Advertisement

6 ತಿಂಗಳಲ್ಲಿ ಕೆರೆಗಳಿಗೆ ನೀರು: ಸುಧಾಕರ್‌

07:37 AM Feb 26, 2019 | Team Udayavani |

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆ ಭೂ ಸ್ವಾಧೀನ ವಿಳಂಬ ಮತ್ತಿತರ ಕಾರಣಗಳಿಂದ ಯೋಜನೆ ಅನುಷ್ಠಾನ ಕುಂಠಿತಗೊಂಡಿದೆ. ಈ ಭಾಗಕ್ಕೆ ಕನಿಷ್ಠ ಅಂತರ್ಜಲ ವೃದ್ಧಿಸಬೇಕೆಂಬ ನಿಟ್ಟಿನಲ್ಲಿ ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯನವರ ಮನವೊಲಿಸಿ ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೆಚ್‌ಎನ್‌ ವ್ಯಾಲಿ ಯೋಜನೆ ರೂಪಿಸಿದ್ದು, ಆರು ತಿಂಗಳೊಳಗೆ ನೀರು ಹರಿಯಲಿದೆ ಎಂದು ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು. 

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ 7 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಡಾ.ಕೆ.ಸುಧಾಕರ್‌, ಆರು ತಿಂಗಳೊಳಗೆ ಈ ಭಾಗದ ಕೆರೆಗಳಿಗೆ ಹೆಬ್ಟಾಳ, ನಾಗವಾರ ವ್ಯಾಲಿಯ ಸಂಸ್ಕರಿತ ನೀರು ತುಂಬಲಿದೆ ಎಂದರು.

ಜೆಡಿಎಸ್‌ ಮುಖಂಡರ ವಿರುದ್ಧ ಪರೋಕ್ಷ ಟೀಕೆ: ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಬಂದಿದ್ದರೆ ಆ ಶಕ್ತಿ ಬೇರೆ ತರ ಇರುತ್ತಿತ್ತು. ಆದರೆ ಇದು ಸಮ್ಮಿಶ್ರ ಸರ್ಕಾರ ಎಂದು ಒಪ್ಪಿಕೊಳ್ಳುವ ಅನಿರ್ವಾಯತೆ ನಮಗಿದೆ. ಹಿಂದೆ ಇದ್ದಷ್ಟು ಶಕ್ತಿ ಇಲ್ಲದಿದ್ದರೂ ಕೂಡ ಈ ಕ್ಷೇತ್ರಕ್ಕೆ ಏನು ಆಗಬೇಕೊ ಅದನ್ನು ಮಾಡಿಸಿಕೊಂಡು ಬರುವಷ್ಟು ಶಕ್ತಿಯನ್ನು ನೀವು ಕೊಟ್ಟಿದ್ದೀರಿ ಎಂದು ಪರೋಕ್ಷವಾಗಿ ಜೆಡಿಎಸ್‌ ಮುಖಂಡರ ವಿರುದ್ಧ ದೂರಿದರು. 

ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರದಲ್ಲಿ ಭಿನ್ನಮತ ಮಾಡಿಲ್ಲ. ಹಿಂದಿನ ಶಾಸಕರು ತಾರತಾಮ್ಯ ಮಾಡುತ್ತಿದ್ದರೆಂದು ಪರೋಕ್ಷವಾಗಿ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ವಿರುದ್ಧ ಕಿಡಿಕಾರಿದರು. ಅವರ ಕಾಲದಲ್ಲಿ ಯಾವುದೇ ಸಂಪರ್ಕ ರಸ್ತೆಗೆ ಡಾಂಬರೀಕರಣ ಆಗಲಿಲ್ಲ. ಒಂದು ಗ್ರಾಮಕ್ಕೆ ಪಶು ಆಸ್ಪತ್ರೆ ಸ್ಥಾಪನೆ ಆಗಲಿಲ್ಲ. ನಾವು ಐದು ವರ್ಷದಲ್ಲಿ ಕ್ಷೇತ್ರಕ್ಕೆ ಬೇಕಾದ ಅಗತ್ಯ ಮೂಲ ಸೌಕರ್ಯ ಒದಗಿಸಿದ್ದೇನೆ ಎಂದರು. 

