ಬೆಂಗಳೂರು: ತೀವ್ರ ನೀರಿನ ಅಭಾವದ ನಡುವೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳ ವೇಳೆ ಬಳಸುತ್ತಿರುವ ನೀರಿನ ಪ್ರಮಾಣದ ವಿವರಗಳನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಸಂಬಂಧಿಸಿದ ಇತರ ರಾಜ್ಯ ಅಧಿಕಾರಿಗಳನ್ನು ಕೇಳಿದೆ.
‘ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಪಂದ್ಯಗಳಿಗೆ ಶುದ್ಧೀಕರಿಸಿದ ನೀರು ಪೂರೈಕೆಯಾಗುತ್ತಿದೆ ಎಂಬ ವರದಿಗಳು ಹೊರಬಿದ್ದ ಹಿನ್ನೆಲೆಯಲ್ಲಿ ನ್ಯಾಯಮಂಡಳಿ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ.ಎ. ಸೆಂಥಿಲ್ ವೆಲ್ ಪ್ರಕರಣ ದಾಖಲಿಸಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಹೊರತಾಗಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಮೇ 2 ರೊಳಗೆ ನೀರಿನ ಪ್ರಮಾಣ ಮತ್ತು ಮೂಲದ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ NGT ಕೇಳಿದೆ.
“ನಾವು ಸೂಚನೆಯನ್ನು ಅಧ್ಯಯನ ಮಾಡುತ್ತಿದ್ದು, ಸ್ಟೇಡಿಯಂ ಎನ್‌ಜಿಟಿ ಮಾನದಂಡಗಳನ್ನು ಅನುಸರಿಸುತ್ತದೆ. ಹೀಗಾಗಿ, ಪಂದ್ಯಗಳನ್ನು ಮುಂದುವರಿಸುವ ವಿಶ್ವಾಸವಿದೆ” ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಿಇಒ ಶುಭೇಂದು ಘೋಷ್ ಹೇಳಿದ್ದಾರೆ.
ಸ್ಥಳದಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ನಡೆಸಲಾಗಿದೆ ಮತ್ತು ಆ ಪ್ರತಿಯೊಂದು ಆಟವು 75,000 ಲೀಟರ್ ಶುದ್ಧೀಕರಿಸಿದ ನೀರನ್ನು ಪಡೆದಿದೆ ಎಂದು ಅಂದಾಜಿಸಲಾಗಿದೆ. ಕ್ರೀಡಾಂಗಣದಲ್ಲಿ ಆರ್ ಸಿಬಿ ಏಪ್ರಿಲ್ 15ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ, ಮೇ 4ರಂದು ಗುಜರಾತ್ ಟೈಟಾನ್ಸ್ ವಿರುದ್ಧ, ಮೇ 12 ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮತ್ತು ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಾಲ್ಕು ಪಂದ್ಯಗಳನ್ನು ನಿಗದಿಪಡಿಸಲಾಗಿದೆ.
“ಪಂದ್ಯಗಳಿಗಾಗಿ ಸುಮಾರು 15000 ಲೀಟರ್ ನೀರು ಬೇಕಾಗಬಹುದು ಮತ್ತು ಅದನ್ನು STP ಸ್ಥಾವರದಿಂದ ಉತ್ಪಾದಿಸಬಹುದು” ಎಂದು ಘೋಷ್ ಈ ಹಿಂದೆ ಹೇಳಿದ್ದರು.ಆದಾಗ್ಯೂ, KSCA ಯ ಕೋರಿಕೆಯ ಮೇರೆಗೆ, ವಿಶೇಷವಾಗಿ ಹತ್ತಿರದ ಕಬ್ಬನ್ ಪಾರ್ಕ್ ಪ್ರದೇಶದಿಂದ ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರನ್ನು ಪೂರೈಸಲು BWSSB ಅನುಮತಿ ನೀಡಿದೆ ಎಂಬುದನ್ನು NGT ಗಮನಿಸಿದೆ.