ಹುಣಸೂರು: ಹುಣಸೂರು ತಾಲೂಕಿನ ಹೋಬಳಿ ಕೇಂದ್ರವಾದ ಬಿಳಿಕೆರೆಯಲ್ಲಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ರೋಡ್ ಶೋ ನಡೆಸಿ ಮತಯಾಚಿಸಿದರು. ಗ್ರಾಮದ ಕೆರೆ ಬಳಿಯ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರೋಡ್ ಶೋ ಮೂಲಕ ಮುಖ್ಯಬೀದಿ, ವಿಶ್ವಕರ್ಮ ಸಮುದಾಯದ ಬೀದಿ ಸೇರಿದಂತೆ ವಿವಿಧೆಡೆ ಮೆರವಣಿಗೆ ನಡೆಸಿದರು.
ಶಾಸಕರು ತಮ್ಮ ಅವಧಿಯಲ್ಲಿ ಬಿಳಿಕೆರೆ ಭಾಗಕ್ಕೆ ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ಮಾಡಿರುವ ಆತ್ಮ ತೃಪ್ತಿ ಇದೆ. ಸದಾ ಬರಗಾಲದ ಬೀಡೆಂದೇ ಕರೆಯುತ್ತಿದ್ದ ಈ ಭಾಗದ ಪ್ರಮುಖ ಬಿಳಿಕೆರೆ, ಜೀನಹಳ್ಳಿ ಕೆರೆಗಳಿಗೆ ಕಳೆದ 40 ವರ್ಷಗಳಿಂದ ನೀರು ತುಂಬಿರಲಿಲ್ಲ, ಈ ಕೆರೆಗಳಿಗೆ ಹೊಸರಾಮನಹಳ್ಳಿ ಏತ ನೀರಾವರಿ ಮೂಲಕ ನೀರು ತುಂಬಿಸಿದ್ದು, ಸುತ್ತ ಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಸಿದೆ ಎಂದರು.
ನಾಲ್ಕು ಕೆರೆಗಳಿಗೆ ನೀರು: ಮರದೂರು ಮತ್ತು ಕಿರಿಜಾಜಿಯಿಂದ ಏತ ನೀರಾವರಿ ಮೂಲಕ ಸೋಮನಹಳ್ಳಿ, ಮೂಕನಹಳ್ಳಿ ಭಾಗದ ನಾಲ್ಕು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಆಯರಹಳ್ಳಿ ಬಳಿ ಹಿನ್ನೀರಿಗೆ ಅಣೆಕಟ್ಟೆ ನಿರ್ಮಿಸಲಾಗಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿರುವ ಬಿಳಿಕೆರೆಯಲ್ಲಿ ನೆನಗುದಿಗೆ ಬಿದ್ದಿದ್ದ ಬಸ್ ನಿಲ್ದಾಣ ನಿರ್ಮಾಣ, ಗ್ರಾಮದೊಳಗಿನ ಎಲ್ಲ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಕಳೆದ 18 ವರ್ಷಗಳಿಂದ ನಿಂತು ಹೋಗಿದ್ದ ಬನ್ನಿಕುಪ್ಪೆಯ ಬನ್ನಂತಮ್ಮ ಜಾತ್ರೆ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಸ್ಥಗಿತಗೊಂಡಿದ್ದ ಜಾತ್ರೆಗಳನ್ನು ಪುನರಾರಂಭಿಸಲು ಶ್ರಮ ಹಾಕಿದ್ದೇನೆ ಎಂದರು.
ಅಭಿವೃದ್ಧಿ ಕನಸು: ತಾಲೂಕಿನಲ್ಲಿ ಶಿಥಿಲಗೊಂಡಿದ್ದ ಸುಮಾರು 200ಕ್ಕೂ ಹೆಚ್ಚು ದೇವಾಲಯಗಳ ಜೀಣೋದ್ಧಾರಕ್ಕೆ ನೆರವಾಗಿದ್ದೇನೆ. ತಾಲೂಕಿನ ಸಮಗ್ರ ಅಭಿವೃದ್ಧಿಯೇ ತಮ್ಮ ಕನಸಾಗಿತ್ತು. ಮತ್ತಷ್ಟು ಅಭಿವೃದ್ಧಿಗೊಳಿಸುವ ಆಶಾಭಾವನೆ ಹೊಂದಿದ್ದೇನೆ. ನಿಮ್ಮ ಭಾಗದಲ್ಲಿ ಕೆಲಸ ಮಾಡಿರುವುದನ್ನು ಗುರುತಿಸಿ, ನನ್ನ ಗೆಲುವನ್ನು ಶ್ರೀಕಾರಗೊಳಿಸಿರೆಂದು ಮನವಿ ಮಾಡಿದರು.
ಜಿಪಂ ಮಾಜಿ ಸದಸ್ಯ ಮಂಜು ಮಾತನಾಡಿ, ಜೆಡಿಎಸ್‌ನಲ್ಲಿದ್ದ ಚಿಕ್ಕಮಾದು ಪುತ್ರ ಅನಿಲ್‌ಗೆ ನಂಬಿಸಿ ಜೆಡಿಎಸ್‌ನವರು ಟಿಕೆಟ್ ನೀಡದೆ ವಂಚಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಸಕ ಮಂಜುನಾಥ್ ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಿ ಆಶ್ರಯ ಕಲ್ಪಿಸಿದ್ದಾರೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಬಿಳಿಕೆರೆ ಮಂಜು ಮಾತನಾಡಿ, ಬರಗಾಲದ ಬೀಡಾಗಿದ್ದ ಈ ಭಾಗಕ್ಕೆ ನೀರು ಕಲ್ಪಿಸಿದ ಶಾಸಕರು ಆಧುನಿಕ ಭಗೀರಥರಾಗಿದ್ದು, ಜನತೆ ಒಮ್ಮತದಿಂದ ಮತ ಹಾಕುವ ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಿದರು.
ಮುಖಂಡರಾದ ಡೇರಿ ರಾಮಕೃಷ್ಣೇಗೌಡ, ಹಂದನಹಳ್ಳಿ ಸೋಮಶೇಖರ್, ರಾಜೇಶ್, ತಾಪಂ ಮಾಜಿ ಸದಸ್ಯ ಮಹದೇವ್ ಮಾತನಾಡಿದರು. ಶೇಖರೇಗೌಡ, ಲೋಕೇಶ್‌ವಿಶ್ವಕರ್ಮ, ಬಾಬು, ಆರ್.ರಾಜೇಶ್, ಬೈರನಾಯ್ಕ, ಕರಿಯಯ್ಯ, ಸುಬ್ಬಣ್ಣ ಸೇರಿದಂತೆ ಅನೇಕರಿದ್ದರು.