ವಿಜಯಪುರ: “ಕುಡಿಯಲು ನೀರು ಕೊಡಿ, ಇಲ್ಲವೇ ಕರ್ನಾಟಕಕ್ಕೆ ಸೇರಲು ಬಿಡಿ’ – ಇಂಥದ್ದೊಂದು ಘೋಷಣೆಯೊಂದಿಗೆ ಮಹಾರಾಷ್ಟ್ರದ ಗಡಿನಾಡ ಕನ್ನಡಿಗರು ಹೋರಾಟಕ್ಕೆ ಮುಂದಾಗಿದ್ದಾರೆ.
ಮಹಾರಾಷ್ಟ್ರ ಸರಕಾರಕ್ಕೆ ಕೊನೆಯ ಎಚ್ಚರಿಕೆ ನೀಡಲು ಆ.25ರಂದು 2 ಕಿ.ಮೀ. ದೀರ್ಘದಂಡ ನಮಸ್ಕಾರ ಹಾಕಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ.
ಕರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 120 ಹಳ್ಳಿಗಳಲ್ಲಿ 84 ಹಳ್ಳಿಗಳಲ್ಲಿ ಕನ್ನಡಿಗರೇ ತುಂಬಿಕೊಂಡಿದ್ದು, ಮನೆ-ಮನಗಳಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದಾರೆ. ಇವರಿಗೆ ಮಹಾರಾಷ್ಟ್ರ ಸರಕಾರ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಸಾರಿಗೆ, ವಿದ್ಯುತ್, ಕುಡಿಯುವ ನೀರು, ನೀರಾವರಿ ವಿಷಯದಲ್ಲಿ ತೋರುತ್ತಿರುವ ಅನ್ಯಾಯದ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ.
ಮೂಲ ಸೌಲಭ್ಯಕ್ಕಾಗಿ 40 ವರ್ಷಗಳಿಂದ ಕನ್ನಡಿಗರು ಹೋರಾಟ ಮಾಡುತ್ತಿದ್ದಾರೆ. 2014 ಜೂನ್ 1ರಿಂದ 9ರ ವರೆಗೆ ಉಮದಿ ಪಟ್ಟಣದಿಂದ ಜಿಲ್ಲಾ ಕೇಂದ್ರ ಸಾಂಗ್ಲಿ ವರೆಗೆ ಸಾವಿರಾರು ಕನ್ನಡಿಗರು 200 ಕಿ.ಮೀ. ಪಾದಯಾತ್ರೆ ನಡೆಸಿದ್ದಾಗ ಮಹಾರಾಷ್ಟ್ರ ಸರಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೂ ಅದು ಕೃತಿ ರೂಪಕ್ಕೆ ಬಾರದ ಕಾರಣ 2015ರ ಜನವರಿ 26ರಂದೇ ಸಾಂಗ್ಲಿ ಜಿಲ್ಲಾ ಧಿಕಾರಿ ಕಚೇರಿ ಎದುರು ಬೃಹತ್ ಹೋರಾಟ ನಡೆಸಿದ್ದರು. ಬಳಿಕ ಕರ್ನಾಟಕಕ್ಕೆ ಸೇರಲು ನಮಗೆ ಅವಕಾಶ ನೀಡಿ ಎಂಬ ಚಳವಳಿ ಆರಂಭಿಸಿದ್ದಾರೆ.