ದೇವನಹಳ್ಳಿ: ಬೆಂಗಳೂರು ನಗರದ ನಾಗವಾರ ಮತ್ತು ಹೆಬ್ಟಾಳ ಕೆರೆಯಿಂದ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸುವ ಯೋಜನೆ ಇದೆ. ಬಾಗಲೂರಿನಿಂದ ದೇವನಹಳ್ಳಿಗೆ 15 ಕಿ.ಮೀ. ದೂರ ಇರುವುದರಿಂದ ಶೀಘ್ರವಾಗಿ ತಾಲೂಕಿನ ಕೆರೆಗಳಿಗೆ ಪೈಪ್‌ಲೈನ್ ಮೂಲಕ ಹರಿಯುವ ಸಾಧ್ಯತೆ ಇದೆ ಎಂದು ತಾಪಂ ಪ್ರಭಾರಿ ಅಧ್ಯಕ್ಷೆ ನಂದಿನಿ ತಿಳಿಸಿದರು.
ತಾಲೂಕಿನ ಕೊಯಿರಾ ಗ್ರಾಮದ ರೇಷ್ಮೇ ಬೆಳೆಗಾರ ಚಿಕ್ಕೇ ಗೌಡರ ಹಿಪ್ಪು ನೇರಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಈಗಾಗಲೇ ತ್ಯಾಜ್ಯ ನೀರಿನ ಸಂಸ್ಕರಣೆ ಯೋಜನೆಗೆ ಸಚಿವ ಕೃಷ್ಣ ಭೈರೇಗೌಡರು ಬೆಂಗಳೂರು ನಗರದ ಬಾಗಲೂರು ಕೆರೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿ ಪರಿಶೀಲಿಸಿದ್ದಾರೆ.
ಈ ನೀರು ಕೆರೆಗಳಿಗೆ ಬರುವುದರಿಂದ ಅಂತರ್ಜಲಮಟ್ಟ ಹೆಚ್ಚಲು ಸಾಧ್ಯವಾಗುವುದು. ಮುಂಗಾರು ಮಳೆ ಕೈ ಕೊಟ್ಟಿದೆ. ವಾಡಿಕೆ ಮಳೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಬರಗಾಲದ ಸ್ಥಿತಿ ಎದುರಾಗಿರುವುದರಿಂದ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ರೇಷ್ಮೇ ಗೂಡಿನ ಬೆಲೆಯಲ್ಲಿ ಕುಸಿತ ಕಂಡಿದೆ ರೇಷ್ಮೇ ಇಲಾಖೆಯಲ್ಲಿ ಅನೇಕ ಪ್ರೋತ್ಸಾಹ ದಾಯಕ ಯೋಜನೆಗಳು ಇವೆ. ಅಂತರ್ಜಲ ಕೊರತೆಯಿಂದ ರೈತರು ಮುಂದೆ ಬರುತ್ತಿಲ್ಲ. ಜೀವ ಜಲವಿಲ್ಲದೇ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ. ಬೋರ್‌ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಕುಸಿತದಿಂದ ರೈತರ ಬದುಕು ದುಸ್ತರವಾಗಿದೆ.
ಹಲವಾರು ರೇಷ್ಮೇ ಬೆಳೆಗಾರರು ಹಿಪ್ಪು ನೇರಳೆ ಸೊಪ್ಪು ಪಶುಗಳಿಗೆ ಮೇವಿಗಾಗಿ ಕಟಾವು ಮಾಡುತ್ತಿದ್ದಾರೆ. ರೇಷ್ಮೇ ಇಲಾಖೆಯಿಂದ ಬರುವ ಎಲ್ಲಾ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ರೇಷ್ಮೇ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ಗಾಯಿತ್ರಿ, ರೈತ ಚಿಕ್ಕೇ ಗೌಡ, ರೇಷ್ಮೇ ತಾಂತ್ರಿಕ ವಿಸ್ತರಣಾಧಿಕಾರಿ ಶ್ರೀನಿವಾಸ್, ರೇಷ್ಮೇ ಇಲಾಖೆಯ ವಲಯ ಅಧಿಕಾರಿ ಮುನಿರಾಜು ಇದ್ದರು.