Advertisement

ಜಾಕವೆಲ್‌ ಇದ್ದರೂ ಜಮೀನಿಗೆ ಬರುತ್ತಿಲ್ಲ ನೀರು

05:12 PM Nov 18, 2018 | Team Udayavani |

ನರಗುಂದ: ಬೆಣ್ಣಿಹಳ್ಳದಲ್ಲಿ ವ್ಯರ್ಥವಾಗಿ ಹರಿದು ಮಲಪ್ರಭಾ ನದಿ ಸೇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ನಿರ್ಮಿಸಲಾದ ಏತ ನೀರಾವರಿ ಯೋಜನೆಗಳು ಇಂದು ಯಾತಕ್ಕೂ ಪ್ರಯೋಜನ ಇಲ್ಲದಂತಾಗಿದೆ. ತಾಲೂಕಿನ ಕುರ್ಲಗೇರಿ ಗ್ರಾಮದ ಬೆಣ್ಣಿಹಳ್ಳ ದಂಡೆಯಲ್ಲಿ ಏತ ನೀರಾವರಿ ಜಾಕವೆಲ್‌ ಇದ್ದರೂ ರೈತರ ಜಮೀನುಗಳಿಗೆ ನೀರು ತಲುಪದ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ನರಗುಂದ ಸೇರಿ ಪಟ್ಟಣದ ಕಸಬಾ ಓಣಿ, ತಾಲೂಕಿನ ಕುರ್ಲಗೇರಿ, ಸುರಕೋಡ ಸೇರಿ ನಾಲ್ಕು ಗ್ರಾಮಗಳ ಸುಮಾರು 1,500 ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಸದುದ್ದೇಶದಿಂದ ಕುರ್ಲಗೇರಿ ಗ್ರಾಮದ ಸಮೀಪ ಬೆಣ್ಣಿಹಳ್ಳ ದಂಡೆಯಲ್ಲಿ ನೀರಾವರಿ ನಿಗಮದಿಂದ ಏತ ನೀರಾವರಿ ಯೋಜನೆ ಸ್ಥಾಪಿಸಲಾಗಿದೆ. ಹಿಂದೆ ಮಾಜಿ ಶಾಸಕ ಬಿ.ಆರ್‌. ಯಾವಗಲ್ಲ ಅವಧಿಯಲ್ಲಿ ಮಂಜೂರಾತಿ ಪಡೆದ ಈ ಯೋಜನೆಗೆ 2011ರಲ್ಲಿ ಶಾಸಕ ಸಿ.ಸಿ. ಪಾಟೀಲ ಸಮ್ಮುಖದಲ್ಲಿ ಅಂದಿನ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು.

ಸೋರಿಕೆ ಪರಿಣಾಮ: ಬೆಣ್ಣಿಹಳ್ಳದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನೇ ರೈತರ ಜಮೀನುಗಳಿಗೆ ಪೈಪ್‌ಲೈನ್‌ ಮೂಲಕ ನೀರೊದಗಿಸುವ ಏತ ನೀರಾವರಿ ಯೋಜನೆಗೆ 6.4 ಕಿಮೀ ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ ಪೈಪ್‌ ಲೈನ್‌ ಗುಣಮಟ್ಟದ ಕೊರತೆಯಿಂದಾಗಿ ಜಾಕವೆಲ್‌ ಚಾಲೂ ಮಾಡಿದಾಗಲೆಲ್ಲ ಪೈಪ್‌ ಗಳು ಒಡೆದು ನೀರು ಸೋರಿಕೆಯಾಗುತ್ತದೆ. ಪ್ರಾರಂಭದಿಂದಲೂ ಯೋಜನೆ ನೀರು ನಮ್ಮ ಜಮೀನಿಗೆ ತಲುಪಿಲ್ಲ ಎಂಬುದು ರೈತರ ಆರೋಪವಾಗಿದೆ.

