ಭೇರ್ಯ: ಮುಕ್ಕನಹಳ್ಳಿ ಕೆರೆಯಿಂದ ಭೇರ್ಯ ಭಾಗದ 22 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಿತ ಏತನೀರಾವರಿ ಯೋಜನೆಗೆ ಮುಂದಿನ ಹದಿನೈದು ದಿನದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.
ಸಮೀಪದ ಕುರುಬಹಳ್ಳಿ ಗ್ರಾಮದಲ್ಲಿ 4 ಲಕ್ಷ ರೂ.ವೆಚ್ಚದ ನೂತನ ಶ್ರೀಗಣಪತಿ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಈ ಯೋಜನೆಗೆ 6.50 ಕೋಟಿ ರೂ.ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದು ಹೇಳಿದರು.
ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ತಾನು ನಡೆಸಿದ ಪ್ರತಿಭಟನಾ ಧರಣಿಗೆ ಮಣಿದ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಈಗಾಗಲೇ ಹಾರಂಗಿ, ಹೇಮಾವತಿ ಜಲಾಶಯದ ನಾಲೆಗಳಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ಹೇಳಿದರು.
ತರಾಟೆ: ಹೇಮಾವತಿ ಎಡದಂಡೆ ನಾಲೆಯಿಂದ ಕೃಷ್ಣರಾಜನಗರ ತಾಲೂಕಿನ ಗುಳುವಿನಅತ್ತಿಗುಪ್ಪೆ ಭಾಗದ ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸುತ್ತಿಲ್ಲ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಹೇಮಾವತಿ ನಾಲಾ ವಿಭಾಗದ ಇಇ ಮೋಹನ್‌ರಾಜ್ ಅರಸ್‌ರನ್ನು ದೂರಾವಾಣಿ ಮೂಲಕ ಶಾಸಕರು ತರಾಟೆಗೆ ತೆಗೆದುಕೊಂಡರು.
ಜಲಾಶಯದ ಕೊನೆಭಾಗದಲ್ಲಿರುವ ತಾಲೂಕಿನ ಕೆರೆಗಳನ್ನು ಮೊದಲು ತುಂಬಿಸಿದ ಬಳಿಕವಷ್ಟೇ ನಿಮ್ಮ ಮಂತ್ರಿ ವ್ಯಾಪ್ತಿಯ ಅರಕಲಗೂಡು, ಹೊಳೆನರಸೀಪುರ ತಾಲೂಕಿನ ಕೆರೆಗಳನ್ನು ತುಂಬಿಸಬೇಕು ಎಂದು ಸೂಚಿಸಿದರು. ಬಳಿಕ ಶಾಸಕರು 1.50 ಕೋಟಿ ರೂ.ವೆಚ್ಚದ ಕುರುಬಹಳ್ಳಿ ಗೇಟ್-ಮೇಲೂರು ರಸ್ತೆ ಹಾಗೂ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ಮೇಲೂರು-ಸಂಕನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮಶೇಖರ್, ಎಪಿಎಂಸಿ ನಿರ್ದೇಶಕ ಕುಪ್ಪಳ್ಳಿ ಸೋಮು, ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷೆ ಗೌರಮ್ಮ, ಮುಖಂಡರಾದ ಚನ್ನಪ್ಪಾಜಿ, ಗೌತಮ್, ಲೋಕೋಪಯೋಗಿ ಎಇಇ ಪ್ರಸಾದ್, ಎಇ ಮುದ್ದಪ್ಪ, ಗ್ರಾಪಂ ಸದಸ್ಯೆ ಮಂಗಳಮ್ಮ, ಮಮತಾ, ಜೆಡಿಎಸ್ ಮುಖಂಡ ನರೇಂದ್ರ, ರಾಮಕೃಷ್ಣ, ನಾಟನಹಳ್ಳಿ ಮಂಜು, ಮೇಲೂರು ನಾರಾಯಣ್, ಕುರುಬಹಳ್ಳಿ ಮೇಲೂರು ಗ್ರಾಮಸ್ಥರು ಇದ್ದರು.