಲ್ಲಿರುವ ಈ ಬಡಾವಣೆ ತುಂಗಾ ನದಿಗೆ ಹೊಂದಿಕೊಂಡಂತೆ ಇದೆ. 2019 ರವರೆಗೂ ಈ ಬಡಾವಣೆಗೆ ನೀರು ನುಗ್ಗಿದ್ದು ಕಂಡಿಲ್ಲ. 2019ರ ಆಗಸ್ಟ್‌ನಲ್ಲಿ ಸುರಿದ ಭೀಕರ ಮಳೆ, ತುಂಗಾ ನದಿ ಪ್ರವಾಹದಿಂದ ನೂರಾರು ಮನೆಗಳು ಜಲಾವೃತಗೊಂಡಿದ್ದವು. ತುಂಗೆಯಲ್ಲಿ 80 ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟರೆ ಈ ಬಡಾವಣೆಗೆ ನೆರೆ ಆವರಿಸುತ್ತದೆ. ತುಂಗೆ ಉಕ್ಕಿ ಹರಿದಾಗ ಮಾತ್ರ ನೀರು ನುಗ್ಗುತ್ತದೆ ಎಂಬ ಮಾತನ್ನು ಮೊನ್ನೆ ಸುರಿದ ಮಳೆ ಸುಳ್ಳಾಗಿಸಿದೆ. ಅದಕ್ಕೆ ಕಾರಣ 2018ರ ನಂತರ ನಡೆದ ಕಾಲುವೆ ಕಾಮಗಾರಿ.
10 ಅಡಿಗೆ ಇಳಿದ ಕಾಲುವೆ
ಶಿವಮೊಗ್ಗದ ವಿದ್ಯಾನಗರ ಮೂಲಕ ಹಾದುಹೋಗುವ ತುಂಗಾ ಕಾಲುವೆ ಪುರಲೆ ಕೆರೆಗೆ ತಲುಪುತ್ತದೆ. ಅಲ್ಲಿಂದ ಅದು ಭರ್ತಿಯಾಗಿ ತುಂಗಾ ನದಿ ಸೇರುತ್ತದೆ. ಈ ಕಾಲುವೆಯು ಮೊದಲು 30 ಅಡಿಗೂ ಅಧಿ ಕ ಅಗಲವಿತ್ತು. ಎಷ್ಟೇ ನೀರು ಹರಿದುಬಂದರೂ ಸರಾಗವಾಗಿ ಹರಿದು ಹೋಗುತ್ತಿತ್ತು. 2018-19ರಲ್ಲಿ ಈ ಕಾಲುವೆಗೆ ಸಿಮೆಂಟ್ ತಡೆಗೋಡೆ ಮಾಡಲಾಗಿದೆ. ಅಗಲವನ್ನು 10 ಅಡಿಗೆ ಇಳಿಸಲಾಗಿದ್ದು ನೀರು ರಭಸವಾಗಿ ಹರಿದುಹೋಗದಂತೆ ಮಾಡಲಾಗಿದೆ. ಈ ಕಾಲುವೆಯಲ್ಲಿ ಎಲ್ಲ ಕಾಲದಲ್ಲೂ ಒಂದೆರೆಡು ಅಡಿ ನೀರು ಇರಲೇಬೇಕು. ಅದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಸ್ಥಳೀಯರಿಗೆ ಸಬೂಬು ಹೇಳಿದ್ದಾರೆ. ವಿದ್ಯಾನಗರದಿಂದ ಪುರಲೆ ಕೆರೆ ತಲುಪುವ ಈ ಕಾಲುವೆ ನಾಲ್ಕು ಕಿ.ಮೀ ಉದ್ದ ಇದ್ದು ಈ ಕಾಲುವೆಗೆ ಹರಿಗೆ ಕೆರೆಯ ಮೂರು ಕಾಲುವೆಗಳು ಬಂದು ಸೇರುತ್ತವೆ.