20 ದಿನದಿಂದ ಬೆಣ್ಣಿಹಳ್ಳದಲ್ಲಿ ನೀರು ಹರಿದು ಹೋಗುತ್ತಿದೆ. ಪಕ್ಕದಲ್ಲೇ ನೀರು ಹರಿಯುತ್ತಿದ್ದರೂ ನಮ್ಮ ಬೆಳೆಗಳಿಗೆ ದೊರಕುತ್ತಿಲ್ಲ ಎಂಬ ನೋವು ನಮ್ಮನ್ನು ಕಾಡುತ್ತಿದೆ. 20 ದಿನ ಅವಧಿಯ ಕಡಲೆ, ಗೋಧಿ, ಜೋಳ ಬೆಳೆಗಳು ತೇವಾಂಶ ಕೊರತೆಗೆ ಬಾಡಿ ನಿಂತಿವೆ ಎಂಬುದು ರೈತರ ದೂರಾಗಿದೆ.

ಇನ್ನೂ ಹಸ್ತಾಂತರವಿಲ್ಲ: ಹಾವೇರಿ ಮೂಲದ ಎಸ್‌ಪಿಎಂಎಲ್‌ (ಸುಭಾಷ ಪ್ರç.ಮಾರ್ಕೆಟಿಂಗ್‌ ಲಿ.) ಏಜೆನ್ಸಿ ನಿರ್ಮಿಸಿದ ಏತನೀರಾವರಿ ಯೋಜನೆ ಈವರೆಗೆ ನೀರಾವರಿ ನಿಗಮಕ್ಕೆ ಹಸ್ತಾಂತರವಾಗಿಲ್ಲ. ಇಲ್ಲಿಯವರೆಗೂ ಎಸ್‌ಪಿಎಂಎಲ್‌ ಏಜೆನ್ಸಿಯೇ ನಿರ್ವಹಣೆ ಮಾಡುತ್ತಿದೆ ಎನ್ನಲಾಗಿದೆ. ಎರಡು ದಿನದಲ್ಲಿ ದುರಸ್ತಿ: ಈ ಬಗ್ಗೆ ಎಸ್‌ಪಿಎಂಎಲ್‌ ಏಜೆನ್ಸಿ ಸ್ಥಾನಿಕ ಅಭಿಯಂತ ಚೇತನಕುಮಾರ ಅವರನ್ನು ವಿಚಾರಿಸಿದಾಗ, 2011ರಲ್ಲಿ ಪ್ರಾರಂಭಗೊಂಡ ಯೋಜನೆಯಿಂದ ನಾಲ್ಕು ವರ್ಷಗಳ ಕಾಲ ರೈತರ ಜಮೀನಿಗೆ ನೀರು ದೊರಕಿಸಲಾಗಿದೆ. ಮೂರು ವರ್ಷ ಬೆಣ್ಣಿಹಳ್ಳಕ್ಕೆ ಸಮರ್ಪಕ ನೀರು ಬರುತ್ತಿರಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

ಜಾಕವೆಲ್‌ ಮುಖ್ಯ ಪೈಪ್‌ಲೈನ್‌ ರಸ್ತೆಗೆ ಹೊಂದಿಕೊಂಡಿದ್ದರಿಂದ ಪೈಪ್‌ಗ್ಳಲ್ಲಿ ಸೋರಿಕೆ ಆಗುತ್ತಿದೆ. ಈ ವರ್ಷ ಮೂರು ಕಡೆಗೆ ಸೋರಿಕೆ ಕಂಡು ಬಂದಿದೆ. ಎರಡು ದಿನದಲ್ಲಿ ದುರಸ್ತಿ ಮಾಡಿ ನೀರು ಬಿಡಲಾಗುತ್ತದೆ. ನೀರಾವರಿ ನಿಗಮದವರೂ ಹಸ್ತಾಂತರ ಮಾಡಿಕೊಳ್ಳುತ್ತಿಲ್ಲ ಎನ್ನುತ್ತಿದ್ದಾರೆ. ಬೆಣ್ಣಿಹಳ್ಳದಲ್ಲಿ ವ್ಯರ್ಥವಾಗಿ ಹರಿಯುವ ನೀರನ್ನು ರೈತರ ಜಮೀನಿಗೆ ದೊರಕಿಸುವ ಮಹತ್ವದ ಏತ ನೀರಾವರಿ ಯೋಜನೆ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಇಷ್ಟೆಲ್ಲ ಆದರೂ ಕೋಟ್ಯಂತರ ವೆಚ್ಚದ ಯೋಜನೆ ಅನುಷ್ಠಾನ ಸಮರ್ಪಕ ಆಗದಿದ್ದರೂ ನೀರಾವರಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದು, ರೈತರಲ್ಲಿ ಆಕ್ರೋಶ ಹುಟ್ಟಿಸಿದೆ.