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಶಾಸಕ ಡಾ.ಕೆ.ಸುಧಾಕರ್‌ ಕ್ಷೇತ್ರದ ನಂದಿ ಹೋಬಳಿ ಕುಪ್ಪಹಳ್ಳಿ ಗ್ರಾಪಂ ಅಂಗಟ್ಟ ಗ್ರಾಮದಿಂದ ನಂದಿ-ಕಾರಹಳ್ಳಿ ಮುಖ್ಯರಸ್ತೆವರೆಗೆ 800 ಮೀ.ಉದ್ದದ ರಸ್ತೆಗೆ 35 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್‌ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿ, ಚಿಕ್ಕಬಳ್ಳಾಪುರ ನಗರದಲ್ಲಿ 380 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಲೋಕೋಪಯೋಗಿ ಇಲಾಖೆಯ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. 

Advertisement

ಮಂಡಿಕಲ್‌ನಿಂದ ಶೆಟ್ಟಿಗೆರೆ, ದೊಡ್ಡಪೈಲಗುರ್ಕಿ ಮಾರ್ಗವಾಗಿ ಶಿಡ್ಲಘಟ್ಟ-ದಿಬ್ಬೂರಹಳ್ಳಿ ಸೇರುವ ರಸ್ತೆ ಸರಪಳಿ 21.0 ಕಿ.ಮೀ ನಿಂದ 22.0 ಕಿ.ಮೀ ವರೆಗೆ 104.27 ಲಕ್ಷ ವೆಚ್ಚದಲ್ಲಿ ಹಾಗೂ 22.0 ಕಿ.ಮೀ ನಿಂದ 22.85 ಕಿ.ಮೀ ವರೆಗೆ 80 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ದೊಡ್ಡಪೈಲಗುರ್ಕಿ ಗ್ರಾಪಂ  ರಾಮಗಾನಪರ್ತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 10.60 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ. 

ತಿಪ್ಪೇನಹಳ್ಳಿ ಗ್ರಾಪಂ ಕಣಜೇನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಎಸ್‌ಸಿಪಿ ಯೋಜನೆಯಡಿ 25 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ  ಚರಂಡಿ ನಿರ್ಮಾಣ ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿ ಕಾಮಗಾರಿ, ನಗರ ನಿಮ್ಮಾಕಲಕುಂಟೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 10.60 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ.

ಕೊಂಡೇನಹಳ್ಳಿ ಗ್ರಾಪಂ ಕಡಿಸೀಗೇನಹಳ್ಳಿ ಗ್ರಾಮದ ಸರ್ಕಾರಿ  ಪ್ರಾಥಮಿಕ ಶಾಲೆಯಲ್ಲಿ 10.60 ಲಕ್ಷ ವೆಚ್ಚದಲ್ಲಿ ನೂತನ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಸೇರಿ ಒಟ್ಟು 7 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ.ಕೆ.ಸುಧಾಕರ್‌ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಜಿಪಂ ಸದಸ್ಯರಾದ ಪಿ.ಎನ್‌.ಕೇಶವರೆಡ್ಡಿ, ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಕೋಚಿಮುಲ್‌ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್‌, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್‌.ರಮೇಶ್‌, ಹಾಪ್‌ಕಾಮ್ಸ್‌ ಮಾಜಿ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸ್‌, ಮುಖಂಡರಾದ ಜೆಸಿಬಿ ಮಂಜುನಾಥ್‌, ದೇವಿಶೆಟ್ಟಿಹಳ್ಳಿ ಗಂಗಾಧರ್‌, ಗರಿಗರೆಡ್ಡಿ, ತಾಪಂ ಸದಸ್ಯರಾದ ತಿರುಮಳಪ್ಪ, ಲೋಕೋಪಯೋಗಿ ಇಇ ಅಜಿತ್‌, ಎಇಇ ಚಂದ್ರಶೇಖರ್‌, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ತಾಪಂ ಇಒ ಕೆ.ಪಿ.ಸಂಜೀವಪ್ಪ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next