ಭದ್ರಾ ನೀರು ಸೇರ್ಪಡೆ
ಇನ್ನು ತುಂಗಾ ನದಿಗೆ ಭದ್ರಾ ಕಾಲುವೆ ನೀರು ಹರಿಗೆ ಕೆರೆ ತುಂಬಿ ಕೋಡಿ ಬಿದ್ದು ಪುರಲೆ ಬಳಿ ಸೇರುತ್ತದೆ. ಹರಿಗೆ ಕೆರೆ ಒಟ್ಟು ಮೂರು ಕಾಲುವೆಗಳಿದ್ದು ಒಂದು ಪುರಲೆ ಕೆರೆಗೆ, ಇನ್ನೊಂದು ಖಾಸಗಿ ಲೇಔಟ್ ಮೂಲಕ ತುಂಗಾ ಕಾಲುವೆಗೆ, ಇನ್ನೊಂದು ತೋಟ, ಗದ್ದೆಗಳ ಮೂಲಕ ತುಂಗಾ ಕಾಲುವೆ ಸೇರುತ್ತದೆ. ಭದ್ರಾದಿಂದ ಬರುವ ಎಲ್ಲ ನೀರು ತುಂಗಾ ಕಾಲುವೆ ಮೂಲಕವೇ ಪುರಲೆ ಕೆರೆ ಸೇರಿ ಅಲ್ಲಿಂದ ನದಿಗೆ ಹೋಗುತ್ತದೆ. ಮೂರು ಕಾಲುವೆಗಳ ಪೈಕಿ ಎರಡು ಕಾಲುವೆಗಳು ಒತ್ತುವರಿಯಾಗಿ ಕಿರಿದಾಗಿದೆ. ಲೇಔಟ್‌ದಾರರು, ಅಕ್ರಮ ಚಟುವಟಿಕೆಗಳಿಂದ ಕಾಲುವೆ ಕಿರಿದಾಗಿದೆ. ಮೂರನೇ ಕಾಲುವೆ ಮೂಲಕ ಭಾರೀ ಪ್ರಮಾಣದಲ್ಲಿ ತುಂಗಾ ಕಾಲುವೆಗೆ ಸೇರುವ ನೀರು ಮುಂದೆ ಹರಿಯಲು ಆಗದೆ ಕಾಲುವೆ ಮುಂದೆ ಉಕ್ಕಿ ಶಾಂತಮ್ಮ ಲೇಔಟ್ ಮೂಲಕ ಹೋಗುವ ಎರೆ ಕಾಲುವೆಗೆ ಸೇರುತ್ತದೆ. ಈ ಎರೆ ಕಾಲುವೆ ಸಹ ಕಿರಿದಾಗಿದ್ದು ನೀರು ಉಕ್ಕಿ ಬಡಾವಣೆಗೆ ನುಗ್ಗುತ್ತದೆ.
ಕಾಲುವೆ ಅಗಲ ಮಾಡಿ
ಕಾಂಕ್ರೀಟ್ ವಾಲ್ ನಿರ್ಮಿಸುವ ಮೊದಲು ಕಾಲುವೆ 25 ರಿಂದ 30 ಅಡಿ ಅಗಲವಿತ್ತು. ಎಂತಹ ದೊಡ್ಡ ಮಳೆಯಾದರೂ ಸೇತುವೆ ಹಂತದವರೆಗೂ ನೀರು ಬರುತ್ತಿತ್ತು. ಈಗ ಕಾಲುವೆ ಅಗಲ 10ಅಡಿಗೆ ಇಳಿಸಲಾಗಿದೆ. ಇದರಿಂದ ನೀರು ಮುಂದೆ ಹರಿಯಲಾಗದೆ ಉಕ್ಕಿ ಶಾಂತಮ್ಮ ಲೇಔಟ್ ಮೂಲಕ ಹೋಗುವ ಕಾಲುವೆಗೆ ಹೋಗುತ್ತಿದೆ. ಕಾಂಕ್ರೀಟ್ ವಾಲ್‌ಗಳನ್ನು ಕಿತ್ತು ನೀರು ಸರಾಗವಾಗಿ ಹರಿಯುವಂತೆ ಮಾಡದಿದ್ದರೆ ವಿದ್ಯಾನಗರ, ಶಾಂತಮ್ಮ ಲೇಔಟ್‌ನ ನೂರಾರು ಮನೆಗಳು ಮುಳುಗುತ್ತವೆ. ಈ ಬಗ್ಗೆ ಶಾಸಕರಿಗೆ ಅನೇಕ ಬಾರಿ ಸ್ಥಳಕ್ಕೆ ಕರೆದು ತಿಳಿಹೇಳಿದ್ದೇವೆ. ಮಳೆಗಾಲಕ್ಕೂ ಮುನ್ನ ಕ್ರಮಕೈಗೊಳ್ಳದಿದ್ದರೆ ಈ ವರ್ಷ ಇನ್ನೆಷ್ಟು ಬಾರಿ ನೀರು ನುಗ್ಗುತ್ತದೆ ಗೊತ್ತಿಲ್ಲ ಎನ್ನುತ್ತಾರೆ ವಾರ್ಡ್ ಕಾರ್ಪೋರೇಟರ್ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ.
–ಶರತ್ ಭದ್ರಾವತಿ