ನಾಲ್ಕರಲ್ಲಿ ಒಂದೇ ಚಾಲೂ ಇದೆ
ಕುರ್ಲಗೇರಿ, ಬನಹಟ್ಟಿ, ಖಾನಾಪುರ, ರಡ್ಡೇರನಾಗನೂರ ಸೇರಿ ತಾಲೂಕಿನಲ್ಲಿ ನಾಲ್ಕು ಏತ ನೀರಾವರಿ ಯೋಜನೆ ಸ್ಥಾಪಿಸಿದೆ. ಅದರಲ್ಲಿ ಬನಹಟ್ಟಿ ಯೋಜನೆ ಚಾಲೂ ಇದೆ. ಕುರ್ಲಗೇರಿ ಯೋಜನೆ ಪೈಪ್‌ಲೈನ್‌ ಸೋರಿಕೆ ದುರಸ್ತಿ ನಡೆದಿದ್ದರೆ, ಖಾನಾಪುರ ಯೋಜನೆ ಇನ್ನೆರಡು ದಿನದಲ್ಲಿ ಪ್ರಾರಂಭಗೊಳ್ಳಲಿದೆ. ರಡ್ಡೇರನಾನೂರ ಏತ ನೀರಾವರಿ ಯೋಜನೆ ಪೈಪ್‌ಲೈನ್‌ ಜಾಗದಲ್ಲೇ ರೈತರು ಕೃಷಿ ಹೊಂಡ ನಿರ್ಮಿಸಿದ್ದರಿಂದ ಕಾರ್ಯಾರಂಭ ಕಷ್ಟಕರವಾಗಿದೆ. ಇದಕ್ಕೊಂದು ಪರಿಹಾರದ ಚಿಂತನೆಯಲ್ಲಿದ್ದೇವೆ.
ಚೇತನಕುಮಾರ, ಎಸ್‌ಪಿಎಂಎಲ್‌ ಏಜೆನ್ಸಿ

ಗೋಳು ಕೇಳುವರಿಲ್ಲ
ಪೈಪ್‌ಲೈನ್‌ ಎಲ್ಲೆಂದರಲ್ಲಿ ಸೋರಿಕೆ ಆಗುತ್ತಿದೆ. ಪೈಪ್‌ ಒಡೆದರೆ ನಮ್ಮ ಬೆಳೆಗೆ ನೀರು ಸಿಗೋದು ಹೇಗೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ. ನೀರಾವರಿ ಅಧಿಕಾರಿಗಳಿಗೆ ಗೋಗರೆದರೂ ನಮ್ಮ ಮೊರೆ ಆಲಿಸುವವರಿಲ್ಲ. 
 ಬಿ.ವೈ. ಬಾರಕೇರ, ನರಗುಂದ ರೈತ 

ಸಿದ್ಧಲಿಂಗಯ್ಯ ಮಣ್ಣೂರಮಠ 

Advertisement

Udayavani is now on Telegram. Click here to join our channel and stay updated with the latest news.

Next