ರಾಜ್ಯದ ಹಲವೆಡೆ ಬರ ಪರಿಸ್ಥಿತಿಯಿಂದಾಗಿ ನೀರಿನ ಅಭಾವ ಸೃಷ್ಟಿಯಾಗಿ ಜನ-ಜಾನುವಾರುಗಳು ಪರಿತಪಿಸುವಂತಾಗಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರ ಆಗಮನದ ನಡುವೆಯೇ, ಪ್ರಮುಖ ಧಾರ್ಮಿಕ ಕ್ಷೇತಗಳಲ್ಲಿ ನೀರಿನ ಅಭಾವದಿಂದ ದಾಸೋಹ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಸಮಸ್ಯೆ ಎದುರಾಗಿದೆ. ಹಲವೆಡೆ ಭಕ್ತರಿಗೆ ಬಕೆಟ್‌ಗೆ ಇಂತಿಷ್ಟು ಎಂದು ದರ ನಿಗದಿ ಮಾಡಿ ಮಾರಾಟ ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.
ಚಿಂಚಲಿ ಮಾಯಕ್ಕ ದೇವಿಗೂ ತಟ್ಟಿದ ಬರ ಬಿಸಿ
ರಾಯಬಾಗ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡಲು ಮಹಾರಾಷ್ಟ್ರ ಸರ್ಕಾರ ಮೀನಮೇಷ ಎಣಿಸುತ್ತಿರುವುದರಿಂದ ಕಳೆದೆರಡು ತಿಂಗಳಿಂದ ಈ ಭಾಗದ ಜನರ ಜೀವನದಿ ಕೃಷ್ಣಾ ನದಿಯ ಒಡಲು ಸಂಪೂರ್ಣ ಬತ್ತಿದೆ. ಇದರಿಂದಾಗಿ ಚಿಂಚಲಿ ಮಾಯಕ್ಕ ದೇವಿಗೂ ಬರದ ಬಿಸಿ ತಟ್ಟಿದೆ.
ಉತ್ತರ ಕರ್ನಾಟಕದ ಸುಪ್ರಸಿದ್ಧ ದೇವಸ್ಥಾನ ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ದಿನನಿತ್ಯ ಹಾಗೂ ಹುಣ್ಣಿಮೆಯಂದು ಸಾವಿರಾರು ಭಕ್ತರು ಬರುತ್ತಾರೆ. ಇಲ್ಲಿ ನಿತ್ಯ ಅನ್ನ ದಾಸೋಹ ನಡೆಯುತ್ತಿದೆ. ದೇವಸ್ಥಾನಕ್ಕೆ ಕೃಷ್ಣಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತಿತ್ತು.
ಆದರೆ, ನದಿ ಬತ್ತಿದ್ದರಿಂದ ತೋಟಪಟ್ಟಿಗಳಿಂದ ಟ್ಯಾಂಕರ್ ಮೂಲಕ ನೀರು ತರಲಾಗುತ್ತಿದೆ. ಕೃಷ್ಣಾ ನದಿ ಪಾತ್ರದ ಗ್ರಾಮಗಳು ನದಿ ನೀರನ್ನೇ ಅವಲಂಬಿಸಿದ್ದು, ನೂರಾರು ಎಕರೆ ಕಬ್ಬು ಬೆಳೆ ನೀರಿಲ್ಲದೆ ಒಣಗಿದೆ. ಜನ-ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಚಿಂಚಲಿ ಮಾಯಕ್ಕ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಇನ್ನಾದರೂ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸರ್ಕಾರದ ಗಮನಕ್ಕೆ ತಂದು ತ್ವರಿತವಾಗಿ ಕೃಷ್ಣಾ ನದಿಗೆ ನೀರು ಬಿಡಿಸಬೇಕು.
-ಜೀತೆಂದ್ರ ಜಾಧವ, ಮಾಯಕ್ಕ ದೇವಸ್ಥಾನ ಕಮಿಟಿ ಅಧ್ಯಕ್ಷ
ನದಿಯಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿರುವುದು ಗಮನಕ್ಕೆ ಬಂದಿದೆ. ಬರದಿಂದ ಬೆಳೆ ನಾಶವಾಗುವ ವಾಣಿಜ್ಯೇತರ ಬೆಳೆಗಳಿಗೆ ಮಾತ್ರ ಸರ್ಕಾರ ಬೆಳೆ ಪರಿಹಾರ ನೀಡುತ್ತದೆ. ಕಬ್ಬು ಬೆಳೆಗೆ ಪರಿಹಾರ ನೀಡುವ ಬಗ್ಗೆ ಯಾವುದೇ ಆದೇಶವಿಲ್ಲ.
-ಡಿ.ಎಚ್.ಕೋಮರ, ತಹಶೀಲ್ದಾರ್
* ಲಖನ ಕಟ್ಟಿಕಾರ