ಹಾಸನ: ಕಾವೇರಿ ನ್ಯಾಯಾಧಿಕರಣದ ನಿಯಮ ಉಲ್ಲಂಘಿಸಿ, ಅಚ್ಚುಕಟ್ಟು ಪ್ರದೇಶದ ಶಾಸಕರ ಸಲಹೆ ಪಡೆಯದೇ ಹೇಮಾವತಿ ಜಲಾಶಯದಿಂದ ನಾಲೆಗಳಲ್ಲಿ ನೀರು ಬಿಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲೆಗಳಲ್ಲಿ ನೀರು ಹರಿಸಿ ಕೆರೆ, ಕಟ್ಟೆಗಳನ್ನು ತುಂಬಿಸಿ ಕುಡಿಯುವ ನೀರಿನ ಅಭಾವ ನಿವಾರಿಸಬೇಕು ಎಂದು ಕಳೆದ 3 ತಿಂಗಳಿಂದ ಜಿಲ್ಲೆಯ ಎಲ್ಲ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸು ತ್ತಿದ್ದೆವು. ಆದರೆ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಆದರೆ ಈಗ ಬಿಜೆಪಿ ಶಾಸಕರು ಹೇಳಿದ ಮಾತ್ರಕ್ಕೆ ನೀರು ಬಿಡಲಾಗಿದೆ.
ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದರು. ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ನೀರಿನ ಅಗತ್ಯವಿದ್ದರೆ ನೀರು ಹರಿಸಲು ನಮ್ಮ ವಿರೋಧವೂ ಇಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಸನ ಜಿಲ್ಲೆಯ ಜನರಿಗೆ ತಾರತಮ್ಯ ಮಾಡಬಾರದು ಎಂದರು. ಬೆಂಗಳೂರಿನಲ್ಲಿ ನಡೆದಿರುವ ಸಭೆಗೆ ಜೆಡಿಎಸ್ ಸಂಸದರು, ಶಾಸಕರಿಗೆ ಅಧಿಕೃತ ಆಹ್ವಾನ ಬಂದಿಲ್ಲ.
ಹಾಗಾಗಿ ಜೆಡಿಎಸ್ ಸಂಸದರು, ಶಾಸಕರು ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಕಾವೇರಿ ನ್ಯಾಯಾಧಿಕರಣದ ನಿಯಮ ಉಲ್ಲಂ ಸಿ ಹೇಮಾವತಿ ಜಲಾಶಯ ದಿಂದ ನೀರು ಬಿಟ್ಟಿರುವ ವಿಷಯ ತಮಿಳುನಾಡಿಗೆ ತಿಳಿದು ಸುಪ್ರೀಂ ಕೋರ್ಟ್‌ಗೆ ತಕರಾರು ಅರ್ಜಿಹಾಕಿದರೆ ಮುಂದಾಗುವ ಸಮಸ್ಯೆಗಳಿಗೆ ಅಧಿಕಾರಿ ಗಳು ಹಾಗೂ ಸರ್ಕಾರವೇ ನೇರ ಹೊಣೆ ಯಾಗಬೇಕಾದೀತು ಎಂದು ಎಚ್ಚರಿಸಿದರು.
ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ದೇವೇಗೌಡರು ತುಮಕೂರಿಗೆ ನೀರು ನೀಡುತ್ತಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿ ಬಿಜೆಪಿ ಮುಖಂಡರು ರಾಜಕಾರಣ ಮಾಡಿದ್ದಾರೆ ಎಂದು ಆಪಾದಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾವೇರಿಕೊಳ್ಳದ ಅಣೆಕಟ್ಟುಗಳ ನಾಲೆ ಹೂಳೆತ್ತುವುದು, ತೂಬು ಮತ್ತು ವಿತರಣಾ ನಾಲೆಗಳ ದುರಸ್ತಿ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು.